ಮುದ್ದೇಬಿಹಾಳ: ಮಕ್ಕಳು ಪುಸ್ತಕ ಓದುವತ್ತ ಹೆಚ್ಚಿನ ಆಸಕ್ತಿ ತೋರಿಸಬೇಕು. ಮೋಬೈಲ್, ಟಿವಿ ಮಿತಬಳಕೆ ಶೈಕ್ಷಣಿಕ ಭವಿಷ್ಯವನ್ನು ಉಜ್ವಲವಾಗಿ ರೂಪಿಸುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಶಿಕ್ಷಕ ಕೆ.ಎಚ್.ಚಿಮ್ಮಲಗಿ ಹೇಳಿದರು. ಹುಲ್ಲೂರ ಗ್ರಾಮದ ಹೊರವಲಯದಲ್ಲಿರುವ ಎಸ್.ಎನ್.ಡಿ.ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಮಕ್ಕಳ ಬೀಳ್ಕೊಡುಗೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳು ಹೊಸ ತಲೆಮಾರಿನವರಾಗಿದ್ದು ತುಂಬಾ ಜಾಣರಾಗಿದ್ದಾರೆ. ಸತತ ಪರಿಶ್ರಮದಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಅರಿತುಕೊಳ್ಳಬೇಕು. ಪರೀಕ್ಷೆ ಸಮೀಪಿಸುವವರೆಗೂ ಮಹತ್ವ ಅಂಶಗಳನ್ನು ಓದಿ ಮನನ ಮಾಡಿಕೊಂಡು ಪರೀಕ್ಷೆಯನ್ನು ದೃಢ ಮನಸ್ಸಿನಿಂದ ಎದುರಿಸಬೇಕು ಎಂದರು. ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಡಿ.ಕಪತನೂರ ಅವರು ಮಾತನಾಡಿ, ಶಾಲೆಯ ಎಲ್ಲ ಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ಅಂಕ ತೆಗೆಯುವ ಸಾಮರ್ಥ್ಯ ಗಳಿಸಿಕೊಳ್ಳಬೇಕು ಎಂದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಚ್.ಕೊಪ್ಪ ಅವರು ಮಾತನಾಡಿ, ಇದೇ ಮೊದಲ ಬಾರಿ ಶಾಲೆಯಿಂದ ಎಸ್.ಎಸ್.ಎಲ್.ಸಿ. ಬ್ಯಾಚ್ ಹೊರಹೋಗುತ್ತಿದೆ. ಇವರು ನನ್ನ ಮತ್ತು ಶಿಕ್ಷಕರ ಕನಸು ನನಸು ಮಾಡುವ ಮೂಲಕ ಹೆಚ್ಚಿನ ಅಂಕ ಗಳಿಸಿ ಮುಂದೆ ಬರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರಬೇಕು ಎಂದರು. ಗಣ್ಯರಾದ ಎಸ್.ಎಸ್.ಪಾಟೀಲ, ಗುರಪ್ಪ ಉಳ್ಳಾಗಡ್ಡಿ, ಸಂಸ್ಥೆಯ ಉಪಾಧ್ಯಕ್ಷೆ ಸುಮಿತ್ರಾ ಕೊಪ್ಪ, ಮುಖ್ಯಾಧ್ಯಾಪಕರು, ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕ ದಶರಥ ಸ್ವಾಗತಿಸಿದರು. ಎಚ್.ಆರ್.ಬಾಗಲಕೋಟ ನಿರೂಪಿಸಿದರು. ಶಿಕ್ಷಕ ಮುದ್ದಾಪುರ ವಂದಿಸಿದರು.
ವರದಿ: ಮುತ್ತು ವಡವಡಗಿ, 9880143505

