ಕಳೆದುಹೋದ ಚಿನ್ನಾಭರಣ, ನಗದು, ಬೈಕ್ ಹಾಗೂ ಮೊಬೈಲ್ ಪತ್ತೆ: ವಾರಸುದಾರರಿಗೆ ಹಸ್ತಾಂತರ
ಆಂಜನೇಯ ಮಟ್ಟೂರು
ಕೊಪ್ಪಳ, ಜುಲೈ 20: ಕೊಪ್ಪಳ ಜಿಲ್ಲಾ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಕಳೆದುಹೋದ ಚಿನ್ನಾಭರಣ, ನಗದು, ದ್ವಿಚಕ್ರ ವಾಹನಗಳು (ಬೈಕ್) ಹಾಗೂ ಮೊಬೈಲ್ ಫೋನ್‌ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ಅವುಗಳನ್ನು ನೈಜ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕರಾದ (ಐಜಿಪಿ) ಶ್ರೀ ಪಿ.ಎಸ್. ಹರ್ಷ ಅವರು ಪತ್ತೆಯಾದ ಸಾಮಗ್ರಿಗಳನ್ನು ವಾರಸುದಾರರಿಗೆ ವಿತರಿಸಿ ಮಾತನಾಡಿ, ಸಾರ್ವಜನಿಕರ ಆಸ್ತಿ-ಪಾಸ್ತಿಗಳನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಹಿಂದಿರುಗಿಸುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದ್ದು, ಈ ಕಾರ್ಯದಲ್ಲಿ ಯಶಸ್ಸು ಸಾಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶೇಷವಾಗಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಶ್ರೀ ರಂಗಪ್ಪ ದೊಡ್ಡಮನಿ ಹಾಗೂ ಗಂಗಾವತಿ ಉಪವಿಭಾಗದ ಡಿವೈಎಸ್‌ಪಿ ಶ್ರೀ ನ್ಯಾಮಗೌಡ ಅವರ ನೇತೃತ್ವದಲ್ಲಿ ಪ್ರಕರಣಗಳ ತನಿಖೆ ನಡೆಸಿ ಕಳೆದುಹೋದ ಅಮೂಲ್ಯ ವಸ್ತುಗಳನ್ನು ಪತ್ತೆಹಚ್ಚಿದ ಕಾರ್ಯವನ್ನು ಐಜಿಪಿ ಶ್ರೀ ಪಿ.ಎಸ್. ಹರ್ಷ ಅವರು ವಿಶೇಷವಾಗಿ ಶ್ಲಾಘಿಸಿ ಅಭಿನಂದಿಸಿದರು.
ಕೊಪ್ಪಳ ಜಿಲ್ಲಾ ಪೊಲೀಸರ ಈ ಕಾರ್ಯಾಚರಣೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಜನಸ್ನೇಹಿ ಪೊಲೀಸ್ ಸೇವೆಗೆ ಉತ್ತಮ ಉದಾಹರಣೆಯಾಗಿದೆ.
ಸಾರ್ವಜನಿಕರು ಅಭಿನಂದನೆಗಳು ತಿಳಿಸಿದ್ದಾರೆ

