ಶೌಚಾಲಯದ ಗುತ್ತಿಗೆ ರದ್ದು, ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಭರವಸೆ
ಸುರಪುರ: ನಗರದ ಕೆಕೆಆರ್‌ಟಿಸಿ ಬಸ್ ನಿಲ್ದಾಣದ ಅವ್ಯವಸ್ಥೆ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ, ಯಾದಗಿರಿ ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ ರವೀಂದ್ರಕುಮಾರ ದಿಗ್ಗಿ ಅವರು ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸ್ವಚ್ಛತೆಯ ಕೊರತೆ, ಮೂಲಸೌಕರ್ಯಗಳ ಅಭಾವ ಮತ್ತು ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ವಿಶೇಷವಾಗಿ, ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೆ ಮಹಿಳೆಯರಿಂದ ₹10 ವಸೂಲಿ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಪ್ರಸ್ತುತ ಶೌಚಾಲಯದ ಗುತ್ತಿಗೆ ರದ್ದುಪಡಿಸಿ ಹೊಸ ಟೆಂಡರ್ ಕರೆಯುವುದು, ಮಹಿಳೆಯರಿಗೆ ಉಚಿತ ಮೂತ್ರ ವಿಸರ್ಜನೆಗೆ ಅವಕಾಶ ಕಲ್ಪಿಸುವುದು, ಸಿಸಿ ಕ್ಯಾಮೆರಾ ಅಳವಡಿಸುವುದು, ಖಾಸಗಿ ವಾಹನಗಳ ಸಂಚಾರ ನಿಯಂತ್ರಿಸುವುದು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಅಧ್ಯಕ್ಷ ಸಚಿನ್ ಕುಮಾರ ನಾಯಕ, ಜಯ ಕರ್ನಾಟಕ ರಕ್ಷಣಾ ಸೇನೆಯ ತಾಲೂಕು ಕಾರ್ಯಾಧ್ಯಕ್ಷ ಶಿವರಾಜ ವಗ್ಗರ್, ಭೀಮಾಶಂಕರ, ಶೇಖರ ಪ್ಯಾಪ್ಲಿ, ಹಣಮಂತ ಬಂಡಾರಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಕೇವಲ ಭರವಸೆ ನೀಡುವುದಕ್ಕೆ ಸೀಮಿತವಾಗದೆ, ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ, ನೀಡಿರುವ ಭರವಸೆಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

