Thursday, October 29, 2026
Homeನಿಮ್ಮ ಜಿಲ್ಲೆದಟ್ಟ ಅರಣ್ಯ ಭೂಮಿ ಒತ್ತುವರಿ ಆರೋಪ – ತನಿಖೆಗೆ ಗ್ರಾಮಸ್ಥರ ಆಗ್ರಹ,

ದಟ್ಟ ಅರಣ್ಯ ಭೂಮಿ ಒತ್ತುವರಿ ಆರೋಪ – ತನಿಖೆಗೆ ಗ್ರಾಮಸ್ಥರ ಆಗ್ರಹ,

ಶಿವಮೊಗ್ಗ/ಸಾಗರ, ಅಕ್ಟೋಬರ್ 21: ಸಾಗರ ತಾಲ್ಲೂಕಿನ ಎಚ್.ಎಸ್. ಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳೂರು ಗ್ರಾಮದ ಸರ್ವೆ ನಂ.140ರಲ್ಲಿರುವ ದಟ್ಟ ಅರಣ್ಯ ಪ್ರದೇಶವನ್ನು ಪ್ರಭಾವಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಕಪ್ಪದೂರು ಹಾಗೂ ಚಂಗೊಳ್ಳಿ ಗ್ರಾಮದ ನಿವಾಸಿಗಳು ಅರಣ್ಯ ಇಲಾಖೆಗೆ ಲಿಖಿತ ದೂರು ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಗ್ರಾಮಸ್ಥರ ಮಾಹಿತಿ ಪ್ರಕಾರ, ಈ ಹಿಂದೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಸಮ್ಮುಖದಲ್ಲಿ ಜಂಟಿ ಸರ್ವೆ ನಡೆಸಿದ್ದು, ಸ್ಥಳೀಯ ರೈತರ ಜಮೀನುಗಳನ್ನು ಹೊರತುಪಡಿಸಿ ಉಳಿದ ಪ್ರದೇಶವನ್ನು ಸಾರ್ವಜನಿಕ ಉಪಯೋಗ ಮತ್ತು ಜಾನುವಾರುಗಳ ಮೇಯಲು ಮೀಸಲಾಗಿರುವ ದಟ್ಟ ಅರಣ್ಯ ಪ್ರದೇಶವೆಂದು ಗುರುತಿಸಲಾಗಿತ್ತು.

ಆದರೆ ಇದೀಗ ಹೊಸನಗರ ತಾಲ್ಲೂಕಿನ ಮಾಸ್ತಿಗಟ್ಟೆ ನಿವಾಸಿಯಾಗಿರುವ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಪ್ರಭಾವ ಬಳಸಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸದರಿ ಸರ್ವೆ ನಂಬರ್‌ನ ಜಮೀನಿನ ಮೇಲೆ ಹಕ್ಕು ಸಾಧಿಸಲು ಯತ್ನಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈಗಾಗಲೇ ಮಾಸ್ತಿಗಟ್ಟೆ ಹಾಗೂ ಕಪ್ಪದೂರು ಭಾಗದಲ್ಲಿ ಹತ್ತಾರು ಎಕರೆ ಜಮೀನು ಹೊಂದಿರುವ ಅವರು, ಅಮೂಲ್ಯ ಅರಣ್ಯ ಪ್ರದೇಶವನ್ನು ಲೂಟಿ ಮಾಡಿ ಕಂದಾಯ ಭೂಮಿಯನ್ನು ಅಕ್ರಮವಾಗಿ ಕಬಳಿಸಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಗ್ರಾಮಸ್ಥರ ಪ್ರಕಾರ, ಒತ್ತುವರಿದಾರರು ಈಗಾಗಲೇ ಜಾಗದಲ್ಲಿ ತಂತಿ ಬೇಲಿ ಹಾಕಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದು, ಇದರಿಂದ ಅರಣ್ಯ ನಾಶವಾಗುತ್ತಿದೆ. ಪರಿಸರದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿರುವ ಈ ಪ್ರದೇಶವನ್ನು ತಕ್ಷಣವೇ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಒತ್ತುವರಿ ಕುರಿತು ಹಲವು ಬಾರಿ ದೂರು ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕ್ರಮ ಕೈಗೊಳ್ಳದಿರುವುದರ ಹಿಂದೆ ಹಣದ ಪ್ರಭಾವ ಕೆಲಸ ಮಾಡಿದೆ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಸದರಿ ಖಾಸಗಿ ವ್ಯಕ್ತಿಯ ಹೆಸರಿನಲ್ಲಿ ಎಚ್.ಎಸ್. ಭೋಗ್ ಗ್ರಾಮ ಪಂಚಾಯಿತಿಯಲ್ಲಿ ನಿಯಮ ಉಲ್ಲಂಘಿಸಿ ಡಿಮ್ಯಾಂಡ್ ನೀಡಲಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ಅದನ್ನು ತಕ್ಷಣ ರದ್ದುಪಡಿಸುವಂತೆ ಪಂಚಾಯಿತಿಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ.

ಈ ಸಂಬಂಧ ಸಲ್ಲಿಸಿರುವ ಮನವಿ ಪತ್ರದ ಪ್ರತಿಗಳನ್ನು ಸಾಗರ ಶಾಸಕ ಗೋಪಾಲಕೃಷ್ಣ ಬೇಲೂರು, ಸಾಗರ ತಹಶೀಲ್ದಾರ್, ಶಿವಮೊಗ್ಗ ಜಿಲ್ಲಾಧಿಕಾರಿ, ವಲಯ ಅರಣ್ಯಾಧಿಕಾರಿ ಹಾಗೂ ಜಿಲ್ಲಾ ಮತ್ತು ವಿಭಾಗೀಯ ಅರಣ್ಯಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಸಮಗ್ರ ತನಿಖೆ ನಡೆಸಿ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಅರಣ್ಯ ಪ್ರದೇಶವನ್ನು ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಕಪ್ಪದೂರು ಹಾಗೂ ಚಂಗೊಳ್ಳಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ವರದಿ: ಅಮರೇಶಣ್ಣ ಕಾಮನಕೇರಿ,

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments