ಸುದ್ದಿಗಾಗಿ ಸಿದ್ದು ಡಿಜಿಟಲ್ ಮೀಡಿಯಾ ಸ್ಟುಡಿಯೋ ಉದ್ಘಾಟನಾ ಸಮಾರಂಭ
ಮುದ್ದೇಬಿಹಾಳ (ವಿಜಯಪುರ): ಮಾಧ್ಯಮಗಳು ಸಮಾಜದ ಕನ್ನಡಿ ಇದ್ದ ಹಾಗೆ. ಇವು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಅಭಿವೃದ್ಧಿಪರ ಇರುವವರನ್ನು ಗುರ್ತಿಸಿ ಪ್ರೋತ್ಸಾಹಿಸುವ ಮೂಲಕ ಜನರ ಮನಸ್ಸಲ್ಲಿ ಅಭಿವೃದ್ದಿಯ ಪರಿಕಲ್ಪನೆ, ಚಿಂತನೆ ಬಿತ್ತುವ ಕಾರ್ಯವನ್ನು ಯಶಸ್ವಿಯಾಗಿ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆಯಾಗಬೇಕು ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿರುವ ಹಡಲಗೇರಿ ಕಾಂಪ್ಲೆಕ್ಸನಲ್ಲಿ ಬುಧವಾರ ಸುದ್ದಿಗಾಗಿ ಸಿದ್ದು ಡಿಜಿಟಲ್ ಮೀಡಿಯಾ ಸ್ಟುಡಿಯೋ ಉದ್ಘಾಟಿಸಿ ಮಾತನಾಡಿದ ಅವರು, ಜನರಲ್ಲಿ ಅಭಿವೃದ್ಧಿಯ ಬಗ್ಗೆ ತಿಳಿಸಿಕೊಡಲು ಮಾಧ್ಯಮದವರು ವಾರ್ಡವಾರು, ಗ್ರಾಮವಾರು ಸಂವಾದ ಹಮ್ಮಿಕೊಳ್ಳಬೇಕು. ಜನರಿಗೆ ಅಬಿವೃದ್ಧಿಯ ಬಗ್ಗೆ ತಿಳಿಸಿಕೊಡಬೇಕು. ಜನರಿಂದ ಬರುವ ಉತ್ತರವನ್ನು ಕ್ರೋಢೀಕರಿಸಿ ಎಲ್ಲರೂ ನೋಡುವಂತೆ ವಿಶೇಷ ವರದಿಯೊಂದನ್ನು ತಯಾರಿಸಿ ಜನಸಾಮಾನ್ಯರ ಮುಂದಿಡಬೇಕು. ಇದು ಮಾಧ್ಯಮದವರ ನಿಜವಾದ ಕೆಲಸವಾಗಿದೆ. ಪರ, ವಿರೋಧಗಳ ಬಗ್ಗೆ ಸುದ್ದಿ ಪ್ರಸಾರ ಮಾಡುವುದರ ಜೊತೆಗೆ ಇಂಥ ಸಕಾರಾತ್ಮಕ ವಿಷಯಗಳಿಗೂ ಆದ್ಯತೆ ನೀಡಬೇಕು. ಯಾವುದೇ ರಾಗ, ದ್ವೇಷಗಳಿಗೆ ಅವಕಾಶ ಇರದಂತೆ ನೋಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರು ಮಾತನಾಡಿ ಪತ್ರಕರ್ತರು ಎಲ್ಲರನ್ನೂ ಸಮನಾಗಿ ಕಾಣುವ ಮನೋಭಾವ ಹೊಂದಿರಬೇಕು. ಕೆಲಸ ಮಾಡುವವರನ್ನು ಗುರ್ತಿಸಿ ಪ್ರೋತ್ಸಾಹಿಸಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಯಾವುದೇ ಸುದ್ದಿ ಬಿತ್ತರಿಸುವುದಕ್ಕೂ ಮೊದಲು ಅದರ ಹಿಂದಿನ ಸತ್ಯಾಸತ್ಯತೆ ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರವೇ ಅದನ್ನು ಪ್ರಸಾರ ಮಾಡುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ತಲುಪುತ್ತಿದ್ದು ಇದರ ಸದ್ಭಳಕೆ ಆಗಬೇಕು ಎಂದರು.
ದಿವ್ಯಸಾನಿಧ್ಯ ವಹಿಸಿದ್ದ ಕುಂಟೋಜಿ ಭಾವೈಕ್ಯತಾ ಹಿರೇಮಠದ ಪೀಠಾಧಿಪತಿ ಡಾ|ಶ್ರೀಗುರು ಚನ್ನವೀರ ಶಿವಾಚಾರ್ಯರು ಮಾತನಾಡಿ ಮಾಧ್ಯಮದಲ್ಲಿ ಹೊಸದಾಗಿ ಬರುವವರು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆಯಬೇಕು. ಹೆಸರು, ಗೌರವ ಉಳಿಸಿಕೊಂಡು ಮುನ್ನಡೆಯಬೇಕು. ಯಾರದೋ ಮನವೊಲಿಸುವ ರೀತಿಯ ವರದಿಗಾರಿಕೆ ಇರಕೂಡದು. ಸಿದ್ದು ಚಲವಾದಿ, ಮುನೀರ್ ಅವಟಿಗೇರ ಅವರ ತಂಡದ ಈ ವಿಶೇಷ ಪ್ರಯತ್ನಕ್ಕೆ ಶುಭವಾಗಲಿ ಎಂದರು.
ಅತಿಥಿಗಳಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ, ಹಾಸ್ಯ ಕಲಾವಿದ ಗೋಪಾಲ ಹೂಗಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಆರ್.ಮುಲ್ಲಾ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಎಸ್.ಎಸ್.ಹೂಗಾರ, ದಲಿತ ಸಂಘರ್ಷ ಸಮಿತಿ ಮುಖಂಡ ಚನ್ನಪ್ಪ ವಿಜಯಕರ್, ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಬಿ.ವಡವಡಗಿ, ಸಾನಿಧ್ಯ ವಹಿಸಿದ್ದ ಜಮಾಅತೆ ಉಲ್ಮಾ ಹಿಂದ್ ಉಪಾಧ್ಯಕ್ಷ ಮೌಲಾನಾ ಅಲ್ಲಾಭಕ್ಷ ಖಾಜಿ ಮಾತನಾಡಿದರು.
ಆಮ್ ಆದ್ಮಿ ಪಾರ್ಟಿ ತಾಲೂಕು ಅಧ್ಯಕ್ಷ ಮಹಿಬೂಬ ಹಡಲಗೇರಿ, ಪುರಸಭೆ ಮಾಜಿ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ನಿರ್ದೇಶಕ ಶ್ರೀಕಾಂತ ಚಲವಾದಿ, ಗಣ್ಯರಾದ ರವಿ ನಾಯಕ, ಸಿಖಂದರ್ ಜಾನ್ವೇಕರ್, ಸಂಗಮ್ಮ ದೇವರಳ್ಳಿ, ಶಂಕರಗೌಡ ಶಿವಣಗಿ, ಸಂಗನಗೌಡ ಪಾಟೀಲ, ಹರೀಶ ನಾಟೀಕಾರ, ಪುಂಡಲೀಕ ಮುರಾಳ, ಬಿ.ಜಿ.ಮಠ, ವೀರೇಶ ಢವಳಗಿ, ಶ್ರೀಶೈಲ ಹೂಗಾರ, ನೀಲಮ್ಮ ಚಲವಾದಿ, ರವಿ ನಾಲತವಾಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸಿದ್ದು ಚಲವಾದಿ, ಮುನೀರ್ ಅವಟಿಗೇರ, ಬಸವರಾಜ ಕುಂಬಾರ ಇವರನ್ನು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಸನ್ಮಾನಿಸಿ ಶುಭ ಕೋರಿದರು.
ವರದಿ: ಮುತ್ತು ವಡವಡಗಿ-9880143505

