Monday, August 17, 2026
HomeUncategorizedಬರ ಪರಿಹಾರ ಕೊಡದಿದ್ದರೆ ರೈತರಿಂದ ಬಾರುಕೋಲು ಚಳವಳಿ-ನಡಹಳ್ಳಿ

ಬರ ಪರಿಹಾರ ಕೊಡದಿದ್ದರೆ ರೈತರಿಂದ ಬಾರುಕೋಲು ಚಳವಳಿ-ನಡಹಳ್ಳಿ

ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ಬರದಿಂದ ರಾಜ್ಯದ 79 ಲಕ್ಷ ರೈತ ಕುಟುಂಬ ಸಂಕಷ್ಟದಲ್ಲಿವೆ. ಆಡಳಿತದಲ್ಲಿರುವ ಜನಪ್ರತಿನಿಧಿಗಳು ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅಧ್ಯಯನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಬರ ಘೋಷಿಸಿ ಪರಿಹಾರ ಬಿಡುಗಡೆ ಮಾಡದಿದ್ದರೆ ರೈತರೊಂದಿಗೆ ಬಾರುಕೋಲು ಚಳವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಬಿದರಕುಂದಿ, ಬಸರಕೋಡ, ರೂಢಗಿ, ಢವಳಗಿ ಭಾಗದಲ್ಲಿ ಮಳೆ ಕೊರತೆಯಿಂದ ನಾಶವಾಗಿರುವ ಬೆಳೆಗಳನ್ನು ಬುಧವಾರ ಸಂಜೆ ರೈತಮುಖಂಡರೊಂದಿಗೆ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರೈತರನ್ನು ಕಾಪಾಡಲು ಡ್ಯಾಂಗಳಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಬೇಕು. ಇದರಿಂದ ದನಕರುಗಳಿಗೆ ಮೇವು, ಕುಡಿಯಲು ನೀರು ಸಿಗುವಂತಾಗಿ ರೈತರು ಸ್ವಲ್ಪಮಟ್ಟಿಗಾದರೂ ಉಸಿರಾಡಬಹುದು. ಮಂತ್ರಿಗಳು, ಶಾಸಕರು ಬೆಂಗಳೂರು ಬಿಟ್ಟು ಹಳ್ಳಿಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಅಧ್ಯಯನ ನಡೆಸಿ ಮಳೆ ಕೊರತೆ ಕುರಿತು ವರದಿ ಸಲ್ಲಿಸಬೇಕು ಎಂದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 2019ರಲ್ಲಿ ನೆರೆಹಾವಳಿ ಸಂತ್ರಸ್ತರಿಗೆ ರೂ 20000 ಕೋಟಿ ಪರಿಹಾರ ಕೊಟ್ಟಿದ್ದರು. ಕೆಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ನಿಯಮಾವಳಿ ಜೊತೆಗೆ ರಾಜ್ಯ ಸರ್ಕಾರದಿಂದಲೂ ರೂ 10000 ಹೆಚ್ಚಿನ ಪರಿಹಾರ ನೀಡಿ ಕೇವಲ 30 ದಿನಗಳಲ್ಲಿ ರೈತರ ಖಾತೆಗ ಜಮಾ ಮಾಡಲಾಗಿತ್ತು. ಆ ಕೆಲಸವನ್ನು ಈ ಸರ್ಕಾರ ಏಕೆ ಮಾಡುತ್ತಿಲ್ಲ. 25000 ರೂ ಪರಿಹಾರ ಕೊಡುವ ಯೋಗ್ಯತೆ ಇಲ್ಲವೆ ಎಂದು ಹರಿಹಾಯ್ದರು.

ಮುದ್ದೇಬಿಹಾಳದ ಶಾಸಕರು ಬರ ವೀಕ್ಷಣೆಗಾಗಿ ಢವಳಗಿಗೆ ಬಂದಾಗ ಸಜ್ಜೆ ಹೊಲಕ್ಕೆ ಹೋಗಿದ್ದರು. ರೈತರು, ಅಧಿಕಾರಿಗಳು ಸಜ್ಜೆ ಬೆಳೆ ಪೂರ್ತಿ ಹಾಳಾಗಿದೆ ಬರುವುದಿಲ್ಲ ಎಂದು ಹೇಳುತ್ತಿದ್ದರೂ ಶಾಸಕರು ನಾಕಾಣೆ ಭಾಗ ಬರುತ್ತದೆ, ತೇವಾಂಶ ಬಂದರೆ ಮತ್ತೇ ಚಿಗುರುತ್ತದೆ ಎಂದಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಪ್ರತಿ ಊರಲ್ಲಿ ದೊಡ್ಡ ಸ್ಕ್ರೀನ್ ಹಾಕಿ ಜನರಿಗೆ ತೋರಿಸುತ್ತೇನೆ. ರೈತರ ಪರ ಶಾಸಕರ ಮಾನಸಿಕ ಸ್ಥಿತಿ ಹೇಗಿದೆ ಎನ್ನುವುದಕ್ಕೆ ಇದು ಕನ್ನಡಿಯಾಗಿದೆ. ಕಾಟಾಚಾರಕ್ಕೆ ಶಾಸಕರು ಬೆಳೆ ವೀಕ್ಷಣೆ ಮಾಡಿದ್ದಾರೆ ಎಂದರು.

ಹೇಮರಡ್ಡಿ ಮೇಟಿ, ಶ್ರೀಶೈಲ ದೊಡಮನಿ ರೂಢಗಿ, ಚನಬಸಪ್ಪಗೌಡ ಪಾಟೀಲ, ಜಗದೀಶ ಪಂಪಣ್ಣವರ್, ಗಿರೀಶಗೌಡ ಪಾಟೀಲ ಹಿರೇಮುರಾಳ, ಸಂಗಮೇಶ ಹತ್ತಿ, ಸಂತೋಷ ಬಾದರಬಂಡಿ, ಮಂಜುನಾಥಗೌಡ ಪಾಟೀಲ, ರಾಮನಗೌಡ ಬಿರಾದಾರ, ಶಂಕ್ರಪ್ಪ ಸಜ್ಜನ. ಬಸವರಾಜ ಹಿರೇಕುರಬರ, ಬಾಬು ಅಂಗಡಿ, ಚಂದಪ್ಪ ಸರೂರ. ಅಕ್ರಂಸಾ ಮುಲ್ಲಾ, ಸಿದ್ದು ಚಲವಾದಿ, ಬಸಲಿಂಗಮ್ಮ ಮಂಕಣಿ, ಲಕ್ಷ್ಮೀಬಾಯಿ ಬಂಡಿ ಸೇರಿದಂತೆ ಆಯಾ ಭಾಗದ ನೊಂದ ರೈತರು ಇದ್ದರು.

ಸಜ್ಜೆ, ಹತ್ತಿ, ತೊಗರಿ, ಮೆಕ್ಕೆಜೋಳ ಸಂಪೂರ್ಣ ನಾಶವಾಗಿದೆ. ಎಷ್ಟೋ ರೈತರು ಹೊಲ ಹರಗಿದ್ದಾರೆ. ಸಾಲ ಸೋಲ ಮಾಡಿ ಬದುಕಲು ಪರದಾಡುತ್ತಿದ್ದಾರೆ. ಅನೇಕರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಡ ರೈತರು ಹೊಟ್ಟೆಪಾಡಿಗಾಗಿ ಕುಟುಂಬ ಸಮೇತ ಗುಳೆ ಹೋಗುವ ಸಿದ್ದತೆಯಲ್ಲಿದ್ದಾರೆ. ಮೆಕ್ಕೆ ಜೋಳವಂತೂ ಪೂರ್ತಿ ಹಾಳಾಗಿದ್ದು ತೆನೆಯಲ್ಲಿ ಹುಳ ಬೆಳೆದಿವೆ. ಇದನ್ನು ದನಗಳಿಗೆ ಮೇವಿನ ರೂಪದಲ್ಲಿ ತಿನ್ನಲು ಕೊಟ್ಟರೆ ಹೊಟ್ಟೆ ಉಬ್ಬರ ಬಂದು ಸತ್ತು ಹೋಗುತ್ತವೆ. ಕಬ್ಬು ಸಂಪೂರ್ಣವಾಗಿ ಬಿಳುಚು ಒಡೆಯುತ್ತಿದ್ದು ತೇವಾಂಶ ಕೊರತೆಯಿಂದ ಡೊಣ್ಣೆ ಹುಳುಗಳು ಬೆಳೆದು ಬೇರು ತಿಂದು ಹಾಕುತ್ತಿವೆ. ರೈತರ ಪರಿಸ್ಥಿತಿ ತೀರ ಗಂಭೀರವಾಗಿದೆ ಎಂದು ನಡಹಳ್ಳಿಯವರು ಬೆಳೆ ವೀಕ್ಷಣೆಯ ಸಂದರ್ಭ ಕಂಡುಬಂದ ಚಿತ್ರಣ ಬಿಡಿಸಿಟ್ಟರು.

ಉಸ್ತುವಾರಿ ಮಂತ್ರಿ ನಡೆಗೆ ರೈತರ ಆಕ್ರೋಶ:

ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲರನ್ನು ರೈತರಾದ ನಾವು ಅವರಿದ್ದಲ್ಲಿಗೆ ಹೋಗಿ ಬರ ಪರಿಸ್ಥಿತಿ ವಿವರಿಸಿ ನಮ್ಮ ಭಾಗಕ್ಕೆ ಬೆಳೆಹಾನಿ ವೀಕ್ಷಿಸಲು ಬರುವಂತೆ, ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಬಿಡಿಸುವಂತೆ ಮನವಿ ಸಲ್ಲಿಸಿದ್ದೆವು. ಮನವಿ ಸ್ವೀಕರಿಸಿದ ಸಚಿವರು ನಿಮ್ಮ ಎಂಎಲ್ಲೆಗೆ ನನಗೆ ಫೋನ್ ಮಾಡೋಕೆ ಹೇಳಿ ಎಂದರು. ನಮ್ಮ ಎಂಎಲ್ಲೆ ಅವರಿಗೆ ಫೋನ್ ಮಾಡೊಲ್ಲ, ಅವರು ಇಲ್ಲಿಗೆ ಬರೊಲ್ಲ. ಇವರಿಬ್ಬರ ರಾಜಕೀಯ ಜಗಳದ ನಡುವೆ ಬರದಿಂದ ಬಳಲುತ್ತಿರುವ ನಾವು ಸಾಯುತ್ತಿದ್ದೇವೆ. ಇದು ನಮ್ಮ ತಾಲೂಕಿನ ದುರಂತ ಎಂದು ಬಸರಕೋಡ, ರೂಢಗಿ, ಢವಳಗಿ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕಲಬುರ್ಗಿಯಂತೆ ಇಲ್ಲೂ ಪರಿಹಾರ ಕೊಡಲಿ:

ಕಲಬುರ್ಗಿ ಜಿಲ್ಲೆಯಲ್ಲಿ ಮುಂಗಾರು ವಿಫಲ ಹಿನ್ನೆಲೆ ಈಗಾಗಲೇ ಅಲ್ಲಿನ ರೈತರಿಗೆ ಶೇ.25ರಷ್ಟು ಪರಿಹಾರ ಬಿಡುಗಡೆ ಮಾಡಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಇದಿನ್ನೂ ಆಗಿಲ್ಲ. ಸಪ್ಟೆಂಬರನಲ್ಲಿ ಸಮೀಕ್ಷೆ ನಡೆಸಿ ನಂತರ ಪರಿಹಾರ ಬಿಡುಗಡೆ ಮಾಡುತ್ತೇವೆ ಎಂದು ಶಾಸಕರು ಹೇಳುತ್ತಾರೆ. ಕೃಷಿ ಅಧಿಕಾರಿಗಳು ಶೇ.25 ಪರಿಹಾರ ಕೊಡಲು ಬರುತ್ತದೆ ಎಂದರೂ ಶಾಸಕರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ. ರಾಜ್ಯ ಸರ್ಕಾರದವರು ಜಿಲ್ಲೆಯನ್ನು ಬರಪೀಡಿತ ಎಂದು ಮೊದಲು ಘೋಷಿಸಿ ಪ್ರತಿ ಎಕರೆಗೆ 25000 ರೂ ಪರಿಹಾರ ಕೊಡಲಿ. ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಕೊಡಬೇಕು. ನಂತರ ಕೇಂದ್ರದ ಹತ್ತಿರ ಬಿಜೆಪಿಯವರೂ ಸೇರಿ ಸರ್ವಪಕ್ಷಗಳ ನಿಯೋಗ ಹೋಗಿ ಪರಿಹಾರ ಪಡೆದುಕೊಂಡು ಬರೋಣ. ರಾಜ್ಯ ಸರ್ಕಾರ ಘೋಷಣೆ ಮಾಡದೆ ಕೇಂದ್ರ ಸರ್ಕಾರ ಏನನ್ನೂ ಮಾಡಲು ಬರುವುದಿಲ್ಲ ಎಂದು ನಡಹಳ್ಳಿಯವರು ವಾಸ್ತವ ಚಿತ್ರಣ ಬಿಡಿಸಿಟ್ಟರು.

ಬರದಿಂದ ಬಳಲುತ್ತಿರುವ ರೈತರ ನೆರವಿಗೆ ಧಾವಿಸಲು ಮುಖ್ಯಮಂತ್ರಿಯವರು ಶಾಸಕರ, ಮಂತ್ರಿಗಳ ಸಂಬಳ, ಭತ್ಯೆ, ವಿಶೇಷ ಭತ್ಯೆ, ನಿಗಮ ಮಂಡಳಿಗಳ ದುಂದುವೆಚ್ಚ, ಮಾಸಿಕ 700 ಕೋಟಿ ಗ್ಯಾರಂಟಿ ಖರ್ಚು ಕಡಿತಗೊಳಿಸಿ ರೈತರ ಖಾತೆಗೆ ಜಮಾ ಮಾಡುವ ಆದೇಶ ಹೊರಡಿಸಿ ಸ್ವಲ್ಪಮಟ್ಟಿಗಾದರೂ ರೈತರಿಗೆ ಸ್ಪಂಧಿಸಬೇಕು.

-ಎ.ಎಸ್.ಪಾಟೀಲ ನಡಹಳ್ಳಿ, ರಾಜ್ಯಾಧ್ಯಕ್ಷರು, ಬಿಜೆಪಿ ರೈತ ಮೋರ್ಚಾ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments