ನ. 30ರವರೆಗೆ ನಿರಂತರ ನೀರು ಹರಿಸಲು ಆಗ್ರಹಿಸಿ ದೇವಾಪುರ ಕ್ರಾಸ್ನಲ್ಲಿ ರಾಷ್ಟ್ರೀಯ ಹೆದ್ದಾರಿ 150A , ತಡೆದು ಬೃಹತ್ ಪ್ರತಿಭಟನೆ
ವಾರಾಬಂದಿ ರದ್ದುಗೊಳಿಸಿ, ರೈತರಿಗೆ ಏಳು ಗಂಟೆ ನಿರಂತರ ವಿದ್ಯುತ್ ಪೂರೈಸಲು ಒತ್ತಾಯ; ಬೇಡಿಕೆ ಈಡೇರದಿದ್ದರೆ ಅ. 27ರಿಂದ ಉಗ್ರ ಹೋರಾಟದ ರೂಪುರೇಷೆ ಎಚ್ಚರಿಕೆ
ಸುರಪುರ, ಅ. 24: ನಾರಾಯಣಪುರದ ಬಸವಸಾಗರ ಜಲಾಶಯದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಜಾರಿಯಲ್ಲಿರುವ ವಾರಾಬಂದಿ ಪದ್ಧತಿಯನ್ನು ರದ್ದುಗೊಳಿಸಿ, ನವೆಂಬರ್ 30ರವರೆಗೆ ನಿರಂತರ ನೀರು ಹರಿಸಬೇಕು ಹಾಗೂ ರೈತರ ಪಂಪ್ಸೆಟ್ಗಳಿಗೆ ಪ್ರತಿದಿನ 10 ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ನೇತೃತ್ವದಲ್ಲಿ ನೂರಾರು ರೈತರು ಮತ್ತು ಅನೇಕ ಸಂಘಟನೆಗಳ ಸಾಮೂಹಿಕ ಮುಖಂಡರೊಂದಿಗೆ ಸುರಪುರ ತಾಲೂಕಿನ ದೇವಾಪುರ ಕ್ರಾಸ್ನಲ್ಲಿ ಜೇವರ್ಗಿ – ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150 ಎ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ರೈತಪರ, ಕನ್ನಡಪರ, ದಲಿತಪರ ಸಂಘಟನೆಗಳ ಪ್ರಗತಿಪರ ಚಿಂತಕರೊಂದಿಗೆ ಮುಖಂಡರು, , ಮತ್ತು ಪಕ್ಷಾತೀತವಾಗಿ ಅನೇಕ ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರ ಹಕ್ಕಿನ ನೀರಿಗಾಗಿ ಧ್ವನಿ ಎತ್ತಿದರು.
ರೈತರಿಗಾಗಿ 24 ಗಂಟೆಯೂ ಹೋರಾಟಕ್ಕೆ ಸಿದ್ಧ
ಪ್ರತಿಭಟನೆಯಲ್ಲಿ ಮಾತನಾಡಿದ ರಾಜುಗೌಡ, “ರೈತರ ಕಣ್ಣಲ್ಲಿ ಕಣ್ಣೀರು ಬರಲು ನಾನು ಬಿಡುವುದಿಲ್ಲ. ಅನ್ನದಾತರು ಯಾವಾಗ ಕರೆದರೂ ಅವರಿಗಾಗಿ ಹಗಲು-ರಾತ್ರಿ ಎನ್ನದೆ 24 ಗಂಟೆಯೂ ಹೋರಾಟಕ್ಕೆ ಸಿದ್ಧನಿದ್ದೇನೆ. ಅನ್ನದಾತರು ಇದ್ದರೆ ಮಾತ್ರ ನಾವು ಬದುಕಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ರೈತರ ಬದುಕಿನ ಪ್ರಶ್ನೆಯಲ್ಲಿ ದಯವಿಟ್ಟು ರಾಜಕೀಯ ಮಾಡಬೇಡಿ. ರೈತರಿಗಾಗಿ ಎಲ್ಲರೂ ಕೈಚಾಚಿ, ಅವರ ಹೊಲಗಳಿಗೆ ನೀರು ಹರಿಸಲು ಸಹಕರಿಸಿ” ಎಂದು ಮನವಿ ಮಾಡಿದರು.
ಅಧಿಕಾರದಲ್ಲಿದ್ದಾಗಲೂ ರೈತರ ಪರವಾಗಿ ಕೆಲಸ ಮಾಡಿದ್ದೇನೆ; ಅಧಿಕಾರದಲ್ಲಿ ಇಲ್ಲದಿದ್ದರೂ ರೈತರ ಸಮಸ್ಯೆಗಳಿಗಾಗಿ ಹೋರಾಟ ಮುಂದುವರಿಸುತ್ತೇನೆ. ರೈತರ ಹೊಲಗಳಿಗೆ ನೀರು ಹರಿಯುವವರೆಗೆ ಅವರ ಬೆನ್ನಿಗೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
ನಿರಂತರ ನೀರು ಹರಿಸಲು ಆಗ್ರಹ
ಕೃಷ್ಣಾ ಭಾಗ್ಯ ಜಲ ನಿಗಮದ ನೀರಾವರಿ ಸಲಹಾ ಸಮಿತಿಯು ಅಕ್ಟೋಬರ್ 15ರಂದು ನಡೆದ ಸಭೆಯಲ್ಲಿ 10 ದಿನ ನೀರು ಹರಿಸಿ, ಎಂಟು ದಿನ ಸ್ಥಗಿತಗೊಳಿಸುವ ಪದ್ಧತಿಯಂತೆ ನವೆಂಬರ್ 12ರವರೆಗೆ ನೀರು ಪೂರೈಸಲು ನಿರ್ಧರಿಸಿದೆ. ಆದರೆ ಮಳೆಯ ಕೊರತೆ ಹಾಗೂ ಬೆಳೆಗಳಿಗೆ ನೀರಿನ ಅಗತ್ಯ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಮರುಪರಿಶೀಲಿಸಿ, ವಾರಾಬಂದಿ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಾಲುವೆಗಳ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಭತ್ತ, ಶೇಂಗಾ, ಸೂರ್ಯಕಾಂತಿ, ಸಜ್ಜೆ, ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗಳು ಹೂ ಬಿಡುವ ಹಾಗೂ ಕಾಳು ಕಟ್ಟುವ ಹಂತದಲ್ಲಿದ್ದು, ನೀರಿನ ಕೊರತೆಯಿಂದ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಪ್ರತಿ ಎಕರೆಗೆ ₹75,000ರಿಂದ ₹80,000ವರೆಗೆ ವೆಚ್ಚ ಮಾಡಿರುವ ರೈತರು ಭಾರಿ ನಷ್ಟದ ಭೀತಿಯಲ್ಲಿದ್ದಾರೆ ಎಂದು ಹೋರಾಟಗಾರರು ತಿಳಿಸಿದರು.
ಏಳು ಗಂಟೆ ನಿರಂತರ ವಿದ್ಯುತ್ ಪೂರೈಕೆಗೆ ಒತ್ತಾಯ
ಸುರಪುರ ಮತ್ತು ಹುಣಸಗಿ ತಾಲೂಕುಗಳಲ್ಲಿ ರೈತರ ಪಂಪ್ಸೆಟ್ಗಳಿಗೆ ನಿಗದಿತ ಅವಧಿಯ ವಿದ್ಯುತ್ ಪೂರೈಕೆಯಲ್ಲಿ ಪದೇಪದೇ ವ್ಯತ್ಯಯ ಉಂಟಾಗುತ್ತಿದೆ ಎಂಬ ದೂರುಗಳಿವೆ. ಇದರಿಂದ ಬೆಳೆಗಳಿಗೆ ನೀರು ಹಾಯಿಸಲು ತೊಂದರೆಯಾಗುತ್ತಿದೆ. ರೈತರಿಗೆ ಪ್ರತಿದಿನ ಕನಿಷ್ಠ ಏಳು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಲಾಯಿತು.
ಅಲ್ಲದೆ, ನಾರಾಯಣಪುರ ಜಲಾಶಯದಿಂದ ತೆಲಂಗಾಣಕ್ಕೆ ಹರಿಸಲಾಗುತ್ತಿರುವ ನೀರಿನ ಪ್ರಮಾಣವನ್ನು ಪರಿಶೀಲಿಸಿ, ರಾಜ್ಯದ ರೈತರ ಬೆಳೆಗಳಿಗೆ ಅಗತ್ಯವಿರುವ ನೀರಿನ ಲಭ್ಯತೆಯನ್ನು ಖಚಿತಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಅಧಿಕಾರಿಗಳಿಂದ ಮನವಿ ಸ್ವೀಕಾರ
ಪ್ರತಿಭಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ಸ್ಥಳೀಯ ಪೊಲೀಸ್ ಅಧಿಕಾರಿಗಳು, ಸುರಪುರ ತಾಲೂಕಿನ ದಂಡಾಧಿಕಾರಿಗಳು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಆಗಮಿಸಿ ಹೋರಾಟಗಾರರ ಮನವಿ ಸ್ವೀಕರಿಸಿದರು.
ಯಾದಗಿರಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ, ವಾರಾಬಂದಿ ಪದ್ಧತಿ ರದ್ದುಗೊಳಿಸಿ ನವೆಂಬರ್ 30 ರವರೆಗೆ ನಿರಂತರ ನೀರು ಹರಿಸಬೇಕು ಹಾಗೂ ರೈತರಿಗೆ ಹತ್ತು ಗಂಟೆಗಳ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಲಾಯಿತು. ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಅ. 27ರಿಂದ ಉಗ್ರ ಹೋರಾಟದ ಎಚ್ಚರಿಕೆ
ರೈತರ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ ನಿರಂತರ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಅಕ್ಟೋಬರ್ 27ರಿಂದ ಮುಂದಿನ ಹಂತದ ಉಗ್ರ ಹೋರಾಟ ನಡೆಸಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ರಾಜುಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಮುತ್ತಿಗೆ ಹಾಕುವ ಹೋರಾಟವನ್ನೂ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
“ರೈತರ ಹೊಲಗಳು ಹಸಿರಾಗಬೇಕು, ಅನ್ನದಾತರ ಕುಟುಂಬಗಳಲ್ಲಿ ನೆಮ್ಮದಿ ನೆಲೆಸಬೇಕು. ನೀರಿನ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲರೂ ಪಕ್ಷಾತೀತವಾಗಿ ರೈತರ ಪರವಾಗಿ ನಿಲ್ಲಬೇಕು. ಸರ್ಕಾರ ತಕ್ಷಣ ನಿರ್ಧಾರ ಕೈಗೊಂಡು ರೈತರ ಬೆಳೆಗಳನ್ನು ಉಳಿಸಬೇಕು” ಎಂದು ರಾಜುಗೌಡ ಆಗ್ರಹಿಸಿದರು. ಹಲವಾರು ರೈತ ಮುಖಂಡರು ಸಭೆಯಲ್ಲಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಬಿಜೆಪಿ ಅಧ್ಯಕ್ಷರಾದ ವೇಣು ಮಾಧವ ನಾಯಕ ಸಿದ್ದನಗೌಡ ಕರಿಭಾವಿ, ಯಲ್ಲಪ್ಪಕುರುಕುಂದಿ,ಮಸ್ತಾನ ನಾಯಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೃಷಿ ಅಭಿವೃದ್ಧಿ ಸೇನೆ ರಾಜ್ಯಅಧ್ಯಕ್ಷರು, ದೇವರಾಜ ಬಾಗಲಕೋಟ ಜಿಲ್ಲಾ ರೈತ ಸಂಘದ ಅಧ್ಯಕ್ಷರು,H C ಪಾಟೀಲ್ ಮಾಜಿ ಜಿಲ್ಲಾಪಂಚಾಯತ್ ಸದಸ್ಯರು, ಸುರೇಶ್ ಆರ್ ಸಜ್ಜನ್ ಮಾಜಿ ಡಿಸಿಸಿ ಬ್ಯಾಂಕ್ , ಕಲಬುರ್ಗಿ ಅಧ್ಯಕ್ಷರು ಅಯ್ಯಣ್ಣ ಹಾಲಭಾವಿ ರಾಜ್ಯ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷರು, ಟಿ ಎನ್ ಭೀಮು ನಾಯಕ ಕರವೇ ಜಿಲ್ಲಾ ಅಧ್ಯಕ್ಷರು, ವೆಂಕಟೇಶ್ ನಾಯಕ ಬೈರಿಮರಡಿ ಕರವೇ ಅಧ್ಯಕ್ಷರು ಸುರಪುರ,ಯಲ್ಲಪ್ಪ ನಾಯಕ ಕಭಾಡಗೇರಾ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷರು,ಚಂದ್ರು ಎಲಿಗಾರ್ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷರು,ರಂಗನಾಥ ನಾಯಕ ಬೈರಿಮರಡಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಅಧ್ಯಕ್ಷರು,ಶರಣಪ್ಪ ಬೈರಿಮರಡಿ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷರು ವಿವಿಧ ರೈತಪರ, ಕನ್ನಡಪರ ಹಾಗೂ ದಲಿತಪರ ಸಂಘಟನೆಗಳ ಮುಖಂಡರು, ವಿವಿಧ ಪಕ್ಷಗಳ ಕಾರ್ಯಕರ್ತರು, ಸ್ವಾಮೀಜಿಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು ಹಾಗೂ ಸಾವಿರಾರು ರೈತರು ಪಾಲ್ಗೊಂಡಿದ್ದರು.
.

