Tuesday, October 27, 2026
HomeUncategorizedಕೆಆರ್ ಪುರಂ ನಿಂದ ಹೆಬ್ಬಾಳ ವರೆಗಿನ ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಅಧಿಕಾರಿಗಳಿಗೆ...

ಕೆಆರ್ ಪುರಂ ನಿಂದ ಹೆಬ್ಬಾಳ ವರೆಗಿನ ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರು ಸೂಚನೆ

  • ನಿಗದಿತ ಅವಧಿಗಿಂತ ಈಗಾಗಲೇ ಒಂದು ವರ್ಷ ವಿಳಂಬ
  • ಇನ್ನೂ ವಿಳಂಬಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳಿಗೆ ಗಡುವು
  • ಅಕ್ಟೋಬರ್ ಅಂತ್ಯದೊಳಗೆ ಮೆಟ್ರೋ ಪರೀಕ್ಷಾರ್ಥ ಸಂಚಾರ

ಬೆಂಗಳೂರು ಅಕ್ಟೋಬರ್ 22:

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಾರಿಗೆ ಹಾಗೂ ಸಂಚಾರ ದಟ್ಟಣೆ (Traffic) ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮೆಟ್ರೋ ಜಾಲ ವಿಸ್ತರಣೆ, ಉಪನಗರ ರೈಲು ಯೋಜನೆ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ದೀರ್ಘಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಬಹು ನಿರೀಕ್ಷಿತವಾದ ಕೆಆರ್ ಪುರಂ ನಿಂದ ಹೆಬ್ಬಾಳ ವರೆಗಿನ ಬ್ಲೂ ಲೈನ್ ಮೆಟ್ರೋ ಕಾಮಗಾರಿಯನ್ನು ಶೀಘ್ರ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡರು ತಿಳಿಸಿದರು.

ಗುರುವಾರ ಬ್ಲೂ ಲೈನ್ ಮೆಟ್ರೋ ಕಾಮಗಾರಿ ಸ್ಥಳ ಪರಿಶೀಲನೆ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಪತ್ರಕರ್ತರ ಜೊತೆ ಮಾಹಿತಿ ಹಂಚಿಕೊಂಡ ಅವರು, “ಬೆಂಗಳೂರು ನಗರಕ್ಕೆ ಅತ್ಯಂತ ಅವಶ್ಯಕವಾದ ಕೆ.ಆರ್.ಪುರದಿಂದ ಹೆಬ್ಬಾಳ ಮತ್ತು ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗಿನ ಮೆಟ್ರೋ ಮಾರ್ಗವು (2A ಮತ್ತು 2B ಹಂತ) ಬ್ಲೂ ಲೈನ್ ಅಡಿಯಲ್ಲಿ ಬರುತ್ತದೆ. ಕೆ.ಆರ್.ಪುರದಿಂದ ಏರ್‌ಪೋರ್ಟ್‌ಗೆ 38.44 ಕಿ.ಮೀ ಮತ್ತು ಕೆ.ಆರ್.ಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ 19.75 ಕಿ.ಮೀ. ಇವೆರಡನ್ನು ಸೇರಿಸಿದರೆ ಒಟ್ಟು ಸುಮಾರು 60 ಕಿ.ಮೀ ಉದ್ದದ ಲೈನ್ ಆಗಲಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರ ಹಾಗೂ ಹೆಬ್ಬಾಳ ಮಾರ್ಗವಾಗಿ ಏರ್‌ಪೋರ್ಟ್‌ವರೆಗೆ ಒಟ್ಟು ಸುಮಾರು 58-59 ಕಿ.ಮೀ ವಿಸ್ತೀರ್ಣದ ಈ ಯೋಜನೆ ಪೂರ್ಣಗೊಂಡರೆ ಬೆಂಗಳೂರು ಜನರಿಗೆ ದೊಡ್ಡ ಮಟ್ಟದ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ” ಎಂದರು.

ಆದರೆ, ಕೆ.ಆರ್.ಪುರದಿಂದ ನಾಗವಾರ ಮತ್ತು ಅಲ್ಲಿಂದ ಹೆಬ್ಬಾಳದವರೆಗಿನ ಮಾರ್ಗವು ಅತ್ಯಂತ ಸಂಕೀರ್ಣವಾಗಿದ್ದು, ಕಾಮಗಾರಿಗಳು ತಡವಾಗಿವೆ. ಕೆ.ಆರ್.ಪುರಂ ಬಳಿ 2A ಹಂತದ ಕಾಮಗಾರಿ ಆರಂಭಿಸಲು ಮರಗಳನ್ನು ಕಡಿಯುವುದಕ್ಕೆ ನ್ಯಾಯಾಲಯದಿಂದ ಒಂದು ವರ್ಷ ಕಾಲ ತಡೆಯಾಜ್ಞೆ ಇದ್ದ ಕಾರಣ, ಕಾಮಗಾರಿ ನಿಗದಿತ ಅವಧಿಗಿಂತ ಕನಿಷ್ಠ ಒಂದು ವರ್ಷ ವಿಳಂಬವಾಗಿದೆ. ಇತರೆ ನಗರಗಳಲ್ಲಿ ಮೆಟ್ರೋ ಕಾಮಗಾರಿಗೆ ಮರ ಕಡಿಯಲು ಹೈಕೋರ್ಟ್ ವರೆಗೆ ಹೋಗುವ ಅಗತ್ಯವಿರುವುದಿಲ್ಲ, ಆದರೆ ಬೆಂಗಳೂರಿನಲ್ಲಿ ಪಿಐಎಲ್ ಹಾಕಿ, ಟ್ರೀ ಕಮಿಟಿ ಮತ್ತು ಹೈಕೋರ್ಟ್ ಅನುಮತಿ ಪಡೆದು, ಪ್ರತಿಯೊಂದು ಮರ ಕಡಿಯುವುದಕ್ಕೂ ಕಠಿಣವಾದ ಪ್ರಕ್ರಿಯೆಯನ್ನು ಪಾಲಿಸಬೇಕಾಗಿದೆ.

ಇದರ ಜೊತೆಗೆ, ವೀರಣ್ಣಪಾಳ್ಯದಿಂದ ಹೆಬ್ಬಾಳದವರೆಗಿನ ಕಾಮಗಾರಿ ಸೇರಿದಂತೆ ಹಲವು ಕಡೆಗಳಲ್ಲಿ ಕಾವೇರಿ ನೀರು ಸರಬರಾಜು ಪೈಪ್‌ಲೈನ್‌ಗಳು ಮತ್ತು ಒಳಚರಂಡಿ ಲೈನ್‌ಗಳು ಅಡ್ಡಿಯಾಗಿವೆ. ಇವುಗಳನ್ನು ತೆರವುಗೊಳಿಸಿ ಹೊಸ ಲೈನ್‌ಗಳನ್ನು ಹಾಕಲು ಸುಮಾರು 6 ರಿಂದ 8 ತಿಂಗಳು ಕಾಲ ವಿಳಂಬವಾಗಿದೆ. ಹೊರವರ್ತುಲ ರಸ್ತೆಯಲ್ಲಿ ಅತಿಯಾದ ವಾಹನ ದಟ್ಟಣೆ ಇರುವುದರಿಂದ, ಹಗಲಿನಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ಕೇವಲ ರಾತ್ರಿ 7 ಗಂಟೆಯಿಂದ ಬೆಳಗಿನ ಜಾವದವರೆಗೆ ಮಾತ್ರ ಕೆಲಸ ಮಾಡಬೇಕಾಗಿರುವುದು ಮತ್ತೊಂದು ತೊಂದರೆಯಾಗಿದೆ.

ಇಂತಹ ಸಂಕೀರ್ಣವಾದ ಕಾಮಗಾರಿಗಳನ್ನು ಮಾಡುವಾಗ ಸಣ್ಣಪುಟ್ಟ ಸಮಸ್ಯೆಗಳು ಬರುವುದು ಸಹಜವಾದರೂ, ಸಂಬಂಧಪಟ್ಟ ಗುತ್ತಿಗೆದಾರರು ನಿರೀಕ್ಷಿತ ಮಟ್ಟದಲ್ಲಿ ಮತ್ತು ವೇಗವಾಗಿ ಸ್ಪಂದಿಸುತ್ತಿಲ್ಲ. ಆದರೂ ಸರ್ಕಾರದ ಕಡೆಯಿಂದ ಅವರ ಬೆನ್ನೇರಿ ಕೆಲಸವನ್ನು ಮಾಡಿಸಲು ನಿರಂತರ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಒಂದು ವರ್ಷ ತಡವಾಗಿದ್ದು, ಇನ್ನೂ ವಿಳಂಭ ಮಾಡದೆ ಅಕ್ಟೋಬರ್ ಕೊನೆಯೊಳಗೆ ಟ್ರಯಲ್ ರನ್ ಮಾಡಬೇಕು ಎಂದು ತಾಕೀತು ಮಾಡಿದ್ದೇನೆ ಎಂದು ವಿವರಿಸಿದರು.

ನಿರ್ದಿಷ್ಟ ಮಾರ್ಗಗಳ ಗುರಿಗಳು:
ಕೆ.ಆರ್.ಪುರಂ – ಸೆಂಟ್ರಲ್ ಸಿಲ್ಕ್ ಬೋರ್ಡ್
* ಮಾರ್ಗ: ಈ ತಿಂಗಳ ಕೊನೆಗೆ ಟ್ರ್ಯಾಕ್ ಮೇಲೆ ಟ್ರಯಲ್ ರನ್ ಆರಂಭಿಸಲು ಸೂಚಿಸಲಾಗಿದೆ.
* ನವೆಂಬರ್ ಮೊದಲ ವಾರದಿಂದ ಒಂದೊಂದೇ ನಿಲ್ದಾಣಗಳನ್ನು ರನ್ ಮಾಡಿಕೊಂಡು ಹೋಗಿ, ಕೆ.ಆರ್.ಪುರದಿಂದ ಮಾರತ್‌ಹಳ್ಳಿವರೆಗೆ ಟ್ರೈನ್ ಸಂಚರಿಸುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
* ಮುಂದಿನ ವರ್ಷದ ಮಧ್ಯಭಾಗದಷ್ಟೊತ್ತಿಗೆ (ಸುಮಾರು 8 ರಿಂದ 10 ತಿಂಗಳಲ್ಲಿ) ಕೆ.ಆರ್.ಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ಕಮರ್ಷಿಯಲ್ ಆಗಿ ರೈಲುಗಳ ಆಪರೇಷನ್ ಮಾಡಲು ಗುರಿ ಹೊಂದಲಾಗಿದೆ.

ಕೆ.ಆರ್.ಪುರಂ – ಹೆಬ್ಬಾಳ – ವಿಮಾನ ನಿಲ್ದಾಣ
* ಮಾರ್ಗ: ಹೆಬ್ಬಾಳದಿಂದ ವಿಮಾನ ನಿಲ್ದಾಣದ ವರೆಗಿನ ಮಾರ್ಗದಲ್ಲಿ ಮುಂದಿನ ವರ್ಷದ ಕೊನೆಗೆ (ಅಕ್ಟೋಬರ್-ನವೆಂಬರ್ ವೇಳೆಗೆ) ಹೇಗಾದರೂ ಮಾಡಿ ಟ್ರೈನ್ ರನ್ ಮಾಡಲೇಬೇಕೆಂದು ನಿರ್ಧರಿಸಲಾಗಿದೆ.
* ನವೆಂಬರ್ ಮೊದಲ ವಾರದಲ್ಲಿ ಟ್ರಯಲ್ ರನ್ ಆರಂಭಿಸಿ, ಮಾರತ್‌ಹಳ್ಳಿ ಅಥವಾ ಹೆಬ್ಬಾಳದವರೆಗೆ ರೈಲುಗಳನ್ನು ಪುಶ್ ಮಾಡುವ ಕೆಲಸಗಳಾಗಬೇಕು ಎಂದು ತಿಳಿಸಲಾಗಿದೆ.

ಪಿಂಕ್ ಲೈನ್ ಮೆಟ್ರೋ ಕಾರ್ಯಾಚರಣೆ ಮತ್ತು ಪ್ರಗತಿಗೆ

ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಇರುವ ಸುಮಾರು 7.5 ಕಿ.ಮೀ ಎಲಿವೇಟೆಡ್ (ಮೇಲ್ಮಾರ್ಗ) ವಿಭಾಗದ ಎಲ್ಲಾ ಟ್ರಯಲ್‌ಗಳು ಈಗಾಗಲೇ ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಕಳೆದ 7-8 ತಿಂಗಳಿಂದ ಇದಕ್ಕೆ ಸಂಬಂಧಿಸಿದ ನಾನಾ ಸುರಕ್ಷತಾ ಮತ್ತು ಎಲೆಕ್ಟ್ರಿಕಲ್ ಪರೀಕ್ಷೆಗಳು ನಡೆದಿವೆ.

ಮುಂದಿನ 4-5 ದಿನಗಳಲ್ಲಿ ಕಾರ್ಯಾಚರಣೆಗೆ ಅಧಿಕೃತ ಅನುಮತಿ ಸಿಗುವ ನಿರೀಕ್ಷೆಯಿದೆ. ಈ ಭಾಗವನ್ನು ಶೀಘ್ರವಾಗಿ ಉದ್ಘಾಟಿಸಲು ದಿನಾಂಕ ನಿಗದಿಪಡಿಸುವಂತೆ ಕೋರಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯಲಾಗಿದೆ. ಆದಾಗ್ಯೂ, ಮುಖ್ಯಮಂತ್ರಿಗಳು ಪತ್ರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ಲಖಿತ ಅಥವಾ ಮೌಖಿಕ ಪ್ರತಿಕ್ರಿಯೆ ಅಥವಾ ದಿನಾಂಕದ ಬಗ್ಗೆ ಅಧಿಕೃತ ಉತ್ತರ ಬಂದಿಲ್ಲ. ಮುಂಬರುವ ದಿನಗಳಲ್ಲಿ ಕೇಂದ್ರ ಸಚಿವರನ್ನು ನೇರವಾಗಿ ಭೇಟಿ ಮಾಡಿ ಮನವಿ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.

ಹೊರವರ್ತುಲ ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ನೀಡಿ

ಹೊರವರ್ತುಲ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಮುಗಿದಿದ್ದರೂ ಕೆಲವೆಡೆ ಅನಗತ್ಯವಾಗಿ ಬ್ಯಾರಿಕೇಡ್ ಹಾಕಿ ಟ್ರಾಫಿಕ್ ಸಮಸ್ಯೆಯನ್ನು ಉಲ್ಬಣಗೊಳಿಸಲಾಗುತ್ತಿದೆ. ಇದು ಸರಿಯಲ್ಲ, ಹೀಗಾಗಿ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದರು.

ಬಾಕ್ಸ್..

ಉಪನಗರ ರೈಲು (Suburban Rail) ಮತ್ತು ಸಾರ್ವಜನಿಕ ಸಾರಿಗೆ ಅಭಿವೃದ್ಧಿ

ಮೆಟ್ರೋದೊಂದಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯಡಿ ಬೆಂಗಳೂರು ಸುತ್ತಮುತ್ತ 148 ಕಿ.ಮೀ ವ್ಯಾಪ್ತಿಯ ಉಪನಗರ ರೈಲು ಜಾಲವನ್ನು ವಿಸ್ತರಿಸಲು ಕಾಮಗಾರಿಗಳು ನಡೆಯುತ್ತಿವೆ. 2030ರ ಏಪ್ರಿಲ್ ವೇಳೆಗೆ ಈ ಯೋಜನೆಯನ್ನು ಸಂಪೂರ್ಣಗೊಳಿಸಲು ಗುರಿ ಇಡಲಾಗಿದ್ದು, ಸುಮಾರು 23,000 ಕೋಟಿ ರೂ. ಅನುದಾನವನ್ನು ಇದಕ್ಕೆ ವೆಚ್ಚ ಮಾಡಲಾಗುತ್ತಿದೆ.

ಬಿಎಂಟಿಸಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸುಮಾರು 7,000 ಬಸ್‌ಗಳನ್ನು ಹೊಂದಿರುವ ಬಿಎಂಟಿಸಿಗೆ, ಮುಂಬರುವ ದಿನಗಳಲ್ಲಿ ಹೆಚ್ಚುವರಿಯಾಗಿ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಸರ್ಕಾರದಿಂದ ಒಪ್ಪಿಗೆ ನೀಡಲಾಗಿದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಇವೆಲ್ಲವೂ ಕಾರ್ಯರೂಪಕ್ಕೆ ಬಂದರೆ ನಗರದ ಟ್ರಾಫಿಕ್ ಸಮಸ್ಯೆಗೆ ಶೇ. 50ರಷ್ಟು ಪರಿಹಾರ ಸಿಗಲಿದೆ.

ಸಾರ್ವಜನಿಕರು ಮೆಟ್ರೋ ಕಾಮಗಾರಿಗಳ ವಿಳಂಬದಿಂದ ಬೇಸತ್ತಿರುವುದು ಸತ್ಯ ಹೀಗಾಗಿಯೇ ಸ್ವತಃ ನಾನು ಅಧಿಕಾರಿಗಳ ಜೊತೆಗೂಡಿ ಮೆಟ್ರೋ ಕಾಮಗಾರಿ ಸ್ಥಳ ಪರಿಶೀಲನೆ ನಡೆಸುತ್ತಿದ್ದೇನೆ. ಕಾಮಗಾರಿಯಲ್ಲಿ ಈಗಾಗಲೇ ವಿಳಂಬವಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಹೆಚ್ಚಿನ ವಿಳಂಬವಾಗದಂತೆ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ಸಹ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡರು ಸ್ಪಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments