ವಿಧಾನಸೌಧಕ್ಕೂ ಪ್ರವೇಶಿಸಿದ ಗೂಂಡಾಗಿರಿ- ಟೀಕೆ
ಬೆಂಗಳೂರು: ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ದಬಾಯಿಸಿ, ಒತ್ತಡ ಹೇರಿ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಬಸವರಾಜ ಹೊರಟ್ಟಿ ಅವರನ್ನು ಇಂದು ಭೇಟಿ ಮಾಡಿದ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಹೊರಟ್ಟಿ ಅವರು ಅಧಿಕಾರದಲ್ಲಿ ಇರುವಾಗಲೇ ಬೇರೊಬ್ಬರನ್ನು ನಾಮಕರಣ ಮಾಡಿ, ಪಕ್ಷದ ಲೆಟರ್ಹೆಡ್ನಲ್ಲಿ ಕಳಿಸಿದ್ದರು.
ಇದೀಗ ಒತ್ತಡದಿಂದ ರಾಜೀನಾಮೆ ಪಡೆದಿದ್ದು, ಇದು ಕೌನ್ಸಿಲ್ ನಿಯಮಾವಳಿಗೆ ವಿರುದ್ಧವಾದುದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿನವರಿಗೆ ತಕ್ಕ ಬುದ್ಧಿ ಕಲಿಸುವ ವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪ್ರಕಟಿಸಿದರು.
ಹೊರಟ್ಟಿ ಅವರು ಬಹಳ ನೋವಿನಿಂದ ಕುಳಿತಿದ್ದಾರೆ. ರಾಜೀನಾಮೆ ಕೊಟ್ಟ ಕುರಿತು ಮಾಧ್ಯಮಗಳಲ್ಲಿ ತಿಳಿದುಬಂದ ಬಗ್ಗೆ ಪ್ರಶ್ನಿಸಿದೆವು. ‘ನನಗೆ ಬೇರೆ ಮಾರ್ಗವೇ ಇರಲಿಲ್ಲ; ಮೇಲ್ಮನೆಯ ಸುಮಾರು 20- 25 ಶಾಸಕರು ಬಂದು ದಬಾಯಿಸಿ ಮುಖ್ಯಮಂತ್ರಿಯವರು ಪಿಎಸ್ ಅವರ ಕಡೆಯಿಂದ ಲೆಟರ್ಹೆಡ್ ತರಿಸಿ ಅವರೇ ಟೈಪ್ ಮಾಡಿಸಿ ಸಹಿ ಹಾಕಿಸಿಕೊಂಡರು. ಕೆಪಿಸಿಸಿ ಅಧ್ಯಕ್ಷರು, ಸಲೀಂ ಅಹ್ಮದ್, ರಮೇಶ್ ಬಾಬು ಮತ್ತಿತರರು ಬಂದು ಒಂದು ನಿಮಿಷ ಉಸಿರಾಡಲೂ ಬಿಟ್ಟಿಲ್ಲ’ ಎಂದಿದ್ದಾಗಿ ವಿವರಿಸಿದರು.
‘ನನಗೆ ಬೇರೆ ಮಾರ್ಗ ಇರಲಿಲ್ಲ. ನಾನು ಬಹಳ ನೋವಿನಿಂದ ಸಹಿ ಹಾಕಿ ಕೊಟ್ಟಿದ್ದೇನೆ’ ಎಂದು ಹೇಳಿದ್ದಾಗಿ ತಿಳಿಸಿದರು. ‘ಗಾಯತ್ರಿ ಅವರ ಪದಗ್ರಹಣ ಇತ್ತು. ಇವರು ಆ ಸಂಬಂಧ ತೆರಳಿದ್ದರು. ಸುಮಾರು 2 ತಾಸುಗಳ ಕಾಲ ಇವರ ಕಚೇರಿಗೆ ನುಗ್ಗಿ ದಬಾವಣೆ ಮಾಡಿ ಒತ್ತಡದ ಮೂಲಕ ಸಹಿ ಪಡೆಯಲಾಗಿದೆ’ ಎಂದು ದೂರಿದರು. ಇದು ಕಾಂಗ್ರೆಸ್ ನೀತಿಯನ್ನು ಎತ್ತಿ ತೋರಿಸಿದೆ; ಗೂಂಡಾಗಿರಿ ಎಲ್ಲಿಯವರೆಗೆ ಪ್ರವೇಶ ಮಾಡಿದೆ ಎಂಬುದು ಈಗ ಅರ್ಥವಾಗುತ್ತಿದೆ ಎಂದು ಟೀಕಿಸಿದರು.
ಹಾದಿಬೀದಿಯಲ್ಲಿದ್ದ ಗೂಂಡಾಗಿರಿ ವಿಧಾನಸೌಧದ ಮೆಟ್ಟಿಲೇರಿತ್ತು. ಈಗ ಅದು ಸಭಾಪತಿಯವರ ಚೇಂಬರ್ಗೂ ಬಂದಿದೆ. ಈ ರಾಜ್ಯದಲ್ಲಿ ಇನ್ನೇನು ಉಳಿದಿದೆ? ಜನ ಈ ರಾಜ್ಯದಲ್ಲಿ ಇನ್ನು ಹೇಗೆ ಬದುಕಬೇಕು? ಎಂದು ಕೇಳಿದರು.
ಅವರನ್ನೇ ಹಂಗಾಮಿಯನ್ನಾಗಿ ಮಾಡಿ ಅವರ ಬೆರಳನ್ನೇ ಅವರ ಕಣ್ಣಿಗೆ ಚುಚ್ಚುವ ಬುದ್ಧಿವಂತಿಕೆ ಮಾಡಿದ್ದಾರೆ. ನಾವೆಲ್ಲರೂ ನಿಮ್ಮ ಜೊತೆಗೆ ಇದ್ದೇವೆ ಎಂಬ ಬೆಂಬಲದ ಮಾತನಾಡಿದ್ದೇವೆ. ‘ಹಂಗಾಮಿ ಹುದ್ದೆ ಬೇಕಾಗಿಲ್ಲ; ನನಗೆ ಬಹಳ ನೋವಾಗಿದೆ; ನಾನು ಮಾನ್ಯ ಗವರ್ನರ್ ಅವರಿಗೆ ಪತ್ರವನ್ನು ಕಳುಹಿಸಿದ್ದೇನೆ’ ಎಂಬ ಮಾತನ್ನೂ ಹೇಳಿದರು. ಇದನ್ನು ನಾವು ಇಲ್ಲಿಗೇ ಬಿಡಲು ಸಾಧ್ಯವಿಲ್ಲ. ಇದು ಅವರಿಗೆ ಮಾತ್ರ ಆದ ಅಪಮಾನವಲ್ಲ; ಸದಸ್ಯರಿಗೆ ಮಾತ್ರ ಆದ ಅಪಮಾನವಲ್ಲ; ಇದು ಇಡೀ ಸದನಕ್ಕೆ; ಮೇಲ್ಮನೆಗೆ ಆದ ಅವಮಾನ. ದುಂಡಾವರ್ತಿಯ ಪ್ರಕರಣ ಇದು ಎಂದು ಟೀಕಿಸಿದರು.

