Sunday, August 16, 2026
Homeನಿಮ್ಮ ಜಿಲ್ಲೆಉದ್ಯೋಗ ನೀಡದ ಪಿಡಿಓಗಳ ವಿರುದ್ಧ ಕ್ರಮ: ಈಶ್ವರ ಖಂಡ್ರೆ ಎಚ್ಚರಿಕೆವಲಸೆ ತಡೆಗೆ ‘ಉದ್ಯೋಗ ಖಾತ್ರಿ’ ಆಸರೆ:...

ಉದ್ಯೋಗ ನೀಡದ ಪಿಡಿಓಗಳ ವಿರುದ್ಧ ಕ್ರಮ: ಈಶ್ವರ ಖಂಡ್ರೆ ಎಚ್ಚರಿಕೆವಲಸೆ ತಡೆಗೆ ‘ಉದ್ಯೋಗ ಖಾತ್ರಿ’ ಆಸರೆ: ಈಶ್ವರ ಬಿ. ಖಂಡ್ರೆ

ಬಳ್ಳಾರಿ, ಆ. 9: ಬಳ್ಳಾರಿ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದ್ದು, ಗ್ರಾಮೀಣ ಜನತೆ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದ್ದರೂ ಉದ್ಯೋಗ ಖಾತ್ರಿ ಅಡಿ ಕೆಲಸ ನೀಡದಿರುವ ಪಂಚಾಯತಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ನ ಹೊಸ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಭಾನುವಾರ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಕ್ಷೀಣಿಸಿದ್ದು ಗ್ರಾಮೀಣ ಜನರು ಉದ್ಯೋಗ ಅರಸಿ ನಗರಗಳಿಗೆ ಗುಳೆ ಹೋಗದಂತೆ ಇರುವಲ್ಲಿಯೇ ಪ್ರತಿ ಕುಟುಂಬದ ಅರ್ಹ ಫಲಾನುಭವಿಗಳಿಗೆ ‘ವಿ ಬಿ – ಜಿ ರಾಮ್ ಜಿ’ ಯೋಜನೆಯಡಿ ಕಡ್ಡಾಯವಾಗಿ ಕೆಲಸ ನೀಡುವಂತೆ ಸ್ಪಷ್ಟ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಬಡವರು, ಮಹಿಳೆಯರು, ವಿಶೇಷ ಚೇತನರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರು ಕೆಲಸ ಅರಸಿ ವಲಸೆ ಹೋದರೆ, ಅದಕ್ಕೆ ಸಂಬಂಧಪಟ್ಟ ಇಓ, ಪಿಡಿಒ ಅಧಿಕಾರಿಗಳನ್ನೇ ಹೊಣೆ ಮಾಡಿ ನಿಯಮಾನುಸಾರ ಶಿಸ್ತುಕ್ರಮ ಜರುಗಿಸುವುದಾಗಿ ಕಟ್ಟೆಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಜುಲೈ ತಿಂಗಳವರೆಗೆ ನಿಗದಿಪಡಿಸಿದ್ದ ಮಾನವ ದಿನಗಳ ಸೃಜನೆಯ ಗುರಿಯಲ್ಲಿ ಶೇ. 46 ರಷ್ಟು ಮಾತ್ರ ಸಾಧನೆಯಾಗಿದ್ದು, ನಿರೀಕ್ಷಿತ ಮಟ್ಟ ತಲುಪದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಜಿಲ್ಲೆಯಲ್ಲಿ ಪ್ರಸಕ್ತ ವರ್ಷಕ್ಕೆ ಒಟ್ಟು 51.30 ಲಕ್ಷ ಮಾನವ ದಿನಗಳ ಸೃಷ್ಟಿಯ ಗುರಿ ಹೊಂದಲಾಗಿದೆ. ಆಗಸ್ಟ್ ತಿಂಗಳಿನಿಂದ ಉದ್ಯೋಗ ಸೃಷ್ಟಿ ವೇಗವನ್ನು ಹೆಚ್ಚಿಸಿ, ಪ್ರತಿ ತಿಂಗಳು ಕನಿಷ್ಠ 5 ರಿಂದ 6 ಲಕ್ಷ ಮಾನವ ದಿನಗಳನ್ನು ಸೃಜಿಸುವಂತೆ ಸಚಿವರು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 1.84 ಲಕ್ಷ ಸಕ್ರಿಯ ಜಾಬ್ ಕಾರ್ಡ್‌ಗಳಿದ್ದು, 4.60 ಲಕ್ಷ ಕಾರ್ಮಿಕರಿದ್ದಾರೆ. ಇದರಲ್ಲಿ ಸುಮಾರು 1.30 ಲಕ್ಷ ಜಾಬ್ ಕಾರ್ಡ್‌ಗಳಿಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆದಷ್ಟು ಬೇಗ ಬಾಕಿ ಇರುವ ಪ್ರಕ್ರಿಯೆ ಮುಗಿಸಿ ಎಂದು ಸೂಚಿಸಿದರು.

ಬಳ್ಳಾರಿ ತಾಲೂಕು ಸಾಧನೆಗೆ ಅಸಮಾಧಾನ:

ಬಳ್ಳಾರಿ ತಾಲೂಕಿನಲ್ಲಿ 48,000 ಸಕ್ರಿಯ ಜಾಬ್ ಕಾರ್ಡ್‌ಗಳಿದ್ದರೂ ದಿನಕ್ಕೆ ಕೇವಲ 11,000 ದಷ್ಟು ಕಾರ್ಮಿಕರಿಗೆ ಮಾತ್ರ ಕೆಲಸ ನೀಡುತ್ತಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಹೊಸ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಿ ಯಾವುದೇ ವಿಳಂಬವಿಲ್ಲದಂತೆ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿ ಕೈಗೊಳ್ಳಬೇಕು ಎಂದು ತಿಳಿಸಿದರು.

ವಿಬಿಜಿ ರಾಮ್ ಜಿ ಅಡಿ 318 ಕಾಮಗಾರಿಗೆ ಅವಕಾಶವಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಮನೆ ಮನೆ ಪ್ರಚಾರ ಮಾಡಬೇಕು.

ಗುಣಮಟ್ಟದ ಮತ್ತು ಶಾಶ್ವತವಾದ ಆಸ್ತಿ ಸೃಜನೆ ಮಾಡಬೇಕು. ಎಲ್ಲ ಆಸ್ತಿಗೂ ಜಿಯೋ ಟ್ಯಾಗ್ ಮಾಡುವುದು ಕಡ್ಡಾಯ ಎಂದು ತಿಳಿಸಿದರು.

ನಿಗಾ ಮತ್ತು ಶೀಘ್ರ ವೇತನ ಪಾವತಿ:

ಉದ್ಯೋಗ ಖಾತರಿ ಯೋಜನೆಯಡಿ ನಿರಂತರ ನಿಗಾ ವಹಿಸಬೇಕು. ಬಡ ಕಾರ್ಮಿಕರಿಗೆ ಗ್ರಾಮ ಮಟ್ಟದಲ್ಲೇ ಉದ್ಯೋಗ ಒದಗಿಸಿ, ಅವರ ಬ್ಯಾಂಕ್ ಖಾತೆಗಳಿಗೆ ನಿಯಮಿತವಾಗಿ ಕೂಲಿ ಹಣ ಜಮೆಯಾಗುವಂತೆ ನೋಡಿಕೊಳ್ಳಬೇಕು. ಒಮ್ಮೆ ಕಾರ್ಮಿಕರ ಖಾತೆಗೆ ಹಣ ನೇರವಾಗಿ ಜಮೆಯಾದರೆ, ಯೋಜನೆಯ ಬಗ್ಗೆ ಅವರಲ್ಲಿ ನಂಬಿಕೆ ಮತ್ತು ಆಸಕ್ತಿ ಹೆಚ್ಚಾಗುತ್ತದೆ. ಹಾಗಾಗಿ, ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿ, ಯಾವುದೇ ರೀತಿಯ ಲೋಪದೋಷಗಳಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಹಣಕಾಸಿನ ಕೊರತೆಯಿಲ್ಲ:

‘ವಿ ಬಿ – ಜಿ ರಾಮ್ ಜಿ’ ಯೋಜನೆಗೆ ಅನುದಾನದ ಕೊರತೆಯಿಲ್ಲ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳಿಗೆ ರೂ.1,000 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ. ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ರೂ.1,200 ಕೋಟಿ ಹಾಗೂ ಕೇಂದ್ರ ಸರ್ಕಾರ ರೂ.1,700 ಕೋಟಿ ಅನುದಾನ ಒದಗಿಸಿದೆ. ಸಿಇಓಗಳು ಪ್ರತಿ ನಿತ್ಯ ವರ್ಚುವಲ್ ಸಭೆ ನಡೆಸಿ ಪ್ರಗತಿ ಪರಿಶೀಲಿಸಬೇಕು ಎಂದು ಸೂಚಿಸಿದರು.

ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಬೇಕು, ಕೇವಲ ದಾಖಲೆಗಳಲ್ಲಿ ಕೆಲಸ ತೋರಿಸಿ, ವಾಸ್ತವದಲ್ಲಿ ಕೆಲಸ ಆಗದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಕೇವಲ ಮೇಲಧಿಕಾರಿಗಳಷ್ಟೇ ಅಲ್ಲದೆ, ತಾಂತ್ರಿಕ ಸೂಪರ್‌ವೈಸರ್‌ಗಳು, ಇಒ ಹಾಗೂ ಐಇಸಿ ಸಂಯೋಜಕರು ಸಹ ಕ್ಷೇತ್ರಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ನಿರ್ವಹಿಸಬೇಕು.

ಪ್ರತಿಯೊಬ್ಬ ಅರ್ಹ ಕಾರ್ಮಿಕನಿಗೂ ಸಮಯಕ್ಕೆ ಸರಿಯಾಗಿ ಕೂಲಿ ಸಿಗುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಸಾರ್ವಜನಿಕ ಹಣದ ಸರಿಯಾದ ಬಳಕೆ ಹಾಗೂ ಪಾರದರ್ಶಕ ಆಡಳಿತಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಎಂದು ಸಚಿವರು ನಿರ್ದೇಶನ ನೀಡಿದರು.

ನೀರಾವರಿ ಕಾಲುವೆ ಹಾಗೂ ಫೀಲ್ಡ್ ಚಾನೆಲ್ ನಿರ್ಮಾಣ:
ಮುಖ್ಯ ನೀರಾವರಿ ಕಾಲುವೆಗಳಿಂದ ಕೊನೆಯ ಹಂತದ ರೈತರ ಜಮೀನುಗಳಿಗೆ ನೀರು ತಲುಪಿಸಲು ಅಗತ್ಯವಿರುವ ‘ಫೀಲ್ಡ್ ಚಾನೆಲ್’ ಹಾಗೂ ಎಫ್‌ಐಸಿ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಬೇಕು. ಸಣ್ಣ ನೀರಾವರಿ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ನೀರು ಪೋಲಾಗದಂತೆ ರೈತರ ಹೊಲಗಳಿಗೆ ತಲುಪಿಸುವ ಕಾಮಗಾರಿಗಳನ್ನು ಪ್ರಥಮ ಆದ್ಯತೆಯಲ್ಲಿ ಹಮ್ಮಿಕೊಳ್ಳಲು ನಿರ್ದೇಶನ ನೀಡಿದರು.

24 ಗಂಟೆಗಳಲ್ಲಿ ಜಾಬ್ ಕಾರ್ಡ್ ವಿತರಣೆ:
ಸಾರ್ವಜನಿಕರು ಅಥವಾ ಕೂಲಿ ಕಾರ್ಮಿಕರು ನರೇಗಾ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿದರೆ ಅಥವಾ ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ, ಪರಿಶೀಲನೆ ನಡೆಸಿ 24 ಗಂಟೆಗಳ ಒಳಗೆ ಜಾಬ್ ಕಾರ್ಡ್ ವಿತರಿಸಬೇಕು. ಜಾಬ್ ಕಾರ್ಡ್ ಮೇಳ ನಡೆಸಬೇಕು. ಉದ್ಯೋಗ ಬೇಡಿಕೆ ಸಲ್ಲಿಸಿದರೂ ಕೆಲಸ ಸಿಗಲಿಲ್ಲ ಅಥವಾ ಜಾಬ್ ಕಾರ್ಡ್ ನೀಡುವಲ್ಲಿ ಅನಗತ್ಯ ವಿಳಂಬವಾಯಿತು ಎಂಬ ದೂರುಗಳು ಸಾರ್ವಜನಿಕರಿಂದ ಬರಬಾರದು ಎಂದರು.

ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರನ್ನು ತಲುಪಿಸುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದ್ದು, ಕಾಮಗಾರಿಗಳಲ್ಲಿ ಯಾವುದೇ ರೀತಿಯ ವಿಳಂಬ ಹಾಗೂ ಅಸಡ್ಡೆಯನ್ನು ಸಹಿಸುವುದಿಲ್ಲ. ಕಲುಷಿತ ನೀರು ಪೂರೈಕೆಯಿಂದ ಜನ ಅಸ್ವಸ್ಥರಾದರೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಲಜೀವನ್ ಮಿಷನ್ ಕಾಮಗಾರಿಗಾಗಿ ತೋಡಲಾದ ರಸ್ತೆಗಳನ್ನು ಸರಿಯಾಗಿ ಮರುನಿರ್ಮಾಣ ಮಾಡಿಲ್ಲ. ಕೊಳವೆ ಮಾರ್ಗ ಅಳವಡಿಕೆ ಪೂರ್ಣಗೊಂಡ ತಕ್ಷಣ ರಸ್ತೆಗಳನ್ನು ಹಳೆಯ ಸ್ಥಿತಿಗೆ ತರುವುದು ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಜಂಟಿಯಾಗಿ ಕಾರ್ಯನಿರ್ವಹಿಸಿ, ಜಲಜೀವನ್ ಮಿಷನ್ ಯೋಜನೆಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದ ಅವರು, ತೆರಿಗೆ ಸಂಗ್ರಹದಲ್ಲಿ ವೇಗ ನೀಡಬೇಕು. ಜಿಲ್ಲೆಯ ಎಲ್ಲಾ ಸಾರ್ವಜನಿಕ ಗ್ರಂಥಾಲಯಗಳ ಪುಸ್ತಕ ದಾಸ್ತಾನು, ನಿರ್ವಹಣೆ, ಡಿಜಿಟಲ್ ಸೌಲಭ್ಯ ಒದಗಿಸುವಂತೆ ತಿಳಿಸಿದರು.

ಮನೆ-ಮನೆಗೆ ತೆರಳಿ ಇ-ಸ್ವತ್ತು ವಿತರಣೆ:
ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚುವರಿ ಶ್ರಮ ವಹಿಸಿ ಮನೆ-ಮನೆಗೆ ತೆರಳಿ ಸ್ವತ್ತುಗಳ ಇ-ಸ್ವತ್ತು ಮತ್ತು ಖಾತಾ ದಾಖಲೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಡ್ರಾಫ್ಟ್ ಖಾತಾ ತಯಾರಾಗಿದ್ದು, ಯಾವುದೇ ಅನಗತ್ಯ ವ್ಯಕ್ತಿಗಳಿಗೆ ಅಥವಾ ಮೂರನೇ ವ್ಯಕ್ತಿಗಳಿಗೆ ಖಾತಾ ವರ್ಗಾವಣೆಗೆ ಅವಕಾಶವಿರುವುದಿಲ್ಲ. ಯಾರು ಮೂಲ ಮಾಲೀಕರಿದ್ದಾರೋ ಅವರಿಗೆ ಮಾತ್ರವೇ ಖಾತೆಗಳನ್ನು ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಡಾ.ಬಾಬು ಜಗನ್ ಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಜಿಪಂ ಮುಖ್ಯ ಲೆಕ್ಕಾಧಿಕಾರಿ ವಿನೋದ್ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ತಾಪಂ ಇಓ ಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments