ಮುದ್ದೇಬಿಹಾಳ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಪಂ ಸಿಇಓಗೆ ವರ್ಗಾಯಿಸುವ ಕಡತ ಹಿಂಪಡೆಯಬೇಕು, ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿದ್ದ ಪರೀಕ್ಷಾ ವಿಭಾಗವನ್ನು ಹಿಂದಿನಂತೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶನಾಲಯಕ್ಕೆ ವರ್ಗಾಯಿಸಬೇಕು ಎನ್ನುವುದೂ ಸೇರಿದಂತೆ 6 ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಈ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ–1ರ ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ರಾಜ್ಯದ ಎಲ್ಲೆಡೆ ಬಹಿಷ್ಕರಿಸಿ ಪಿಯು ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕಾಲೇಜುಗಳ ಪ್ರಾಂಶುಪಾಲರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಪಿಯು ಕಾಲೇಜು ಉಪನ್ಯಾಸಕರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷ ಐ.ಬಿ.ಹಿರೇಮಠ ತಿಳಿಸಿದ್ದಾರೆ. ತಹಶೀಲ್ದಾರಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಪ್ರಸ್ತುತ ಇರುವ 320:1 ವಿದ್ಯಾರ್ಥಿ–ಉಪನ್ಯಾಸಕರ ಅನುಪಾತವನ್ನು ಎನ್.ಸಿ.ಇ.ಆರ್.ಟಿ ಮಾರ್ಗಸೂಚಿಗಳನ್ವಯ ಮರುನಿಗದಿಪಡಿಸಬೇಕು. ಕಳೆದ ಮೂರು ವರ್ಷಗಳಿಂದ ಪರಿಷ್ಕರಿಸದಿರುವ ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಭತ್ಯೆ ಹಾಗೂ ಪರೀಕ್ಷಾ ಸಂಭಾವನೆಯನ್ನು ತಕ್ಷಣ ಪರಿಷ್ಕರಿಸಿ, ಹಿಂದಿನ ವರ್ಷದ ಬಾಕಿ ಇರುವ ಸಂಭಾವನೆಗಳನ್ನು ತಕ್ಷಣ ಪಾವತಿಸಬೇಕು. ಪ್ರಥಮ ಅದ್ಯತೆಯಾಗಿ ಸಂಭವಾನೆಗಳನ್ನು ಖಾಸಗಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರಿಗೆ ವಿತರಿಸಬೇಕು. ಕಾರ್ಯಭಾರ ಕೊರತೆ ಇರುವ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಿಗೊಳಿಸುವ ಆದೇಶವನ್ನು ಹಿಂಪಡೆದು, ಅವರಿಗೆ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯಭಾರ ನೀಡುವ ಕುರಿತು ಸಲ್ಲಿಸಲಾದ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು. ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಹಾಗೂ ಪದೋನ್ನತಿ ಹೊಂದಿದ ಪ್ರಾಂಶುಪಾಲರ ಸ್ಥಳನಿಯುಕ್ತಿಯ ಸಂದರ್ಭದಲ್ಲಿ ಎಲ್ಲಾ ಖಾಲಿ ಹುದ್ದೆಗಳನ್ನು ಯಾವುದೇ ನಿರ್ಬಂಧವಿಲ್ಲದೆ ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಬೇಕು ಎನ್ನುವುದು ನಮ್ಮ ಇನ್ನಿತರ ಬೇಡಿಕೆಗಳಾಗಿವೆ ಎಂದರು.-
ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕಾರ: ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಐ.ಬಿ.ಹಿರೇಮಠ ಎಚ್ಚರಿಕೆ
RELATED ARTICLES

