ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ಹಿಂದು ಹಬ್ಬಗಳು ಮೌಢ್ಯತೆಯಿಂದ ಕೂಡಿದವುಗಳಲ್ಲ. ಅವುಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ. ಸಿಂಧು ನದಿಯ ನಾಗರಿಕತೆಯ ಮೇಲೆ ಜೀವಿಸುತ್ತಿರುವ ಪ್ರತಿಯೊಬ್ಬ ಭಾರತೀಯ ಹಿಂದುಗೆ ಚಾಂದ್ರಮಾನ ಯುಗಾದಿಯೇ ಹೊಸ ವರ್ಷ ಮತ್ತು ವರ್ಷದ ಮೊದಲ ದಿನವಾಗಿದೆ. ಯುಗಾದಿ ಎಲ್ಲ ಹಬ್ಬಗಳಿಗೆ ಆರಂಭಿಕ ಮೊದಲ ಹಬ್ಬವಾಗಿದೆ. ಇದು ಯುಗದ ಹಾಗೂ ವರ್ಷದ ಆರಂಭದ ದಿನವೂ ಆಗಿದೆ ಎಂದು ಉಪನ್ಯಾಸಕ, ಖ್ಯಾತ ಪ್ರವಚನಕಾರ ಐ.ಬಿ.ಹಿರೇಮಠ ಹೇಳಿದರು.
ಇಲ್ಲಿನ ಮುಖ್ಯ ಬಜಾರನಲ್ಲಿರುವ ಗ್ರಾಮದೇವತೆ ಕಟ್ಟೆಯ ಮೇಲೆ ಹಿಂದುಪರ ಸಂಘಟನೆಗಳ ವತಿಯಿಂದ ಗುರುವಾರ ಏರ್ಪಡಿಸಿದ್ದ ಹೊಸ ವರ್ಷಾಚರಣೆ, ಯುಗಾದಿ ಶುಭಾಶಯ ವಿನಿಮಯ ಹಾಗೂ ಯುಗಾದಿ ಹಬ್ಬದ ಮಹತ್ವ ಕುರಿತು ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಚಾಂದ್ರಮಾನ ಯುಗಾದಿಯ ಈ ದಿನ ಸೂರ್ಯನ ವೇಗ ಕಡಿಮೆಯಾಗಿ ಚಂದ್ರನ ವೇಗ ಜಾಸ್ತಿ ಆಗುತ್ತದೆ. ಇದರ್ಥ ಹಗಲಿನ ಅವಧಿ ಕಡಿಮೆಯಾಗಿ ರಾತ್ರಿಯ ಅವಧಿ ಹೆಚ್ಚುತ್ತದೆ. ಸೂರ್ಯನು ಅಶ್ವಿನಿ ನಕ್ಷತ್ರದಿಂದ ಹಿಡಿದು ರೇವತಿ ನಕ್ಷತ್ರವರೆಗೆ ಪ್ರತಿ ನಕ್ಷತ್ರದಲ್ಲಿ ನಾಲ್ಕು ಘಳಿಗೆ ಕಳೆಯುತ್ತಾನೆ. ಒಟ್ಟು ನಕ್ಷತ್ರಗಳು 27. 27 ನಕ್ಷತ್ರಗಳನ್ನು ನಾಲ್ಕು ಘಳಿಗೆಯಿಂದ ಗುಣಿಸಿದರೆ 108 ಸಂಖ್ಯೆ ದೊರೆಯುತ್ತದೆ. ನಮ್ಮ ಜಪಮಣಿಯಲ್ಲಿರುವುದು 108 ಮಣಿಗಳು. ಇವು 108 ಮಂತ್ರಗಳ ಪ್ರತಿನಿಧಿಗಳು. ನಮ್ಮ ಪ್ರಾರ್ಥನೆ ದೇವಾನುದೇವತೆಗಳನ್ನು ಮುಟ್ಟಬೇಕಾದರೆ ಅಗ್ನಿ ಮತ್ತು ಸೂರ್ಯನ ಮೂಲಕ ಮುಟ್ಟಬೇಕು. ನಾವು ಸೌರಗ್ರಹ ಅವಲಂಬಿತ ಭೂಮಿಯ ಜೀವಿಗಳಾಗಿರುವುದರಿಂದ ಸೂರ್ಯ, ನಕ್ಷತ್ರಗಳು ನಮಗೆ ಮಹತ್ವದವುಗಳಾಗಿವೆ ಎಂದರು.
ಸೌರಮಾನ ಯುಗಾದಿ ಏಪ್ರೀಲ್ 15ರಿಂದ ಪ್ರಾರಂಭಗೊಳ್ಳುತ್ತದೆ. ಅಂದು ಸೂರ್ಯ ತನ್ನ ರಾಶಿ ಬದಲಿಸುತ್ತಾನೆ. ಒಟ್ಟು ರಾಶಿಗಳು 12. ಇವುಗಳನ್ನು ಒಂಭತ್ತು ಘಳಿಗೆಯಿಂದ ಗುಣಿಸಿದರೆ 108 ಸಂಖ್ಯೆ ದೊರೆಯುತ್ತದೆ. ನಮಗೆ ಪಂಚಾಂಗ ಅತ್ಯಂತ ಮಹತ್ವದ್ದು. ವಾರ, ತಿಥಿ, ನಕ್ಷತ್ರ, ಕರ್ಣ, ಯೋಗ ಸೇರಿ ಪಂಚಾಂಗವಾಗಿದೆ. ಸೌರ ವಿಜ್ಞಾನವು ಪಂಚಾಂಗದ ಮೇಲೆ ಅವಲಂಬಿತವಾಗಿರುತ್ತದೆ. ವರ್ಷದ ಮೊದಲ ಮಳೆ ಯಾವಾಗ ಎನ್ನುವುದನ್ನು ಪಂಚಾಂಗದಲ್ಲಿ ಬರೆದಿರುತ್ತಾರೆ. ಪಂಚಾಂಗ ಮೌಢ್ಯವಲ್ಲ. ಅದೊಂದು ವಿಜ್ಞಾನ ಎಂದರು.
ಪುರಸಭೆ ಮಾಜಿ ಸದಸ್ಯ ಬಸಯ್ಯ ನಂದಿಕೇಶ್ವರಮಠ ಅವರು ಮಾತನಾಡಿ ಪ್ರತಿಯೊಬ್ಬ ಭಾರತೀಯ ಹಿಂದುಗೆ ಹೊಸ ವರ್ಷ ಯುಗಾದಿ ಆಗಬೇಕೇ ಹೊರತು ಜನೇವರಿ ಒಂದು ಆಗಬಾರದು. ಆ ಹೊಸ ವರ್ಷ ಮಜಾ ಮಾಡಲು ಇರುವಂಥದ್ದು. ಮಾನವ ಕುಲದ ಅತ್ಯಂತ ಅವಮಾನಕರ ಘಟನೆಗಳು ಅಂದು ನಡೆಯುತ್ತವೆ. ಮದ್ಯ ಸೇವನೆ, ಡ್ರಗ್ಸ್ ಯಥೇಚ್ಛವಾಗಿ ಬಳಕೆ ಆಗುತ್ತವೆ. ಆಧುನಿಕ ಯುವತಿಯರು ಮೈಮೇಲೆ ಪ್ರಜ್ಞ ಇಲ್ಲದವರಂತೆ ನಡೆದುಕೊಳ್ಳುತ್ತಾರೆ. ಇಂಥ ಸಂಸ್ಕೃತಿಯುಳ್ಳ ಜನೇವರಿ ಒಂದರ ಹೊಸ ವರ್ಷಕ್ಕಿಂತ ನಮ್ಮ ಸನಾತನ ಸಂಪ್ರದಾಯ, ಗೌರವ ಮತ್ತು ಧಾರ್ಮಿಕ ನಂಬಿಕೆ ಎತ್ತಿ ಹಿಡಿಯುವ ಯುಗಾದಿಯೇ ಸರ್ವಶ್ರೇಷ್ಠ ಎನ್ನುವುದನ್ನು ನಾವೆಲ್ಲರೂ ಅರಿಯಬೇಕು ಎಂದರು. ವಿಶೇಷ ಉಪನ್ಯಾಸ ನೀಡಿದ ಐ.ಬಿ.ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವೆಂಕನಗೌಡ ಪಾಟೀಲ, ಬಣಜಿಗ ಸಮಾಜದ ಅಧ್ಯಕ್ಷ ಅಶೋಕ ಚಟ್ಟೇರ, ಪ್ರಮುಖರಾದ ಪ್ರಭು ಕಡಿ, ಅಶೋಕ ನಾಡಗೌಡ, ಗುರುಸ್ವಾಮಿ ಬೂದಿಹಾಳಮಠ, ಮಹಾಂತೇಶ ಬೂದಿಹಾಳಮಠ, ಮಾಣಿಕಚಂದ ದಂಡಾವತಿ,
ಪರಕೀಯರು ನಮ್ಮಲ್ಲಿ ಬಿಟ್ಟು ಹೋದ ಸಂಸ್ಕೃತಿಯಿಂದ ನಮ್ಮ ಪರಂಪರೆ, ಆರ್ಥಿಕತೆ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಜೀವನಕ್ಕೆ ಬಹಳ ದೊಡ್ಡ ಪೆಟ್ಟು ಬೀಳುತ್ತಿದೆ. ಚಾಂದ್ರಮಾನ ಯುಗಾದಿ, ಸೌರಮಾನ ಯುಗಾದಿ ನಮಗೆ ಮಹತ್ವದ ಹಬ್ಬ. ಇದರೊಂದಿಗೆ ಅಕ್ಷಯ ತೃತಿಯ, ಬಸವ ಜಯಂತಿ, ವಿಜಯದಶಮಿ, ದೀಪಾವಳಿ ನಮಗೆ ಮಹತ್ವದವುಗಳಾಗಿವೆ. -ಐ.ಬಿ.ಹಿರೇಮಠ, ಉಪನ್ಯಾಸಕರು, ಪ್ರವಚನಕಾರರು, ಮುದ್ದೇಬಿಹಾಳ.
ವರದಿ: ಮುತ್ತು ವಡವಡಗಿ ಮೋ: 9880143505

