ಲಿಂಗಸುಗೂರಿನಲ್ಲಿ ಯುವ ಕಾಂಗ್ರೆಸ್ ಮುಖಂಡರು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಹಾಗೂ ಕೆಲ ಕಾಂಗ್ರೇಸ್ ವಿರೋಧಿ ಮುಖಂಡರ ರಾಜಕೀಯ ನಿಲುವು ಮತ್ತು ಪಕ್ಷವಿರೋಧಿ ಚಟುವಟಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಯಿತು.
ಯುವ ಕಾಂಗ್ರೆಸ್ ಮುಖಂಡ ಶಿವರಾಜ ನಾಯಕ ಮಾತನಾಡಿ, ಜಗದೀಶ ಗೌಡ ಎಂಬ ವ್ಯಕ್ತಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸಂಬಂಧವಿರಲಿಲ್ಲ ಎಂದು ಸ್ಪಷ್ಟಪಡಿಸಿದರು. “ಇವನು ಹಾಗೂ ಇವರ ತಮ್ಮ ರವಿ ಇಬ್ಬರೂ ಬಿಜೆಪಿ ಪರ ಕಾರ್ಯನಿರ್ವಹಿಸಿ, ಮಾನಪ್ಪ ವಜ್ಜಲ್ ಅವರಿಗೆ ಬೆಂಬಲಿಸಿದ್ದರು. ಈಗ ಅವರು ಶ್ರೀ ಡಿ.ಎಸ್. ಹೂಲಗೇರಿಯವರ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆ ಇಲ್ಲ,” ಎಂದು ಟೀಕಿಸಿದರು.
ಅವರು ಮುಂದುವರೆದು, ಲೋಕಸಭಾ ಚುನಾವಣೆಯಲ್ಲಿಯೂ ಜಗದೀಶ ಗೌಡ ಕಾಂಗ್ರೆಸ್ ಪರ ಕೆಲಸ ಮಾಡದೇ, ಬಿಜೆಪಿ ಪರ ನಿಂತಿದ್ದರೂ ಈಗ ಕಾಂಗ್ರೇಸ್ ಪಕ್ಷದ ಸಿದ್ಧಾಂತದ ಬಗ್ಗೆ ಹಾಗೂ ಮುಖಂಡರಾದ ಗೋವಿಂದ ನೇತಾರ ಬಗ್ಗೆ ಹಗುರವಾಗಿ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಶಿವರಾಜ ನಾಯಕರು ಶರಣಗೌಡ ಬಯ್ಯಾಪೂರು ಅವರ ನಿಲುವಿನ ಮೇಲೂ ಗಂಭೀರ ಆರೋಪ ಹೊರಿಸಿದರು. “ಕಾಂಗ್ರೇಸ್ ಪಕ್ಷದಿಂದಲೇ ವಿಧಾನ ಪರಿಷತ್ ಸದಸ್ಯರಾಗಿರುವ ಶರಣಗೌಡ ಬಯ್ಯಾಪೂರು, ಹಾಲಿ ಶಾಸಕ ಮಾನಪ್ಪ ವಜ್ಜಲ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಳೆದ ಹಲವು ವರ್ಷಗಳಿಂದ ತಾಲ್ಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ. ಯಾವುದೇ ಪಕ್ಷದ ಕಾರ್ಯಕ್ರಮಗಳಿಗೆ ಹಾಜರಾಗದೇ, ನಿರಂತರವಾಗಿ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ,” ಎಂದು ಆರೋಪಿಸಿದರು.
2023ರ ವಿಧಾನಸಭಾ ಚುನಾವಣೆಯ ಉದಾಹರಣೆಯನ್ನು ನೀಡುತ್ತ, ಅವರು, “ಹೂಲಗೇರಿಯವರ ಸೋಲಿಗಾಗಿ ಆರ್. ರುದ್ರಯ್ಯ ಅವರನ್ನು ಕಾಂಗ್ರೆಸ್ ಒಳಗೇ ಅಸ್ಥಿರತೆ ಸೃಷ್ಟಿಸಲು ಬಳಸಿಕೊಂಡು, ನಂತರ ಕೆಆರ್ಪಿಪಿ ಪಕ್ಷದಿಂದ ಸ್ಪರ್ಧೆ ಮಾಡಿಸಿದರು. ತಮ್ಮ ಆಪ್ತ ಸಹಾಯಕ ಚನ್ನರೆಡ್ಡಿಯನ್ನು ಕೆಆರ್ಪಿಪಿಗೆ ಕಳುಹಿಸಿ ಕಾಂಗ್ರೆಸ್ ಅಭ್ಯರ್ಥಿಗೆ ನಷ್ಟ ತಂದರು,ಎಂದು ವಿವರಿಸಿದರು.
ಶರಣಗೌಡ ಬಯ್ಯಾಪೂರು ತಾವು ಸ್ವತಃ ಹಲವಾರು ಮುಖಂಡರಿಗೆ ಕರೆ ಮಾಡಿ “ಹೂಲಗೇರಿ ಅವರನ್ನು ಬೆಂಬಲಿಸಬೇಡಿ, ಕೆಆರ್ಪಿಪಿ ಅಥವಾ ಬಿಜೆಪಿ ಬೆಂಬಲಿಸಿ” ಎಂದು ಕರೆ ನೀಡಿರುವುದು ಲಿಂಗಸುಗೂರಿನ ಜನತೆಗೆ ಗೊತ್ತೇ ಇದೆ ಎಂದು ಯುವ ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಿದರು.
ಇದಲ್ಲದೆ, ಚನ್ನರೆಡ್ಡಿಯವರು ಗೋವಿಂದ ನಾಯಕರಿಗೆ ಕೆಆರ್ಪಿಪಿ ಸೇರಿಸಲು 50 ಲಕ್ಷ ರೂಪಾಯಿ ಆಫರ್ ನೀಡಿದ್ದರು, ಅದನ್ನು ಬಹಿರಂಗ ಪಡಿಸಲು ನಾವು ಸಿದ್ದರಿದ್ದೇವೆ. “ನೀವೇ ದಿನಾಂಕ ನಿಗದಿ ಮಾಡಿ, ಅಥವಾ ಸುಕ್ಷೇತ್ರ ಅಮರೇಶ್ವರ ದೇವಸ್ಥಾನಕ್ಕೆ ಬನ್ನಿ, ನಾವೇ ಸಾಕ್ಷಿಗಳೊಂದಿಗೆ ಬಹಿರಂಗಪಡಿಸುತ್ತೇವೆ,” ಎಂದು ಸವಾಲು ಹಾಕಿದರು.
ಕೊನೆಯಲ್ಲಿ ಅವರು, “ಕಾಂಗ್ರೇಸ್ ಪಕ್ಷದ ವಿರುದ್ಧ ಸುಳ್ಳು, ತಪ್ಪು ಮಾಹಿತಿಯನ್ನು ಹರಡುವುದನ್ನು ತಕ್ಷಣವೇ ನಿಲ್ಲಿಸಬೇಕು, ಇಲ್ಲದಿದ್ದರೆ ನಾವು ದಾಖಲೆಗಳೊಂದಿಗೆ ಜನರಿಗೆ ನಿಜಗಳನ್ನು ತಲುಪಿಸುತ್ತೇವೆ,” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ
ರಾಜು ಹಟ್ಟಿ,
ವಧು ಕಿಲ್ಲಾರಹಟ್ಟಿ,
ಮಂಜುನಾಥ ಹಂಚಿನಾಳ,
ಶಿವರೆಡ್ಡಿಗೌಡ ಗುಂತಗೋಳ,
ಉಮೇಶ ಲಿಂಗಸೂಗೂರು,
ಮೌನೇಶ್ ಹೊನ್ನಳ್ಳಿ
ಉಪಸ್ಥಿತರಿದ್ದರು.

