Monday, October 26, 2026
Homeನಿಮ್ಮ ಜಿಲ್ಲೆರತ್ನಾಕರನಿಂದ ಮಹರ್ಷಿಯಾದ ವಾಲ್ಮೀಕಿಯವರ ಬದುಕು ಎಲ್ಲರಿಗೂ ಆದರ್ಶ: ಶಿವಲೀಲಾ ಬೂಟಾಳಿ

ರತ್ನಾಕರನಿಂದ ಮಹರ್ಷಿಯಾದ ವಾಲ್ಮೀಕಿಯವರ ಬದುಕು ಎಲ್ಲರಿಗೂ ಆದರ್ಶ: ಶಿವಲೀಲಾ ಬೂಟಾಳಿ

ಅಥಣಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆ

ಅಥಣಿ: ಮಹರ್ಷಿ ವಾಲ್ಮೀಕಿ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಇಡೀ ಮಾನವ ಕುಲಕ್ಕೆ ದಾರಿದೀಪವಾಗಿರುವ ಮಹಾನ್ ಋಷಿಯಾಗಿದ್ದು, ಅವರ ಧರ್ಮ, ಸಂಸ್ಕೃತಿ, ಸಂಸ್ಕಾರ, ಪ್ರೀತಿ ಹಾಗೂ ರತ್ನಾಕರನಿಂದ ಮಹರ್ಷಿಯಾಗುವವರೆಗಿನ ಜೀವನದ ಹಾದಿ ಎಲ್ಲರಿಗೂ ಆದರ್ಶವಾಗಿದೆ ಎಂದು ಅಥಣಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ ಹೇಳಿದರು.

ಅಥಣಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಥಣಿ ಇವರ ಸಂಯುಕ್ತ ಆಶ್ರಯದಲ್ಲಿ ವಾಲ್ಮೀಕಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ವಾಲ್ಮೀಕಿ ಜಯಂತಿ ಕೇವಲ ಒಂದು ಜಾತಿಯ ಹಬ್ಬವಲ್ಲ. ಇದು ಸಾಹಿತ್ಯದ ಹಬ್ಬ, ಸಂಸ್ಕಾರದ ಹಬ್ಬವಾಗಿದೆ. ಮಹರ್ಷಿ ವಾಲ್ಮೀಕಿಯವರ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಆರಂಭದಲ್ಲಿ ರತ್ನಾಕರ ಎಂಬ ಹೆಸರಿನ ವಾಲ್ಮೀಕಿಯವರು ಕುಟುಂಬದ ಜೀವನ ನಿರ್ವಹಣೆಗಾಗಿ ದಾರಿಯಲ್ಲಿ ಹೋಗುವವರನ್ನು ಲೂಟಿ ಮಾಡುತ್ತಿದ್ದರು. ಒಂದು ದಿನ ಸಪ್ತರ್ಷಿಗಳು, ತಾನು ಮಾಡುತ್ತಿರುವ ಪಾಪದಲ್ಲಿ ಕುಟುಂಬದವರು ಪಾಲುದಾರರಾಗುತ್ತಾರೆಯೇ ಎಂದು ವಿಚಾರಿಸುವಂತೆ ತಿಳಿಸಿದಾಗ, ಕುಟುಂಬದವರು ಪಾಪದ ಪಾಲುದಾರರಾಗುವುದಿಲ್ಲ ಎಂಬ ಸತ್ಯ ಅವರಿಗೆ ಅರಿವಾಯಿತು.

ನಂತರ ನಾರದ ಮಹರ್ಷಿಗಳ ಉಪದೇಶದಂತೆ ‘ಮರಾ ಮರಾ’ ಎಂದು ಜಪಿಸುತ್ತಾ ತಪಸ್ಸಿನಲ್ಲಿ ನಿರತರಾದರು. ಕಾಲಕ್ರಮೇಣ ಅದೇ ‘ರಾಮ ರಾಮ’ ಎಂಬ ನಾಮಸ್ಮರಣೆಯಾಗಿ, ಹುತ್ತ ಬೆಳೆದರೂ ತಪಸ್ಸು ಮುಂದುವರಿಸಿ ಮಹರ್ಷಿ ವಾಲ್ಮೀಕಿಯಾದರು. ಒಬ್ಬ ವ್ಯಕ್ತಿ ಬಯಸಿದರೆ ತನ್ನ ಕೆಟ್ಟ ಗುಣಗಳನ್ನು ತ್ಯಜಿಸಿ ಮಹಾನ್ ವ್ಯಕ್ತಿಯಾಗಬಹುದು ಎಂಬುದಕ್ಕೆ ವಾಲ್ಮೀಕಿಯವರೇ ಸಾಕ್ಷಿಯಾಗಿದ್ದಾರೆ ಎಂದು ವಿವರಿಸಿದರು.

ಅವರು ರಚಿಸಿದ ರಾಮಾಯಣ ಕೇವಲ ಕಥೆಯಲ್ಲ, ಬದುಕನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿಸುವ ಮಹಾಕಾವ್ಯವಾಗಿದೆ. ರಾಮನ ಆದರ್ಶ ವ್ಯಕ್ತಿತ್ವ, ಸೀತೆಯ ಪಾತಿವ್ರತ್ಯ, ಲಕ್ಷ್ಮಣನ ತ್ಯಾಗ ಹಾಗೂ ಹನುಮಂತನ ಸೇವಾ ಮನೋಭಾವವನ್ನು ರಾಮಾಯಣ ಅದ್ಭುತವಾಗಿ ಚಿತ್ರಿಸಿದೆ. ಸುಮಾರು 24 ಸಾವಿರ ಶ್ಲೋಕಗಳನ್ನು ಒಳಗೊಂಡ ರಾಮಾಯಣವನ್ನು ಜಗತ್ತಿಗೆ ನೀಡಿದ ಆದಿಕವಿ ವಾಲ್ಮೀಕಿಯವರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಮಕ್ಕಳಿಗೆ ರಾಮಾಯಣದ ನೀತಿಕಥೆಗಳನ್ನು ತಿಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಶಿಂಗೆ ಹಾಗೂ ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ ಮಾತನಾಡಿದರು.

ಉಪನ್ಯಾಸ ನೀಡಿದ ಟಿ.ಎಸ್. ಒಂಟಗುಡಿ ಅವರು, ವಾಲ್ಮೀಕಿಯವರ ಮೂಲ ಹೆಸರು ರತ್ನಾಕರ. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ದ ಮಹಾನ್ ವ್ಯಕ್ತಿಗಳಲ್ಲಿ ವಾಲ್ಮೀಕಿಯವರು ಪ್ರಮುಖರು. ಅವರು ರಾಮಭಕ್ತರಾಗಿದ್ದು, ಇಡೀ ವಿಶ್ವಕ್ಕೆ ಮೋಹಕ ಕಾವ್ಯವಾದ ರಾಮಾಯಣವನ್ನು ನೀಡಿದ್ದಾರೆ ಎಂದು ಹೇಳಿದರು.

ಮಹಾತ್ಮ ಗಾಂಧೀಜಿಯವರು ಭಾರತವನ್ನು ರಾಮರಾಜ್ಯವನ್ನಾಗಿಸುವ ಕನಸು ಕಂಡಿದ್ದರು. ರಾಮರಾಜ್ಯ ಎಂದರೆ ಸುಖ, ಶಾಂತಿ ಹಾಗೂ ಸಮೃದ್ಧಿಯಿಂದ ಕೂಡಿದ ರಾಜ್ಯ. ಆದರೆ, ಇಂದಿನ ಸಮಾಜದಲ್ಲಿ ಕೊಲೆ, ಸುಲಿಗೆ ಹಾಗೂ ಅತ್ಯಾಚಾರಗಳಂತಹ ಘಟನೆಗಳು ಹೆಚ್ಚುತ್ತಿರುವುದನ್ನು ನೋಡಿದರೆ ಗಾಂಧೀಜಿಯವರ ರಾಮರಾಜ್ಯದ ಕನಸು ಇನ್ನೂ ನನಸಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶುರಾಮ ಪತ್ತಾರ ಸ್ವಾಗತಿಸಿದರು. ಸಂಗಮೇಶ ಹಚಡದ ಅವರು ಅತಿಥಿ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಸಮಾಜದ ಮುಖಂಡರಿಗೆ ಸ್ಥಾನ ನೀಡದಿರುವುದಕ್ಕೆ ಆಕ್ಷೇಪ

ಕಾರ್ಯಕ್ರಮದ ವೇದಿಕೆಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರಿಗೆ ಸೂಕ್ತ ಸ್ಥಾನ ನೀಡಿಲ್ಲ ಎಂದು ಸಮಾಜದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪರಶುರಾಮ ಪತ್ತಾರ ಅವರೊಂದಿಗೆ ವಾಗ್ವಾದ ನಡೆಸಿದ ಮುಖಂಡರು, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಉಪತಹಸೀಲ್ದಾರ್ ಮಹಾದೇವ ಬಿರಾದಾರ, ಸಿದ್ಧಾರ್ಥ ಶಿಂಗೆ, ಬಸವರಾಜ ನಾಯಿಕ, ಮಲ್ಲಿಕಾರ್ಜುನ ಮಗದುಮ್, ಎಂ.ಆರ್. ಮುಂಜಿ, ರಾಮಗೊಂಡ ಪಾಟೀಲ, ವೆಂಕಟೇಶ ಕುಲಕರ್ಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕೊನೆಗೆ ಕಾರ್ಯಕ್ರಮವನ್ನು ಒಗೆಪ್ಪ ಆರ್ಟಾಳ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments