Monday, August 17, 2026
Homeನಿಮ್ಮ ಜಿಲ್ಲೆಕಾವೇರಿ ವಿಷಯದಲ್ಲಿ ಸಿಎಂ ಮೊಸಳೆ ಕಣ್ಣೀರು: ವಿಜಯೇಂದ್ರ

ಕಾವೇರಿ ವಿಷಯದಲ್ಲಿ ಸಿಎಂ ಮೊಸಳೆ ಕಣ್ಣೀರು: ವಿಜಯೇಂದ್ರ


• ರೈತರ ವಿಷಯದಲ್ಲಿ ಕಪಟ ನಾಟಕ
• ರೈತರ ಸಂಕಷ್ಟ ಮರೆತ ಮುಖ್ಯಮಂತ್ರಿ
• ತಮಿಳುನಾಡಿಗೆ ಈಗಾಗಲೇ ಸಾಕಷ್ಟು ನೀರು
• ರೈತರಿಗೆ ಅನ್ಯಾಯ ಮಾಡಲು ಅವಕಾಶ ಕೊಡುವುದಿಲ್ಲ

ಮಂಡ್ಯ: ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಪಡೆದ ಬಳಿಕ ಅವರಿಗೆ ರೈತರು ಮತ್ತು ಅವರ ಸಂಕಷ್ಟ ಮರೆತುಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಇಂದು ಶ್ರೀರಂಗಪಟ್ಟಣದ ಕೆ.ಆರ್.ಎಸ್ ಡ್ಯಾಂ ಬಳಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದೆ ಡಿ.ಕೆ.ಶಿವಕುಮಾರ್ ಅವರು ಮೇಕದಾಟು ಸಂಬಂಧ ಪಾದಯಾತ್ರೆ ಮಾಡಿದ್ದರು ಎಂದು ನೆನಪಿಸಿದರು.
ಸಿಎಂ ಕುರ್ಚಿಯ ವಿಚಾರದಲ್ಲಿ ಎಲ್ಲ ಮರೆತ ಕಾಂಗ್ರೆಸ್ ಸರಕಾರವು ರೈತರ ಹಿತರಕ್ಷಣೆ ಮಾಡದೇ ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತ ಸಾಗಿದೆ ಎಂದು ಆಕ್ಷೇಪಿಸಿದರು. ಡಿ.ಕೆ.ಶಿವಕುಮಾರ್ ಅವರು ಕಳೆದೊಂದು ತಿಂಗಳಿನಲ್ಲಿ 10 ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ. ರೈತರ ರಕ್ಷಣೆಗಾಗಿ ಅವರು ಪ್ರಯತ್ನ ಮಾಡಲಿಲ್ಲ ಎಂದು ಟೀಕಿಸಿದರು.
ಸರ್ವ ಪಕ್ಷ ಸಭೆ ಕರೆದಿದ್ದಾರೆ; ಅದು ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಿದೆ ಎಂದು ಆರೋಪಿಸಿದರು. ತಮಿಳುನಾಡಿಗೆ ಕಳೆದ 3 ತಿಂಗಳಿನಲ್ಲಿ ಸಾಕಷ್ಟು ನೀರನ್ನು ಹರಿಬಿಟ್ಟಿದ್ದಾರೆ. ಆಗ ಡಿ.ಕೆ.ಶಿವಕುಮಾರ್ ಅವರಿಗೆ ಸರ್ವಪಕ್ಷ ಕರೆಯಬೇಕೆಂದು ಅನಿಸಲಿಲ್ಲವೇ ಎಂದು ಪ್ರಶ್ನಿಸಿದರು. ಈಗ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶ ಆದ ಬಳಿಕ ಕಪಟ ನಾಟಕ ಆಡುತ್ತಿದ್ದಾರೆ. ಮೊಸಳೆಕಣ್ಣೀರು ಹಾಕುತ್ತಿದ್ದಾರೆ ಎಂದು ದೂರಿದರು. ಯಾವುದೇ ಕಾರಣಕ್ಕೂ ಕಾವೇರಿ ಕೊಳ್ಳದ ರೈತರಿಗೆ ಅನ್ಯಾಯ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ರೈತರ ರಕ್ಷಣೆಗೆ ಇವರಿಗೆ ಆಸಕ್ತಿ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದು ರೈತವಿರೋಧಿ ಕಾಂಗ್ರೆಸ್ ಸರಕಾರ ಎಂದು ಟೀಕಿಸಿದರು. ನಾಡಿನ ರೈತರ ಹಿತರಕ್ಷಣೆ ನಮ್ಮ ಕರ್ತವ್ಯ ಎಂದ ಅವರು, ಸರಕಾರ ಎಚ್ಚತ್ತುಕೊಂಡು ಈ ಭಾಗದ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದರಾದ ಸುಮಲತಾ ಅಂಬರೀಷ್, ಮಾಜಿ ಸಚಿವ ಎನ್.ಮಹೇಶ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕ ಟಿ.ಎಸ್. ಶ್ರೀವತ್ಸ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಹಾಸನ, ಮಂಡ್ಯ, ಮೈಸೂರು ಮೊದಲಾದ ಜಿಲ್ಲೆಗಳ ಜನಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರೂ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments