Wednesday, October 28, 2026
Homeನಿಮ್ಮ ಜಿಲ್ಲೆಯಾರ್ಕ್ ವಿಶ್ವವಿದ್ಯಾಲಯದೊಂದಿಗೆ ಕರ್ನಾಟಕದ ಮಹತ್ವದ ಒಪ್ಪಂದ: ಸುಸ್ಥಿರತೆ, ತ್ಯಾಜ್ಯ ನಿರ್ವಹಣೆಗೆ ಜಂಟಿ ನಾವೀನ್ಯತಾ ಯೋಜನೆಗಳು –...

ಯಾರ್ಕ್ ವಿಶ್ವವಿದ್ಯಾಲಯದೊಂದಿಗೆ ಕರ್ನಾಟಕದ ಮಹತ್ವದ ಒಪ್ಪಂದ: ಸುಸ್ಥಿರತೆ, ತ್ಯಾಜ್ಯ ನಿರ್ವಹಣೆಗೆ ಜಂಟಿ ನಾವೀನ್ಯತಾ ಯೋಜನೆಗಳು – ಪ್ರಿಯಾಂಕ್ ಖರ್ಗೆ

ಬೆಂಗಳೂರು, ಅಕ್ಟೋಬರ್ 20: ಕರ್ನಾಟಕ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಯಾರ್ಕ್ ಹಾಗೂ ನಾರ್ತ್ ಯಾರ್ಕ್‌ಷೈರ್ ಪ್ರದೇಶಗಳ ನಡುವೆ ಸುಸ್ಥಿರತೆ, ಘನತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯದಿಂದ ಆರ್ಥಿಕ ಮೌಲ್ಯ ಸೃಷ್ಟಿಸುವ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಜಂಟಿ ನಾವೀನ್ಯತಾ ಕಾರ್ಯಕ್ರಮಗಳು, ಶ್ರೇಷ್ಠತಾ ಕೇಂದ್ರಗಳು (Centres of Excellence) ಹಾಗೂ ಪ್ರಾಯೋಗಿಕ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಯಾರ್ಕ್ ಮತ್ತು ನಾರ್ತ್ ಯಾರ್ಕ್‌ಷೈರ್ ಮೇಯರ್ ಡೇವಿಡ್ ಸ್ಕೈತ್ ಅವರೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಕರ್ನಾಟಕದ ಗ್ಲೋಬಲ್ ಇನ್ನೋವೇಶನ್ ಅಲಯನ್ಸ್ (GIA) ಈ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಮುಖ ವೇದಿಕೆಯಾಗಲಿದೆ. ಜಂಟಿ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಸರ್ಕಾರದಿಂದ ಸರ್ಕಾರಕ್ಕೆ (G2G) ಸಹಭಾಗಿತ್ವದ ಮೂಲಕ ಅಳೆಯಬಹುದಾದ ಫಲಿತಾಂಶಗಳನ್ನು ಸಾಧಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಸಭೆಯ ನಂತರ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಯುನೈಟೆಡ್ ಕಿಂಗ್‌ಡಮ್‌ನ ಯುನಿವರ್ಸಿಟಿ ಆಫ್ ಯಾರ್ಕ್ ನಡುವೆ ಸಹಕಾರದ ಉದ್ದೇಶ ಪತ್ರ (Letter of Intent – LoI) ಗೆ ಸಹಿ ಹಾಕಲಾಯಿತು.

ಈ ಒಡಂಬಡಿಕೆಯು ನಾವೀನ್ಯತೆ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ, ಉದ್ಯಮಶೀಲತೆ, ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶ ಹಾಗೂ ಶೈಕ್ಷಣಿಕ ಮತ್ತು ಕೈಗಾರಿಕಾ ಸಂಸ್ಥೆಗಳ ನಡುವಿನ ಸಹಭಾಗಿತ್ವವನ್ನು ವಿಸ್ತರಿಸಲು ಮಾರ್ಗಸೂಚಿಯಾಗಲಿದೆ. ಜೈವಿಕ ಆರ್ಥಿಕತೆ, ಸ್ವಚ್ಛ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಪ್ರಮುಖ ಸಹಕಾರದ ಕ್ಷೇತ್ರಗಳಾಗಿ ಗುರುತಿಸಲಾಗಿದೆ.

ಯಾರ್ಕ್ ಮತ್ತು ನಾರ್ತ್ ಯಾರ್ಕ್‌ಷೈರ್ ಪ್ರದೇಶಗಳು ಜೈವಿಕ ಆರ್ಥಿಕತೆ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಸುಸ್ಥಿರ ರಸಾಯನಶಾಸ್ತ್ರ, ಕೃಷಿ ನಾವೀನ್ಯತೆ ಹಾಗೂ ಸ್ವಚ್ಛ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿದ್ದು, ಕರ್ನಾಟಕವು ಜೈವಿಕ ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ, ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ಮತ್ತು ಎಂಜಿನಿಯರಿಂಗ್ ಪ್ರತಿಭೆಗಳ ಬಲಿಷ್ಠ ನೆಲೆಯನ್ನು ಹೊಂದಿದೆ. ಎರಡೂ ಪ್ರದೇಶಗಳ ಸಾಮರ್ಥ್ಯಗಳನ್ನು ಒಟ್ಟುಗೂಡಿಸುವ ಮೂಲಕ ಸಂಶೋಧನಾ ಫಲಿತಾಂಶಗಳನ್ನು ಪ್ರಾಯೋಗಿಕ ಪರಿಹಾರಗಳು ಮತ್ತು ವಾಣಿಜ್ಯ ಅವಕಾಶಗಳಾಗಿ ಪರಿವರ್ತಿಸಲು ಸಾಧ್ಯವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಸುಸ್ಥಿರತೆ, ಜಲ ಸಂಪನ್ಮೂಲ ನಿರ್ವಹಣೆ, ಸಾರಿಗೆ, ಭದ್ರತೆ ಹಾಗೂ ಪೊಲೀಸ್ ವ್ಯವಸ್ಥೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರದ ಅವಕಾಶಗಳ ಬಗ್ಗೆಯೂ ಚರ್ಚೆ ನಡೆಯಿತು.

ಮುಂದಿನ ಹಂತದಲ್ಲಿ ಸೀಮಿತ ಸಂಖ್ಯೆಯ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಿ, ಈ ಒಡಂಬಡಿಕೆಯನ್ನು ಜಂಟಿ ಪ್ರಾಯೋಗಿಕ ಯೋಜನೆಗಳು, ಸಂಶೋಧನಾ ಸಹಯೋಗ, ಸ್ಟಾರ್ಟ್‌ಅಪ್‌ಗಳ ನಡುವಿನ ಸಂಪರ್ಕ ಹಾಗೂ ತಂತ್ರಜ್ಞಾನಗಳ ವಾಣಿಜ್ಯೀಕರಣಕ್ಕೆ ಪೂರಕವಾದ ಕಾರ್ಯಚೌಕಟ್ಟಾಗಿ ರೂಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments