ಲಿಂಗಸುಗೂರು, ಡಿ.13:
ಲಿಂಗಸುಗೂರು ನ್ಯಾಯಾಲಯ ಆವರಣದಲ್ಲಿ ದಿನಾಂಕ 13-12-2025ರಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ರಾಯಚೂರು, ತಾಲೂಕು ಕಾನೂನು ಸೇವಾ ಸಮಿತಿ ಲಿಂಗಸುಗೂರು ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟೀಯ ಲೋಕ ಅದಾಲತ್ ಯಶಸ್ವಿಯಾಗಿ ನಡೆಯಿತು.
ಲೋಕ ಅದಾಲತ್ತಿನಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 5,744 ಪ್ರಕರಣಗಳ ಪೈಕಿ 2,266 ಪ್ರಕರಣಗಳು ರಾಜಿಯಾಗುವ ಮೂಲಕ ಇತ್ಯರ್ಥಗೊಂಡಿದ್ದು, ಇದರಿಂದ ಒಟ್ಟು ರೂ. 2,37,24,547 (ಎರಡು ಕೋಟಿ ಮೂವತ್ತೇಳು ಲಕ್ಷದ ಇಪ್ಪತ್ತುನಾಲ್ಕು ಸಾವಿರದ ಐದುನೂರ ನಲವತ್ತೇಳು) ಮೊತ್ತಕ್ಕೆ ಸಮಾಧಾನ ದೊರೆತಿದೆ. ಅಲ್ಲದೆ, ವಾಜ್ಯಪೂರ್ವ ಹಂತದ 6,949 ಪ್ರಕರಣಗಳ ಪೈಕಿ 6,029 ಪ್ರಕರಣಗಳು ಲೋಕ ಅದಾಲತ್ತಿನಲ್ಲಿ ರಾಜಿಯಾಗುವ ಮೂಲಕ ಇತ್ಯರ್ಥಗೊಂಡಿದ್ದು, ಒಟ್ಟು ರೂ. 1,34,59,724 (ಒಂದು ಕೋಟಿ ಮೂವತ್ತುನಾಲ್ಕು ಲಕ್ಷದ ಐವತ್ತೊಂಬತ್ತು ಸಾವಿರದ ಏಳುನೂರ ಇಪ್ಪತ್ತುನಾಲ್ಕು) ಮೊತ್ತದ ಸಮಾಧಾನ ಸಾಧಿಸಲಾಗಿದೆ.

ಲೋಕ ಅದಾಲತ್ತಿನ ಪ್ರಮುಖ ಘಟನೆಯೊಂದರಲ್ಲಿ ಎಂ.ಸಿ. ನಂ.117/2025ರ ಕೌಟುಂಬಿಕ ಕಲಹ ಸಂಬಂಧಿತ ಪ್ರಕರಣದಲ್ಲಿ ದೂರವಾಗಲು ಇಚ್ಛಿಸಿದ್ದ ದಂಪತಿಗಳು, ವಕೀಲರಾದ ಶ್ರೀಮತಿ ಕೆ. ತಸ್ಲೀಮ ಹಾಗೂ ಬಿ. ಬಸವರಾಜರ ಮೂಲಕ ನ್ಯಾಯಾಲಯಕ್ಕೆ ಹಾಜರಾದರು. ಈ ವೇಳೆ ಪ್ರಕರಣವನ್ನು ಕೈಗೆತ್ತಿಕೊಂಡ ಮಾನ್ಯ ಹಿರಿಯ ಶ್ರೇಣಿ ನ್ಯಾಯಧೀಶರಾದ ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಅವರು ದಂಪತಿಗಳಿಗೆ ಜೀವನ ಮೌಲ್ಯಗಳು, ಕುಟುಂಬದ ಮಹತ್ವದ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಸಲಹೆ ನೀಡಿದರು. ಅವರ ಸಮಾಲೋಚನೆಯ ಫಲವಾಗಿ ದಂಪತಿಗಳು ಮನಸ್ತಾಪ ಮರೆತು ಲೋಕ ಅದಾಲತ್ತಿನಲ್ಲಿ ರಾಜಿಯಾಗುವ ಮೂಲಕ ಪರಸ್ಪರ ಹೂವಿನ ಹಾರ ಬದಲಿಸಿಕೊಂಡು ಪುನಃ ಒಂದಾಗಿದರು.
ಈ ಸಂದರ್ಭ ಮಾನ್ಯ ಪ್ರಧಾನ ಸಿವಿಲ್ ನ್ಯಾಯಧೀಶರಾದ ಅಂಬಣ್ಣ ಕೆ., ರಾಘವೇಂದ್ರ ಮುತಾಲಿಕ, ಕಲ್ಮಟ ವಕೀಲರು ಸೇರಿದಂತೆ ವಕೀಲರಾದ ವಿಶ್ವನಾಥ, ನಾಗರಾಜ ಏಲಿಗಾರ, ಹಾಜಿಬಾಬು, ಅನೀಲ, ಶಶಿ ಹೊಸಮನಿ, ರವಿ, ಚಂದರಮತಿ, ವಿಜಯಲಕ್ಷ್ಮೀ, ಪ್ರಮೋದ್, ಶಿವಲಿಂಗಪ್ಪ, ಕರಿಯಪ್ಪ ಹಾಗೂ ಇತರ ವಕೀಲರು ಉಪಸ್ಥಿತರಿದ್ದರು.

