Sunday, August 16, 2026
Homeನಿಮ್ಮ ಜಿಲ್ಲೆ​ಸಂಗೀತ ಕೇವಲ ಮನರಂಜನೆಗಲ್ಲ, ನಮ್ಮ ಸಂಸ್ಕೃತಿಯ ಸಂಕೇತ: ಪ್ರೀತಿ ಹೊನ್ನಗುಡಿ

​ಸಂಗೀತ ಕೇವಲ ಮನರಂಜನೆಗಲ್ಲ, ನಮ್ಮ ಸಂಸ್ಕೃತಿಯ ಸಂಕೇತ: ಪ್ರೀತಿ ಹೊನ್ನಗುಡಿ

​ಗದಗ: ಸಂಗೀತ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ, ಅದು ನಮ್ಮ ಶ್ರೀಮಂತ ಸಂಸ್ಕೃತಿಯ ಸಂಕೇತವಾಗಿದೆ. ಮಾನಸಿಕ ನೆಮ್ಮದಿಯೊಂದಿಗೆ ಭಗವಂತನ ಒಲುಮೆಯನ್ನು ಕರುಣಿಸುವ ದಿವ್ಯ ಮಾಧ್ಯಮ ಸಂಗೀತ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಹಿಳಾ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಹೊನ್ನಗುಡಿ ಅಭಿಪ್ರಾಯಪಟ್ಟಿದ್ದಾರೆ.

​ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ), ಗದಗ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಎಸ್.ವಿ.ಟಿ ಪ್ಯಾರಾ ಮೆಡಿಕಲ್ ಕಾಲೇಜಿನ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ “ಪುಟ್ಟರಾಜ ಸಂಗೀತ ಸಂಭ್ರಮ-26” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

​ಪುಟ್ಟರಾಜ ಕವಿ ಗವಾಯಿಗಳು ಸಂಗೀತದ ಸಾಧನೆಯ ಮೂಲಕವೇ ಭಗವಂತನ ಕೃಪೆಗೆ ಪಾತ್ರರಾಗಿ ‘ನಡೆದಾಡುವ ದೇವರು’ ಎನಿಸಿಕೊಂಡಿದ್ದರು. ವೀರೇಶ್ವರ ಪುಣ್ಯಾಶ್ರಮದ ಮೂಲಕ ಅವರು ಸಲ್ಲಿಸಿದ ಸಂಗೀತ ಸೇವೆ ನಮ್ಮ ಭವ್ಯ ಪರಂಪರೆಯನ್ನು ಜಗತ್ತಿಗೆ ಸಾರಿದೆ. ಆಶ್ರಮದಲ್ಲಿ ರೂಪುಗೊಂಡ ಶಿಷ್ಯರು ಗದುಗಿನ ಕೀರ್ತಿಯನ್ನು ಪಸರಿಸಿದ್ದಾರೆ. ಸಂಗೀತ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ನುಡಿದರು.
​ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಪಂ. ಫಕೀರೇಶ್ವರ ಶಾಸ್ತ್ರಿ ಹಿರೇಮಠ ಬೆಳ್ಳಟ್ಟಿ, ಸಂಗೀತಾಸಕ್ತರಿಗೆ ಪ್ರೋತ್ಸಾಹ ನೀಡುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು. ಶ್ರೀಮತಿ ವನಜಾಕ್ಷಿ ಎಸ್. ತೋಟಗಂಟಿಮಠ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ವಿ.ಟಿ ಕಾಲೇಜಿನ ಡಾ. ಸಂತೋಷ್ ತೋಟಗಂಟಿಮಠ ಸೇವಾ ಸಮಿತಿಯ ಸೇವೆಯನ್ನು ಕೊಂಡಾಡಿದರು.
​ವೇದಿಕೆಯಲ್ಲಿ ವಿಜಯ ಬುಕ್ ಡಿಪೋ ಮಾಲೀಕರಾದ ವಿಜಯಕುಮಾರ ಹಿರೇಮಠ, ಶ್ರೀಮತಿ ಅನಿತಾ ತೋಟಗಂಟಿಮಠ ಹಾಗೂ ಶ್ರೀಮತಿ ಸ್ನೇಹಾ ಹಿರೇಮಠ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

​ರಂಜಿಸಿದ ಸಂಗೀತ ಸುಧೆ:

ಕಾರ್ಯಕ್ರಮದಲ್ಲಿ ಸುಕ್ರುಸಾಬ ಮುಲ್ಲಾ (ಹಾರ್ಮೋನಿಯಂ ಸೋಲೋ), ಸಂಜಯಕುಮಾರ ಅರ್ಕಸಾಲಿ (ವಯೋಲಿನ್ ಸೋಲೋ), ನಾಗೇಂದ್ರ ಅಕ್ಕಸಾಲಿ (ತಬಲಾ ಸೋಲೋ), ಕುಮಾರ ಮಠ ಗುತ್ತರಗಿ (ಹಿಂದೂಸ್ತಾನಿ ಗಾಯನ) ಹಾಗೂ ಕೃತಿಕಾ ಶರಣಯ್ಯ ಹಿಡ್ಕಿಮಠ (ವಚನ ಗಾಯನ) ಪ್ರಸ್ತುತಪಡಿಸಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು. ಈ ಸಂದರ್ಭದಲ್ಲಿ ಸಾಧಕ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಕಲಾ ವಿಕಾಸ ಪರಿಷತ್ ವತಿಯಿಂದ 200 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು.
​ಪಂ. ಸಿ.ಕೆ.ಹೆಚ್. ಶಾಸ್ತ್ರಿ ಕಡಣಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕುಮಾರ ಹಿರೇಮಠ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments