ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ತಾಲೂಕಿನ ಢವಳಗಿ, ತಾರನಾಳ, ಗುಡಿಹಾಳ, ಬಳವಾಟ, ಚೊಂಡಿ, ಮಡಿಕೇಶ್ವರ ಭಾಗದ ನೀರಿನ ಸಮಸ್ಯೆ ಬಗೆಹರಿಸಲು ಮುಳವಾಡ ಏತ ನೀರಾವರಿ ಮುಖ್ಯ ಕಾಲುವೆಯಿಂದ ಹೊರಡುವ ಅಂದಾಜು 500 ಮೀಟರ್ ಉದ್ದದ ಸಂಕನಾಳ ಶಾಖಾ ಕಾಲುವೆ ನಿರ್ಮಿಸಿ ರೈತರಿಗೆ, ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡುವಂತೆ ಆ ಭಾಗದ ರೈತರು ಆಗ್ರಹಿಸಿದ್ದಾರೆ.
ಬುಧವಾರ ಸಂಜೆ ಮಾಜಿ ಶಾಸಕ, ಬಿಜೆಪಿ ರೈತ ಮೊರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿಯವರು ಬೆಳೆ ಹಾನಿ ವೀಕ್ಷಿಸಲು ಬಂದಾಗ ವಸ್ತುಸ್ಥಿತಿ ವಿವರಿಸಿದ ರೈತರು, ಬೇಡಿಕೆ ಈಡೇರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸ್ಥಳೀಯ ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಮನವಿ ಸಲ್ಲಿಸಿದ್ದರೂ ಸ್ಪಂಧಿಸುತ್ತಿಲ್ಲವೆಂದು ಅಳಲು ತೋಡಿಕೊಂಡರು.
ಮುಖ್ಯ ಕಾಲುವೆಯಿಂದ ಮೂರು ಹೊಲಗಳಲ್ಲಿ ಉಪಕಾಲುವೆ ದಾಟಿಸಿದರೆ ಮುಂದಿನ ಭಾಗಗಳಿಗೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಶಾಸಕರು ಅಥವಾ ಸಚಿವರು ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ಒಂದು ಮಾತು ಹೇಳಿದರೆ ಸಾಕು ಕಾಲುವೆ ಅಗೆದು ನೀರು ಹರಿದು ಹೋಗಲು ಅವಕಾಶ ಮಾಡಿಕೊಡುತ್ತಾರೆ. ಆದರೆ ಇವರ್ಯಾರೂ ಅವರಿಗೆ ಹೇಳುತ್ತಿಲ್ಲ. ಈ ಭಾಗದಲ್ಲಿ ಅಂತರ್ಜಲಮಟ್ಟ ಬಹಳಷ್ಟು ಕುಸಿದು ಸಾಕಷ್ಟು ಸಮಸ್ಯೆ ಆಗಿದೆ. ಬರಗಾಲದ ಈ ಪರಿಸ್ಥಿತಿಯಲ್ಲಿ ಬದುಕುವುದೇ ಕಷ್ಟಕರವಾಗತೊಡಗಿದೆ. ಕಾಲುವೆ ಮೂಲಕ ನೀರು ಬಂದಲ್ಲಿ ಸ್ವಲ್ಪ ಮಟ್ಟಿಗಾದರೂ ಜೀವನ ನಡೆಸಬಹುದು ಎಂದರು.
ರೈತರ ಸಮಸ್ಯೆಗೆ ಸ್ಪಂಧಿಸಿದ ನಡಹಳ್ಳಿಯವರು, ಕಾಲುವೆ ಮೂಲಕ ರೂಢಗಿ, ತಾರನಾಳ, ಬಿದರಕುಂದಿ ಭಾಗದ ಚಕ್ ಡ್ಯಾಂ ತುಂಬಿಸಿದರೆ ದನಕರುಗಳಿಗೆ ನೀರು ಸಿಗುತ್ತದೆ. ಬೋರವೆಲ್, ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಹಿಂದಿನ ಅವಧಿಯಲ್ಲಿ ಶಾಸಕನಾಗಿದ್ದಾಗ ನಮ್ಮ ಸರ್ಕಾರದ ಮನವೊಲಿಸಿ ಕಾಲುವೆಗಳ ಮೂಲಕ ಕೆರೆ ತುಂಬಿಸಿದ್ದೆ. ಆಗ ಸಂಕನಾಳ ಉಪಕಾಲುವೆ ಆಗಿರಲಿಲ್ಲ. ಇದರಿಂದಾಗಿ ತಾರನಾಳ ಕೆರೆ ಹೊರತುಪಡಿಸಿ ಎಲ್ಲ ಕೆರೆ ತುಂಬಿಸಲಾಗಿತ್ತು. ಆದರೆ ಇವತ್ತು ಹಳ್ಳಿಗಳಲ್ಲಿ ಪ್ರವಾಸ ಮಾಡಿದಾಗ ಎಲ್ಲ ರೈತರು ನೀವಿದ್ದಾಗ ಕೆರೆ, ಕಾಲುವೆಗಳಿಗೆ ನೀರು ಬಿಟ್ಟಿದ್ದೀರಿ. ಈ ಸರ್ಕಾರ ಬಂದು ಮೂರು ವರ್ಷವಾದರೂ ನೀರು ಬಿಡ್ತಿಲ್ಲ. ಬರಗಾಲ ಬಂದರೂ ನೀರು ಬಿಡ್ತಿಲ್ಲ. ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ನೋವು ತೊಡಿಕೊಂಡಿರುವುದು ವಿಷಾಧಪಡುವಂಥದ್ದಾಗಿದೆ ಎಂದರು.
ಕಳೆದ ವಿಧಾನಸಭೆ ಅವಧಿಯ ಕೊನೇಯ ದಿನಗಳಲ್ಲಿ ಸಂಕನಾಳ ಶಾಖಾ ಕಾಲುವೆಯ ಕೆಲಸ ಆಗ ತಾನೇ ಪ್ರಾರಂಭವಾಗಿತ್ತು. ತಿಮ್ಮಾರೆಡ್ಡಿ ಎನ್ನುವ ಗುತ್ತಿಗೆದಾರ ಕೆಲಸ ಮಾಡಿರಲಿಲ್ಲ. ಆತನನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾಲುವೆ ಕೆಲಸವನ್ನು ಒಂದು ಹಂತಕ್ಕೆ ತರಲಾಗಿತ್ತು. ಚುನಾವಣೆ ಘೋಷಣೆಯಾಗಿದ್ದರಿಂದ ಕೆಲಸ ಮುಂದುವರೆಯಲಿಲ್ಲ. ಚುನಾವಣೆ ಮುಗಿದು 3 ವರ್ಷ ಕಳೆದರೂ ಉಪಕಾಲುವೆ ಕೆಲಸ ಒಂದಿಂಚೂ ಮುಂದೆ ಹೋಗಿಲ್ಲ. ರೈತರು ಸಹಕಾರ ಕೊಡಲು ಸಿದ್ದರಿದ್ದಾರೆ. 500 ಮೀಟರ್ ಕಾಲುವೆ ತೆಗೆದರೆ ನೇರವಾಗಿ ಹಳ್ಳಕ್ಕೆ ನೀರು ಹೋಗಿ ಢವಳಗಿ, ತಾರನಾಳ, ಗುಡಿಹಾಳ, ಬಳವಾಟ, ಚೊಂಡಿ, ಮಡಿಕೇಶ್ವರ ಭಾಗದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಅಂತರ್ಜಲ ಹೆಚ್ಚಾಗುತ್ತದೆ. ಆದರೆ ಈ ಬಗ್ಗೆ ನಿರ್ಲಕ್ಷ್ಯ ಧೋರಣೆಯಿಂದ ನಮ್ಮ ಜನರ ಹೊಟ್ಟೆ ಉರಿಯುತ್ತಿದೆ ಎಂದರು.
ಕುಡಿಯಲು ನೀರಿಲ್ಲ. ಬರಗಾಲದಿಂದ ಒಂದು ಕಾಳು ಬೆಳೆ ಸಿಗುವ ಪರಿಸ್ಥಿತಿಯೂ ಇಲ್ಲ. ಸಚಿವ, ಶಾಸಕರ ನಡುವಿನ ರಾಜಕೀಯ ತಿಕ್ಕಾಟಕ್ಕೆ ನಮ್ಮ ತಾಲೂಕು ನೀರಾವರಿ ಸೌಲಭ್ಯದಿಂದ ಹಿಂದುಳಿಯುವಂತಾಗಿದೆ. ಇದರಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಜನರಿಗೆ ನೀರು ಬೇಕು ಅದೇ ನನ್ನ ಉದ್ದೇಶ. ಕೆರೆ ತುಂಬಿಸಿ ನೀರು ಕೊಟ್ಟರೆ ಶಾಸಕರಿಗೆ ದೊಡ್ಡ ಸನ್ಮಾನ ಮಾಡುತ್ತೇವೆ. ಅಧಿಕಾರಿಗಳಿಗೆ ಈಗಾಗಲೇ ಮಾತನಾಡಿದ್ದೇನೆ. ಆದರೆ ಅವರು ಅಸಹಾಯಕರಾಗಿದ್ದಾರೆ. ಸಚಿವರಿಗೆ ಅರ್ಜಿ ಕೊಟ್ಟರೂ ಪರಿಗಣಿಸಿಲ್ಲ. ನಾನು ಈ ವಿಷಯವನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದರು.
ಶ್ರೀ ಘನಮಠೇಶ್ವರ ಸ್ವಾಮೀಜಿ, ತಾಪಂ ಮಾಜಿ ಸದಸ್ಯ ರಾಮನಗೌಡ ಬಿರಾದಾರ, ಗುರುನಾಥಗೌಡ ಬಿರಾದಾರ, ಜಗದೀಶ ಪಂಪಣ್ಣವರ್, ಗಿರೀಶಗೌಡ ಪಾಟೀಲ ಹಿರೇಮುರಾಳ, ಮಲ್ಲನಗೌಡ ಬಿರಾದಾರ, ಕಾಶಿನಾಥಗೌಡ ಕೊಣ್ಣೂರ, ವಿಜ್ಜುಗೌಡ ಪಾಟೀಲ, ಸೋಮನಗೌಡ ಅಡ್ಡೋಡಗಿ, ಪರುತಯ್ಯ ಮಠಪತಿ, ಬಸವರಾಜ ಅರ್ಜುಣಗಿ, ಅಣ್ಣಪ್ಪ ಹಡಗಲಿ, ಶಿವಪ್ಪ ಕುಂಟೋಜಿ, ಜಿ.ಎಸ್.ಕೋರಿ, ಅಪ್ಪುಗೌಡ ಕಡಕಲ್ಲ, ಸಿದ್ದು ಬಡದಾನಿ, ಸಂತೋಷ ಕೊಣ್ಣುರ, ಈರಯ್ಯ ಮಠಪತಿ, ಆನಂದಯ್ಯ ಮಠಪತಿ ಸೇರಿದಂತೆ ಢವಳಗಿ ಭಾಗದ ರೈತರು ಇದ್ದರು. ಇದಕ್ಕೂ ಮುನ್ನ ನಡಹಳ್ಳಿಯವರು ರೈತರೊಂದಿಗೆ ಬಸರಕೋಡ ಹತ್ತಿರ ಹಾಯ್ದುಹೋಗಿರುವ ಕಾಲುವೆಯ ದುಸ್ಥಿತಿ ವೀಕ್ಷಿಸಿದರು.
ಉಪಕಾಲುವೆ ನಿರ್ಮಿಸುವಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ ಅಸಹಕಾರ ಮುಂದುವರೆದಲ್ಲಿ ಢವಳಗಿ, ತಾರನಾಳ, ಬಳವಾಟ, ಗುಡಿಹಾಳ, ಚೊಂಡಿ, ಮಡಿಕೇಶ್ವರ ಭಾಗದ ರೈತರು ಒಪ್ಪಿಗೆ ಕೊಟ್ಟರೆ ನನ್ನದೇ ಸ್ವಂತ ಖರ್ಚಿನಲ್ಲಿ ಯಂತ್ರಗಳನ್ನು ಬಳಸಿ ಕಾಲುವೆ ತೋಡಿ ಅಧಿಕಾರಿಗಳ ಬೆನ್ನು ಹತ್ತಿ ನೀರು ಬಿಡಿಸುತ್ತೇನೆ.
-ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಶಾಸಕರು, ಮುದ್ದೇಬಿಹಾಳ.
ವಿದ್ಯುತ್ತಿಲ್ಲದೆ ಬಳಲುತ್ತಿರುವ ರೈತರು !
ರೂಢಗಿ ಗ್ರಾಮವ್ಯಾಪ್ತಿಯಲ್ಲಿ 800ಕ್ಕೂ ಹೆಚ್ಚು ಕುಟುಂಬದವರು ಹೊಲಗಳಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಸಂಜೆ 6 ರಿಂದ ಮರುದಿನ ಬೆಳಿಗ್ಗೆ 10 ಘಂಟೆಯವರೆಗೂ ವಿದ್ಯುತ್ ಪೂರೈಕೆ ಬಂದ್ ಆಗುವುದರಿಂದ ಇವರೆಲ್ಲರೂ ಕತ್ತಲೆಯಲ್ಲಿಯೇ ಹಾವು, ಚೇಳು ಇತ್ಯಾದಿ ವಿಷಜಂತುಗಳ ಭೀತಿಯಲ್ಲಿಯೇ ಕಾಲ ಕಳೆಯುವಂತಾಗಿದೆ. ಸೀಮೆ ಎಣ್ಣೆ ಬಂದ್ ಆಗಿದ್ದರಿಮದ ಒಳ್ಳೆಣ್ಣೆ ದೀಪದ ಬೆಳಕಿನಲ್ಲಿ ರಾತ್ರಿ ಚಟುವಟಿಕೆ ನಡೆಸುವ ದುಸ್ಥಿತಿ ಇದೆ. ರಾತ್ರಿ ವೇಳೆ ಕನಿಷ್ಠ ಸಿಂಗಲ್ ಫೇಸ್ ವಿದ್ಯುತ್ ಕೊಟ್ಟಲ್ಲಿ ಅನುಕೂಲ ಆಗುತ್ತದೆ ಎಂದು ಅನೇಕ ರೈತರು ನಡಹಳ್ಳಿಯವರ ಬಳಿ ಅಳಲು ತೋಡಿಕೊಂಡರು. ಸ್ಪಂಧಿಸಿದ ನಡಹಳ್ಳಿಯವರು ಹೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ಬೇಡಿಕೆ ಈಡೇರಿಸಿ ಸಹಕರಿಸುವಂತೆ ಕೋರಿದರು.

