Sunday, August 16, 2026
Homeನಿಮ್ಮ ಜಿಲ್ಲೆಮನುಷ್ಯಳೇ ಅಲ್ಲದ ಸುಂದರಿ ಜೊತೆ ಮಾಡಬಾರದ್ದೆಲ್ಲಾ ಮಾಡಿ 2 ಲಕ್ಷ ಕಳಕೊಂಡ ಬೆಂಗಳೂರು ಯುವಕ

ಮನುಷ್ಯಳೇ ಅಲ್ಲದ ಸುಂದರಿ ಜೊತೆ ಮಾಡಬಾರದ್ದೆಲ್ಲಾ ಮಾಡಿ 2 ಲಕ್ಷ ಕಳಕೊಂಡ ಬೆಂಗಳೂರು ಯುವಕ

ಬೆಂಗಳೂರು: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವ ಮಾತಿದೆ. ಅದರಲ್ಲಿಯೂ ಡೇಟಿಂಗ್​ ಆಯಪ್​, ಸೈಬರ್​ ಕ್ರೈಮ್​ಗಳಲ್ಲಿ ಮೋಸ ಹೋಗುವವರು ಹೈಲಿ ಎಜುಕೇಟೆಡ್​ ಎನ್ನುವವರೇ ಎನ್ನುವುದು ಮಾತ್ರ ಸೋಜಿಗ. ಡೇಟಿಂಗ್​ ಆಯಪ್​ಗಳಲ್ಲಂತೂ ಮೋಸ ಹೋದವರಿಗೆ ಲೆಕ್ಕವೇ ಇಲ್ಲ.

ಹೀಗೆ ಮೋಸ ಹೋದವರು, ಮರ್ಯಾದೆಗೆ ಅಂಜಿ ಕಂಪ್ಲೇಂಟ್​ ಕೊಡಲ್ಲ ಎನ್ನುವುದು ತಿಳಿಯುವ ಕಾರಣದಿಂದಲೇ ಚಾಲಾಕಿಗಳು ಇಂಥವರನ್ನೇ ಗಾಳ ಹಾಕ್ತಾರೆ. ಅಂಥದ್ದೇ ಒಂದು ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆತನೋ 26 ವರ್ಷದ ಸುಂದರ. ಒಬ್ಬ ಸುಂದರಿಯ ಹುಡುಕಾಟದಲ್ಲಿದ್ದ. ಇದಕ್ಕಾಗಿ ಆತ ಡೇಟಿಂಗ್​ ಅಪ್ಲಿಕೇಷನ್​ ಮೊರೆ ಹೋದ. ಅಲ್ಲೊಬ್ಬಳು ಸುಂದರಿ ಕಂಡಳು. ಪರಿಚಯವಾಯ್ತು, ಅವಳೇ ಇಶಾನಿ. ಆ ಆಯಪ್​ ಮೂಲಕವೇ ಮಾತು ಬೆಳೆದು ಲವ್ವೂ ಆಗೋಯ್ತು. ಇನ್ನೇನು, ಆ ಸುಂದರಿಯ ಬುಟ್ಟಿಗೆ ಈ ಯುವಕ ಬಿದ್ದಾಗಿತ್ತು. ತಾನು ಏನು ಹೇಳಿದ್ರೂ ಅವನು ಕೇಳ್ತಾನೆ ಎನ್ನುವ ಮಟ್ಟಿಗೆ ಇಶಾನಿ ಬಂದಳು. ಸಾಮಾನ್ಯವಾಗಿ, ಇಂಥ ಪ್ರಕರಣಗಳಲ್ಲಿ ಹೆಣ್ಣುಮಕ್ಕಳಿಗೆ ಐಷಾರಾಮಿ ಜೀವನದ ರುಚಿ ತೋರಿಸಿ, ಕೊನೆಗೆ, ನಿನ್ನ ನಗ್ನ ಫೋಟೋ ಕಳುಹಿಸು, ನಗ್ನ ದೇಹದ ವಿಡಿಯೋ ಮಾಡಿ ಕಳುಹಿಸು ಎಂದೆಲ್ಲಾ ಹೇಳುವುದು, ಐಷಾರಾಮಿ ಜೀವನದ ರುಚಿ ಕಂಡಾಕೆ ಹಾಗೆ ಮಾಡುವುದು, ಕೊನೆಗೆ ಆತ ಬ್ಲ್ಯಾಕ್​ಮೇಲ್​ ಮಾಡುವುದು… ಇವೆಲ್ಲಾ ಮಾಮೂಲು. ಆದರೆ ಈ ಸ್ಟೋರಿಯಲ್ಲಿ ಸ್ವಲ್ಪ ಟ್ವಿಸ್ಟ್​ ಇದೆ.

ಬಟ್ಟೆ ಕಳಚಿದ ಸುಂದರಿ

ಅದೇನೆಂದರೆ, ಈ ಯುವಕನನ್ನು ಬುಟ್ಟಿಗೆ ಹಾಕಿಕೊಂಡ ಮೇಲೆ ಆ ಸುಂದರಿ ವಿಡಿಯೋ ಕಾಲ್​ ಮಾಡಿ ತನ್ನೆಲ್ಲಾ ಬಟ್ಟೆಗಳನ್ನು ಕಳಚಿ ತೋರಿಸಿದ್ದಾಳೆ. ಯುವಕನಿಗೆ ಈಗ ಸ್ವರ್ಗಕ್ಕೆ ಮೂರೇ ಗೇಣು. ನಂತರ ಆಕೆ, ನಿನ್ನ ನಗ್ನ ಫೋಟೋ, ವಿಡಿಯೋ ಕಳುಹಿಸುವಂತೆ ಕೇಳಿದ್ದಾಳೆ. ಯುವಕ ಹಿರಿಹಿರಿ ಹಿಗ್ಗಿದ್ದಾನೆ. ಇನ್ನೇನು ತನ್ನ ಆಸೆಯೆಲ್ಲವೂ ನೆರವೇರಿತು ಎಂದುಕೊಂಡಿದ್ದಾನೆ. ಮುಂದೆ ಏನೇನು ಆಗಬಹುದು ಎಂದು ಸುಂದರ ಕನಸು ಕಂಡು, ಕನಸಿನಲ್ಲಿಯೇ ತೇಲಾಡಿದ್ದಾನೆ. ಇಶಾನಿ ಹೇಳಿದಂತೆ ತನ್ನ ಫೋಟೋ, ವಿಡಿಯೋ ಎಲ್ಲಾ ವಿವಿಧ ಭಂಗಿಗಳಲ್ಲಿ ಕಳುಹಿಸಿದ್ದಾನೆ. ಆದರೆ, ಇಷ್ಟಾಗುತ್ತಿದ್ದಂತೆಯೇ, ಆ ಸುಂದರಿ ತನ್ನ ಆಟ ಶುರು ಮಾಡಿದ್ದಾಳೆ. ಈ ವಿಡಿಯೋ, ಫೋಟೋ ಹಿಡಿದುಕೊಂಡು ಬ್ಲ್ಯಾಕ್​ಮೇಲ್​ ಮಾಡಿದ ಆಕೆ, 2 ಲಕ್ಷ ಕೊಡದಿದ್ದರೆ, ಇದನ್ನು ಲೀಕ್​ ಮಾಡೋದಾಗಿ ಹೇಳಿದ್ದಾಳೆ. ಆಗಲೇ ಯುವಕನಿಗೆ ತಾನು ಮೋಸ ಹೋಗಿದ್ದು ತಿಳಿದಿದೆ.

ವಿಧಿಯಿಲ್ಲದೇ ದುಡ್ಡನ್ನು ಕಳುಹಿಸಿದ್ದಾನೆ. ಬ್ಲ್ಯಾಕ್​ಮೇಲ್​ ಮಾಡುವವರು ಸುಮ್ಮನೇ ಇರ್ತಾರೆ. ಮತ್ತೊಂದಿಷ್ಟು ದುಡ್ಡು ಕೇಳಿದ್ದಾಳೆ ಸುಂದರಿ. ಆಗ ಎಚ್ಚೆತ್ತುಕೊಂಡ ಯುವಕ, ಆಗಿದ್ದು ಆಗಲಿ, ಮರ್ಯಾದೆ ಹೋದರೆ ಹೋಗಲಿ ಎಂದು ಆ ಸುಂದರಿ ವಿರುದ್ಧ ದೂರು ದಾಖಲಿಸಿದ್ದಾನೆ. ಹಣಕ್ಕಾಗಿ ಪದೇ ಪದೇ ಬೇಡಿಕೆ ಇಟ್ಟ ನಂತರ, ಯುವಕ ಬೆಂಗಳೂರಿನ ಸೆಂಟ್ರಲ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಣ ನೀಡದಿದ್ದರೆ ತನ್ನ ನಗ್ನ ವೀಡಿಯೊವನ್ನು ಪ್ರಕಟಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಬೆಚ್ಚಿಬಿದ್ದ ಪೊಲೀಸರು

ಕೊನೆಗೆ ಪೊಲೀಸರು ತನಿಖೆ ನಡೆಸಿದಾಗ ಬೆಚ್ಚಿಬಿದ್ದರು. ಏಕೆಂದರೆ, ಇಶಾನಿ ಹೆಸರಿನ ಆಕೆ, ಸುಂದರಿಯೂ ಅಲ್ಲ, ಹೋಗ್ಲಿ ಎಂದರೆ ಮನುಷ್ಯಳೇ ಅಲ್ಲ ಎನ್ನೋದು ಗೊತ್ತಾಯ್ತು. ಅವಳು ಕೃತಕ ಬುದ್ಧಿಮತ್ತೆ (AI) ಹೆಣ್ಣು. ಅಪರಾಧ ಮಾಡಲು ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಸ್ತ್ರೀ ಅವತಾರವನ್ನು ಬಳಸಕಾಗಿದೆ. ಇದು ದೊಡ್ಡ ಸೈಬರ್ ಸುಲಿಗೆ ಜಾಲದ ಭಾಗವಾಗಿದೆ ಎಂದು ಪೊಲೀಸರು ಕಂಡುಹೊಂದರು. ಸದ್ಯ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬ್ಯಾಂಕ್ ವಹಿವಾಟುಗಳು, UPI ಮತ್ತು ಡಿಜಿಟಲ್ ಹೆಜ್ಜೆಗುರುತುಗಳ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಅಪ್ಲಿಕೇಶನ್ ಬಳಕೆದಾರರಿಗೆ ಪೊಲೀಸ್ ಎಚ್ಚರಿಕೆ

ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ಸಂವಹನ ನಡೆಸುವಾಗ ಜಾಗರೂಕರಾಗಿರಲು ತನಿಖಾಧಿಕಾರಿಗಳು ಡೇಟಿಂಗ್ ಅಪ್ಲಿಕೇಶನ್ ಬಳಕೆದಾರರನ್ನು ಒತ್ತಾಯಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಅಪರಿಚಿತ ವ್ಯಕ್ತಿಗಳೊಂದಿಗೆ ನಿಕಟ ವಿಡಿಯೋ ಕರೆಗಳಲ್ಲಿ ತೊಡಗಬೇಡಿ ಮತ್ತು ಖಾಸಗಿ ವಿಷಯವನ್ನು ಎಂದಿಗೂ ಹಂಚಿಕೊಳ್ಳಬೇಡಿ. ಒಮ್ಮೆ ರೆಕಾರ್ಡ್ ಮಾಡಿದ ನಂತರ, ಅಂತಹ ವಿಷಯವು ಬ್ಲ್ಯಾಕ್‌ಮೇಲ್ ಮಾಡುವ ಸಾಧನವಾಗುತ್ತದೆ” ಎಂದು ಹೇಳಿದರು. ಈ ಪ್ರಕರಣವು ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಸಂಖ್ಯೆಗೆ ಮತ್ತೊಂದು ಕೊಂಡಿಯಾಗಿ ಸೇರಿಸುತ್ತದೆ, ಅಲ್ಲಿ ಕೃತಕ ಬುದ್ಧಿಮತ್ತೆಯನ್ನು ವ್ಯಕ್ತಿಗಳಂತೆ ನಟಿಸಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಸಂತ್ರಸ್ತರಿಗೆ ತಿಳಿಯುವ ಹೊತ್ತಿಗೆ ವಿಳಂಬವಾಗಿ ವಂಚನೆಯನ್ನು ಪತ್ತೆಹಚ್ಚುವುದು ಕಷ್ಟಕರವಾಗುತ್ತದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments