ಕೆ.ಆರ್.ಪುರ: ವಿಶ್ವ ಹೃದಯ ದಿನದ ಅಂಗವಾಗಿ ಹೃದಯದ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೆಡಿಕವರ್ ಆಸ್ಪತ್ರೆ ವತಿಯಿಂದ ಲವ್ ಯುವರ್ ಹಾರ್ಟ್ 2.0’ ವಾಕಥಾನ್ ಆಯೋಜಿಸಲಾಗಿತ್ತು.
ಮೆಡಿಕವರ್ ಆಸ್ಪತ್ರೆಯಿಂದ ಆರಂಭಗೊಂಡ ವಾಕಥಾನ್ ನೆಕ್ಸಸ್ ಶಾಂತನುಕೇತನ್ ಮಾಲ್ ವರೆಗೆ ಸಾಗಿತು. ಮೆಡಿಕವರ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ, ನಿಯಮಿತ ನಡಿಗೆ, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಹಿರಿಯ ವೈದ್ಯರು, ವೈಟ್ ಫೀಲ್ಡ್ ಮತ್ತು ಹೂಡಿ ಭಾಗದ ಹಲವು ಅಪಾರ್ಟ್ ಮೆಂಟ್ ನಿವಾಸಿಗಳು, ಹಲವು ಸಂಘಟನೆಗಳು ಮತ್ತು ವಿದ್ಯಾರ್ಧಿಗಳು ಭಾಗಿಯಾಗಿದ್ರು.
ಈ ಸಂದರ್ಭದಲ್ಲಿ ಮಾತನಾಡಿದ ಮೆಡಿಕವರ್ ಆಸ್ಪತ್ರೆಯ ಪ್ರಾದೇಶಿಕ ನಿರ್ದೇಶಕ ಶ್ರೀ ಸಿದ್ದರೆಡ್ಡಿ ಅವರು,
“ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಪ್ರತಿದಿನದ ಬದುಕಿನ ಭಾಗವಾಗಿಸಿಕೊಳ್ಳಬೇಕು. ನಿಯಮಿತ ನಡಿಗೆ ಹಾಗೂ ದೈಹಿಕ ಚಟುವಟಿಕೆ, ಸಮತೋಲಿತ ಆಹಾರ, ಒತ್ತಡ ನಿಯಂತ್ರಣ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳು ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯ. ‘Medicover Love Your Heart 2.0’ ವಾಕಥಾನ್ ಮೂಲಕ ಜನರಲ್ಲಿ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕಾಗಿ ಸಕ್ರಿಯವಾಗಿ ಹೆಜ್ಜೆ ಇಡಬೇಕು ಎಂಬ ಸಂದೇಶವನ್ನು ನೀಡುತ್ತಿದ್ದೇವೆ,” ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಭಾರತೀಯ ಅಂಧರ ಕ್ರಿಕೆಟ್ ತಂಡದ ಕೋಚ್ ಡಾ. ಪ್ಯಾಟ್ರಿಕ್ ರಾಜ್ಕುಮಾರ್ ಅವರು ಮಾತನಾಡಿ,
“ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳು ದೇಹವನ್ನು ಮಾತ್ರವಲ್ಲದೆ ಒಟ್ಟಾರೆ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತವೆ. ಪ್ರತಿದಿನದ ಜೀವನದಲ್ಲಿ ನಡಿಗೆಯಂತಹ ಸರಳ ದೈಹಿಕ ಚಟುವಟಿಕೆಯನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಸಾಧ್ಯ. ಆರೋಗ್ಯಕರ ಹೃದಯಕ್ಕಾಗಿ ಜನರು ಸಕ್ರಿಯ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಮೆಡಿಕವರ್ ಆಸ್ಪತ್ರೆಯ ಈ ವಾಕಥಾನ್ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಪ್ರಯತ್ನವಾಗಿದೆ,” ಎಂದು ಹೇಳಿದರು.
ವಾಕಥಾನ್ನಲ್ಲಿ ಭಾಗವಹಿಸಿದವರು “Walk • Raise Awareness • Protect Your Heart – ನಡೆಯಿರಿ • ಜಾಗೃತಿ ಮೂಡಿಸಿ • ನಿಮ್ಮ ಹೃದಯವನ್ನು ರಕ್ಷಿಸಿ” ಎಂಬ ಸಂದೇಶವನ್ನು ಸಾರಿದರು.
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತ ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಪದ್ಧತಿ, ಧೂಮಪಾನದಿಂದ ದೂರವಿರುವುದು, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಹಾಗೂ ಅಗತ್ಯವಿದ್ದಾಗ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯವಾಗಿದೆ.

