“ಪುಸ್ತಕಗಳು ಮನಸ್ಸನ್ನು ರೂಪಿಸುವ, ಜೀವನವನ್ನು ಬೆಳಗಿಸುವ ದೀಪಗಳು “
ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು.
“ದೇಶ ಸುತ್ತು, ಕೋಶ ಓದು” ಎಂಬ ಗಾದೆ ಮಾತು ನಮ್ಮ ಜೀವನಕ್ಕೆ ದಾರಿದೀಪವಾಗಬೇಕು. ಜಗತ್ತನ್ನು ಅರಿಯಲು ನಾವು ಎಲ್ಲೆಡೆ ಹೋಗಬೇಕಾಗಿಲ್ಲ; ಒಂದು ಪುಸ್ತಕದ ಪುಟಗಳು ನಮಗೆ ಅನಂತ ಲೋಕಗಳನ್ನು ಪರಿಚಯಿಸುತ್ತವೆ. ಅದಕ್ಕಾಗಿ ಪುಸ್ತಕ ಓದುವ ಹವ್ಯಾಸವು ಕೇವಲ ಕಾಲ ಕಳೆಯುವ ಸಾಧನವಲ್ಲ ಅದು ನಮ್ಮ ಚಿಂತನೆಗೆ, ವ್ಯಕ್ತಿತ್ವಕ್ಕೆ, ಬದುಕಿನ ದಿಕ್ಕಿಗೆ ಆಕಾರ ನೀಡುವ ಮಹತ್ವದ ಸಾಧನವಾಗಿದೆ.
ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಇಂದಿನ ತಂತ್ರಜ್ಞಾನ ಯುಗದಲ್ಲಿ ಇನ್ನಷ್ಟು ಅಗತ್ಯವಾಗಿದೆ. ಮೊಬೈಲ್, ಸಾಮಾಜಿಕ ಜಾಲತಾಣಗಳ ನಡುವೆ ನಮ್ಮ ಗಮನ ಚಿತ್ತಭಂಗವಾಗುತ್ತಿರುವ ಈ ಕಾಲದಲ್ಲಿ, ಪುಸ್ತಕಗಳು ಮಾತ್ರ ಮನಸ್ಸಿಗೆ ಏಕಾಗ್ರತೆ, ಶಾಂತಿ ಮತ್ತು ಆಳವಾದ ಚಿಂತನೆ ನೀಡುತ್ತವೆ.
ಗ್ರಂಥಾಲಯಗಳು ಜ್ಞಾನ ಭಂಡಾರಗಳು. ಅವುಗಳನ್ನು ಸದ್ಬಳಕೆ ಮಾಡಿಕೊಂಡು ನಾವು ನಮ್ಮ ತಿಳುವಳಿಕೆಯನ್ನು ವಿಸ್ತರಿಸಬಹುದು. ಒಂದು ಪುಸ್ತಕದೊಂದಿಗೆ ಕಳೆಯುವ ಸಮಯವು ನಮ್ಮ ಬದುಕಿನ ಅತ್ಯುತ್ತಮ ಹೂಡಿಕೆ. ಪುಸ್ತಕ ಅಧ್ಯಯನಕ್ಕೆ ವಯಸ್ಸಿನ ಮಿತಿ ಇಲ್ಲ. ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಓದಬಹುದು, ಕಲಿಯಬಹುದು, ಬೆಳೆಯಬಹುದು.
ಪ್ರತಿಯೊಂದು ಪುಸ್ತಕವೂ ಒಂದು ಗುರು, ಪ್ರತಿಯೊಂದು ಕಥೆಯೂ ಒಂದು ಪಾಠ, ಪ್ರತಿಯೊಂದು ಲೇಖನವೂ ಒಂದು ಅನುಭವ. ನಾವು ಓದುವ ಪುಸ್ತಕಗಳು ನಮ್ಮ ಚಿಂತನೆಗಳನ್ನು ರೂಪಿಸುತ್ತವೆ, ನಮ್ಮ ಚಿಂತನೆಗಳು ನಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತವೆ.
ಅಬಾಲವೃದ್ದರಾದಿಯಾಗಿ ಎಲ್ಲರಿಗೂ ಅತ್ಯಂತ ನಿಷ್ಠಾವಂತ ಸ್ನೇಹಿತ ಎಂದರೆ ಪುಸ್ತಕವೇ. ಅದು ಯಾವಾಗಲೂ ನಮ್ಮ ಜೊತೆಗೇ ಇರುತ್ತದೆ,ಸಂತೋಷದಲ್ಲೂ, ದುಃಖದಲ್ಲೂ, ಅನುಮಾನದಲ್ಲೂ, ನಿರೀಕ್ಷೆಯಲ್ಲೂ. ಒಂದು ಒಳ್ಳೆಯ ಪುಸ್ತಕ ಒಬ್ಬ ವ್ಯಕ್ತಿಯ ಬದುಕನ್ನೇ ಬದಲಿಸುವ ಶಕ್ತಿ ಹೊಂದಿದೆ. ಅದು ಹೊಸ ಕನಸುಗಳನ್ನು ಹುಟ್ಟಿಸುತ್ತದೆ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಬದುಕಿನ ದಿಕ್ಕನ್ನು ತೋರಿಸುತ್ತದೆ.
ನಾವು ದಿನಕ್ಕೆ ಕನಿಷ್ಠ ಕೆಲ ನಿಮಿಷಗಳಾದರೂ ಪುಸ್ತಕ ಓದುವುದನ್ನು ಜೀವನದ ಭಾಗವನ್ನಾಗಿ ಮಾಡೋಣ. ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸೋಣ, ಗ್ರಂಥಾಲಯಗಳಿಗೆ ಹೋಗುವ ಅಭ್ಯಾಸವನ್ನು ಬೆಳೆಸೋಣ. ಜ್ಞಾನವು ಬೆಳಕಾದರೆ, ಪುಸ್ತಕಗಳು ಆ ಬೆಳಕಿನ ಮೂಲ.
ಈ ವಿಶ್ವ ಪುಸ್ತಕ ದಿನದಂದು, “ಒಂದು ಪುಸ್ತಕ – ಒಂದು ಹೊಸ ಜೀವನ” ಎಂಬ ನಂಬಿಕೆಯನ್ನು ನಮ್ಮ ಮನಸ್ಸಿನಲ್ಲಿ ನೆಡೋಣ. ಓದೋಣ, ಕಲಿಯೋಣ, ಬೆಳೆಯೋಣ.
ಲೇಖನ –
ಆಂಜನೇಯ ಮಟ್ಟೂರು ಶಿಕ್ಷಕರು. ಗಂಗಾವತಿ.

