Thursday, April 23, 2026
HomeUncategorizedಎಲ್ಲರ ಕೆಲಸವೂ ಮುಖ್ಯ

ಎಲ್ಲರ ಕೆಲಸವೂ ಮುಖ್ಯ

ಎಲ್ಲರ ಕೆಲಸವೂ ಮುಖ್ಯ

ಶಾಲೆಯೊಂದರ ತರಗತಿಯ ಗೋಡೆಯ ಮೇಲೆ ದೊಡ್ಡ ಗಡಿಯಾರವೊಂದಿತ್ತು. ಅದರೊಳಗೆ ಮೂರು ಮುಳ್ಳುಗಳಿದ್ದವು. ಗಂಟೆಯ ಮುಳ್ಳು, ನಿಮಿಷದ ಮುಳ್ಳು ಮತ್ತು ಸೆಕೆಂಡಿನ ಮುಳ್ಳು.

ಪ್ರತೀ ದಿನವೂ ಈ ಮೂರೂ ಮುಳ್ಳುಗಳು ತಿರುಗುತ್ತ ಮಕ್ಕಳಿಗೆ ತರಗತಿಯ ಬಗ್ಗೆ, ಊಟದ ಬಿಡುವಿನ ಬಗ್ಗೆ ಮತ್ತು ಆಟದ ಅವಧಿಯ ಬಗ್ಗೆ ಮಾಹಿತಿ ನೀಡುತ್ತಿದ್ದವು.

ಸೆಕೆಂಡಿನ ಮುಳ್ಳು ಬಹಳ ವೇಗವಾಗಿ ತಿರುಗುತ್ತಿತ್ತು. ನಿಮಿಷ ಮತ್ತು ಗಂಟೆಯ ಮುಳ್ಳುಗಳು ಸ್ವಲ್ಪ ನಿಧಾನವಾಗಿ ಚಲಿಸುತ್ತಿದ್ದವು. ಒಂದು ದಿನ ಸೆಕೆಂಡಿನ ಮುಳ್ಳು ಜೋರಾಗಿ ಮಾತಾಡಿತು, “ಅಲ್ಲ ನಾನು ಮಾತ್ರ ಇಲ್ಲಿ ಜಾಸ್ತಿ ಕೆಲಸ ಮಾಡಬೇಕು. ಟಿಕ್‌ ಟಿಕ್‌ ಟಿಕ್‌ ಅಂತ ಸುತ್ತಿ ಸುತ್ತಿ ಬೇಜಾರಾಗುತ್ತದೆ ನನಗೂ.
ನಿಮಿಷದ ಮುಳ್ಳಿಗೂ ನನ್ನಷ್ಟು ಕೆಲಸವಿಲ್ಲ. ಗಂಟೆಯ ಮುಳ್ಳಂತೂ ಆರಾಮಾಗಿ ತಿರುಗುತ್ತದೆ..”

ನಿಮಿಷದ ಮುಳ್ಳು ಹೇಳಿತು, “ಹೌದು, ಆದರೆ ನಾನು ಗಂಟೆಯ ಮುಳ್ಳಿಗಿಂತ ಜಾಸ್ತಿ ಕೆಲಸ ಮಾಡುತ್ತೇನೆ.”
ಗಂಟೆಯ ಮುಳ್ಳು ಮೌನವಾಗಿತ್ತು.
ಅದಾದ ಮೇಲೆ ತರಗತಿ ಮಕ್ಕಳಿಂದ ತುಂಬಿತು. ಶಿಕ್ಷಕರು ಹೇಳಿದರು, “ಹನ್ನೆರಡು ಗಂಟೆಗೆ ತರಗತಿ ಮುಗಿಯುತ್ತದೆ, ನೀವೆಲ್ಲ ಮೈದಾನಕ್ಕೆ ಹೋಗಬೇಕು”. ಸೆಕೆಂಡಿನ ಮುಳ್ಳು ತಿರುಗಿತು. ನಿಮಿಷದ ಮುಳ್ಳು ಹಿಂಬಾಲಿಸಿತು. ಗಂಟೆಯ ಮುಳ್ಳು ತನ್ನ ಕೆಲಸ ತಾನು ಮಾಡಿತು.

ಮಧ್ಯಾಹ್ನ ಹನ್ನೆರಡು ಗಂಟೆಯಾಯಿತು. ಶಾಲೆಯ ಗಂಟೆ ಬಾರಿಸಿತು. ಮಕ್ಕಳೆಲ್ಲ ಖುಶಿಯಿಂದ ಕೂಗುತ್ತ ಮೈದಾನಕ್ಕೆ ಓಡಿದರು.
ಸೆಕೆಂಡಿನ ಮುಳ್ಳು ಒಂದು ಕ್ಷಣ ಯೋಚಿಸಿ ಹೇಳಿತು. “ನಾವು ಮೂವರೂ ಸೇರಿ ಈಗ ಸಮಯ ಹನ್ನೆರಡು ಗಂಟೆಯಾಯಿತು ಅಂತ ಹೇಳಿದ್ವಿ ಅಲ್ವಾ?”

ಗಂಟೆಯ ಮುಳ್ಳು ನಸುನಕ್ಕಿತು. “ನೀನು ವೇಗವಾಗಿ ಹೋಗಿ ಪ್ರತೀ ಸೆಕೆಂಡನ್ನೂ ಲೆಕ್ಕ ಮಾಡುತ್ತೀ. ನಿಮಿಷದ ಮುಳ್ಳು ನಿಮಿಷವಾಗಿದ್ದನ್ನು ತೋರಿಸುತ್ತದೆ. ನಾನು ಗಂಟೆಯ ಬದಲಾವಣೆಯನ್ನು ನಿಧಾನವಾಗಿ ಸೂಚಿಸುತ್ತೇನೆ.

ಪ್ರತಿಯೊಬ್ಬರಿಗೂ ಅವರದ್ದೇ ಆದ ಜವಾಬ್ದಾರಿ ಇದೆ.”

ನಿಮಿಷದ ಮುಳ್ಳು ಹೇಳಿತು, “ನಮ್ಮ ಮೂವರಲ್ಲಿ ಯಾರು ನಿಂತರೂ ಗಡಿಯಾರ ಕೆಲಸ ಮಾಡುವುದಿಲ್ಲ”
ಸೆಕೆಂಡಿನ ಮುಳ್ಳು ಸಂಕೋಚದಿಂದ ಹೇಳಿತು. “ನನಗೆ ಈಗ ಅರ್ಥವಾಯಿತು.

ವೇಗವೊಂದೇ ಯಾವುದನ್ನೂ ಮುಖ್ಯವಾಗಿಸುವುದಿಲ್ಲ. ಕೆಲವೊಂದರಲ್ಲಿ ವೇಗ ಮುಖ್ಯವಾದರೆ ಇನ್ನು ಕೆಲವೊಮ್ಮೆ ನಿಧಾನವೇ ಪ್ರಧಾನ. ಹೀಗಾಗಿ ಇಲ್ಲಿ ಪ್ರತಿ ಪಾತ್ರವೂ ಮುಖ್ಯ.”

ಅವತ್ತಿನಿಂದ ಮೂರೂ ಮುಳ್ಳುಗಳೂ ಸೇರಿ ಖುಶಿಯಿಂದ ಒಟ್ಟಾಗಿ ಕೆಲಸ ಮಾಡಿದವು.

ತಮ್ಮ ಸಂಘಟಿತ ಕೆಲಸದಿಂದ ಸಮಯವನ್ನು ಸರಿಯಾಗಿ ತೋರಿಸುತ್ತಿದ್ದೇವೆಂದು ಸಂತಸಪಟ್ಟವು.

ನಮ್ಮ ಜೀವನದಲ್ಲೂ ಅಷ್ಟೇ. ಕೆಲವರು ಬೇಗನೇ ಗುರಿ ತಲುಪುತ್ತಾರೆ, ಮತ್ತೆ ಕೆಲವರು ನಿಧಾನವಾಗಿ ತಲುಪುತ್ತಾರೆ. ಕೆಲವರು ಸೆಕೆಂಡಿನ ಮುಳ್ಳಿನ ಥರ ಬಹಳ ಚುರುಕಾಗಿರುತ್ತಾರೆ, ಬೇಗ ಬೇಗ ಮುಂದುವರೆಯುತ್ತಾರೆ. ಮತ್ತೆ ಕೆಲವರು ನಿಮಿಷದ ಮುಳ್ಳಿನಂತೆ ಹದವಾದ ವೇಗದಲ್ಲಿ ಸಾಗುತ್ತಾರೆ. ಇನ್ನು ಕೆಲವರು ಮೌನವಾಗಿ ನಿಧಾನವಾಗಿಯೇ ದೊಡ್ಡ ಬದಲಾವಣೆ ತರುತ್ತಾರೆ. ವೇಗವಾಗಿ ಹೋಗುವವರು ಜಾಸ್ತಿ ಕೆಲಸ ಮಾಡುತ್ತಾರೆಂದೂ, ನಿಧಾನಿಸುವವರು ಕಡಿಮೆ ಕೆಲಸ ಮಾಡುತ್ತಾರೆಂದೂ ಅರ್ಥವಲ್ಲ.

ಈ ಪ್ರಕೃತಿಯಲ್ಲಿ ಬಸವನಹುಳುವಿಗೂ ಮಹತ್ವವಿದೆ ಚಿರತೆಗೂ ಪ್ರಾಮುಖ್ಯತೆಯಿದೆ. ಹೀಗಾಗಿ ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತ ತಮ್ಮ ಕೆಲಸ ವೇಗವಾಗಿದೆ ಎಂದು ಜಂಭ ಪಡುವುದು, ತಾವು ಹಿಂದುಳಿದಿದ್ದೇವೆ ಎಂದು ದುಃಖ ಪಡುವುದು ನಿರರ್ಥಕ. ಕಾರಣ ಪ್ರತಿಯೊಬ್ಬರ ಪ್ರಯಾಣವೂ ವಿಭಿನ್ನ ಮತ್ತು ಎಲ್ಲ ಪಯಣಗಳೂ ಅರ್ಥಪೂರ್ಣ.

ಲೇಖನ –
ಆಂಜನೇಯ ಮಟ್ಟೂರ
ಶಿಕ್ಷಕರು. ಗಂಗಾವತಿ

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments