ಅಜಾತಶತ್ರು ಎನ್.ತಿಪ್ಪಣ್ಣರ ಕೊಡುಗೆ ಅಪಾರ: ಈಶ್ವರ ಖಂಡ್ರೆ*
ಬಳ್ಳಾರಿ, ಆ.9: ಮಾಜಿ ಸಭಾಪತಿ ಲಿಂಗೈಕ್ಯ ಎನ್. ತಿಪ್ಪಣ್ಣ ಅವರು ನ್ಯಾಯವಾದಿಯಾಗಿ, ಸರ್ಕಾರಿ ಅಭಿಯೋಜಕರಾಗಿ, ಶಿಕ್ಷಣ ಪ್ರೇಮಿಯಾಗಿ, ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ಈ ನಾಡಿಗೆ ನೀಡಿರುವ ಕೊಡುಗೆ ಅಪಾರ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಬಳ್ಳಾರಿಯ ಕೆ.ಆರ್.ಎಸ್. ಸಭಾಂಗಣದಲ್ಲಿ ನಡೆದ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ತಿಪ್ಪಣ್ಣನವರು ಬಸವಾದಿ ಪ್ರಮಥರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಪಾಲಿಸುತ್ತಿದ್ದರು. ಅವರು ಸಾವಿರಾರು ಜನರ ಅನ್ನ ದಾಸೋಹ, ಜ್ಞಾನ ದಾಸೋಹಕ್ಕೆ ನೆರವಾಗಿದ್ದರು. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಸಮಾಜದ ಬಡ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿದ್ದರು ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ 3 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ 30ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಪ್ರಾರಂಭಕ್ಕೆ ಶ್ರಮಿಸಿದ್ದರು. ಈ ಮೂಲಕ ಶಿಕ್ಷಣ ರಂಗಕ್ಕೆ ಅವರು ನೀಡಿರುವ ಕೊಡುಗೆ ಅನುಪಮವಾದ್ದು ಎಂದು ಈಶ್ವರ ಖಂಡ್ರೆ ಹೇಳಿದರು..
ತಮ್ಮ ಪೂಜ್ಯ ತಂದೆ ಲಿಂಗೈಕ್ಯ ಲೋಕನಾಯಕ ಭೀಮಣ್ಣ ಖಂಡ್ರೆ ಅವರೊಂದಿಗೆ ವೀರಶೈವ ಲಿಂಗಾಯಿತ ಮಹಾಸಭಾದಲ್ಲಿ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ತಿಪ್ಪಣ್ಣನವರು ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳನ್ನೂ ಒಗ್ಗೂಡಿಸಲು ನಮ್ಮೆಲ್ಲರೊಂದಿಗೆ ಶ್ರಮಿಸಿದ್ದರು ಎಂದರು.
ಡಾ.ಎನ್. ತಿಪ್ಪಣ್ಣನವರು ಮಹಾನ್ ಸಾಧಕರಾಗಿದ್ದರು ತಮ್ಮ ವೃತ್ತಿ ಬದುಕಿನಲ್ಲಿ ಮತ್ತು ರಾಜಕೀಯ ರಂಗದಲ್ಲಿ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವಲ್ಲಿ, ನೊಂದವರಿಗೆ ನ್ಯಾಯಕೊಡಿಸುವಲ್ಲಿ ಹಾಗೂ ಶಿಕ್ಷಣ ವಂಚಿತರಿಗೆ ಶಿಕ್ಷಣ ದೊರಕಿಸುವಲ್ಲಿ ಅವರು ಶ್ರಮಿಸಿದ್ದಾರೆ. ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಅವರು ವಕೀಲರ ಕಲ್ಯಾಣ ನಿಧಿ ಸ್ಥಾಪಿಸಿದ್ದರು. ಇಂದಿಗೂ ವಕೀಲ ವೃತ್ತಿ ಮಾಡುವ ಬಂಧುಗಳು ಈ ಮಹಾನ್ ಕಾರ್ಯಕ್ಕಾಗಿ ಅವರನ್ನು ಸ್ಮರಿಸುತ್ತಾರೆ ಎಂದರು.
ಒಂದು ವರ್ಷದ ಅವಧಿಯಲ್ಲಿ ತಿಪ್ಪಣ್ಣನವರು, ಭೀಮಣ್ಣ ಖಂಡ್ರೆ ಹಾಗೂ ಶಾಮನೂರು ಶಿವಶಂಕರಪ್ಪ ಅವರು ನಮ್ಮನ್ನು ಅಗಲಿದ್ದು, ವೀರಶೈವ ಲಿಂಗಾಯತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಸಮಾಜದ ಬಗ್ಗೆ ಅವರಿಗಿದ್ದ ಕನಸು ಮತ್ತು ಆಕಾಂಕ್ಷೆಗಳನ್ನು ಪೂರ್ಣಗೊಳಿಸುವಂತಹ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷನಾಗಿ ತಾವು ಅದನ್ನು ಈಡೇರಿಸಲು ಶಕ್ತಿಮೀರಿ ಶ್ರಮಿಸುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠದ ಶ್ರೀ ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ, ಹಾಲಕೆರೆ ಕೊಟ್ಟೂರು ಸ್ವಾಮಿ ಮಠದ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ, ಶಾಸಕರುಗಳಾದ ಭರತ್ ರೆಡ್ಡಿ, ಮಾಜಿ ಸಚಿವ ಬಸವರಾಜ್ ಪಾಟೀಲ್ ಅನ್ವರಿ, ವಿಶ್ರಾಂತ ಉಪ ಲೋಕಾಯುಕ್ತ ಪತ್ರಿ ಬಸವನಗೌಡ, ವೀಣಾ ಕಾಶೆಪ್ಪನವರ್ ಮೊದಲಾದವರು ಪಾಲ್ಗೊಂಡಿದ್ದರು.
*ಲಿಂ.ಡಾ. ಎನ್. ತಿಪ್ಪಣ್ಣ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿ
RELATED ARTICLES

