ಮುದ್ದೇಬಿಹಾಳದಲ್ಲಿ ಕರ್ನಾಟಕ ಮಾಧ್ಯಮ ಒಕ್ಕೂಟದ ವಾರ್ಷಿಕ ಪ್ರಶಸ್ತಿ ಸಮಾರಂಭ
ಮುದ್ದೇಬಿಹಾಳ: ಪತ್ರಿಕಾರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತರು, ನಿರೂಪಕರು ಹಾಗೂ ಮಾಧ್ಯಮ ಕ್ಷೇತ್ರದ ವಿವಿಧ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕರ್ನಾಟಕ ಮಾಧ್ಯಮ ಒಕ್ಕೂಟ, ಬೆಂಗಳೂರು, ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕು ಘಟಕಗಳ ಸಹಯೋಗದಲ್ಲಿ ಇಂದು ಪಟ್ಟಣದ ವಿಜಯಮಹಾಂತೇಶ ದಾಸೋಹ ಭವನದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿಕಾರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರೋತ್ಸಾಹ ನೀಡುವುದು ಒಕ್ಕೂಟದ ಪ್ರಮುಖ ಉದ್ದೇಶವಾಗಿದೆ ಎಂದರು.
ಪತ್ರಕರ್ತನಾಗಿ ಸುದ್ದಿಗಳ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗುವುದು ಒಂದು ರೀತಿಯ ಸೇವೆಯಾದರೆ, ಸಂಕಷ್ಟದಲ್ಲಿರುವ ಪತ್ರಕರ್ತರ ಬೆನ್ನಿಗೆ ನಿಂತು ಅವರ ಹಕ್ಕು, ಗೌರವ ಹಾಗೂ ಹಿತಾಸಕ್ತಿಗಳ ರಕ್ಷಣೆಗೆ ಹೋರಾಡುವುದು ಮತ್ತೊಂದು ಮಹತ್ವದ ಸೇವೆಯಾಗಿದೆ. ಈ ಎರಡೂ ಜವಾಬ್ದಾರಿಗಳನ್ನು ಕರ್ನಾಟಕ ಮಾಧ್ಯಮ ಒಕ್ಕೂಟ ನಿರಂತರವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದರು.
ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಪರಶುರಾಮ ಕೊಣ್ಣೂರ ಹಾಗೂ ತಾಳಿಕೋಟಿ ತಾಲೂಕು ಅಧ್ಯಕ್ಷ ಅಂಬಾಜಿ ಘೋರ್ಪಡೆ ಮಾತನಾಡಿ, ಪತ್ರಕರ್ತರ ಧ್ವನಿಯಾಗಿ, ಸಾಧಕರಿಗೆ ಗೌರವದ ವೇದಿಕೆಯಾಗಿ ಹಾಗೂ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವಿನ ಆಸರೆಯಾಗಿ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ. ಪತ್ರಕರ್ತರನ್ನು ಗೌರವಪೂರ್ವಕವಾಗಿ ನಡೆಸಿಕೊಳ್ಳುವ ಉದ್ದೇಶದಿಂದಲೇ ಮಾಧ್ಯಮ ಒಕ್ಕೂಟ ರೂಪುಗೊಂಡಿದೆ ಎಂದು ಹೇಳಿದರು.
ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕುಂಟೋಜಿಯ ಭಾವೈಕ್ಯತಾ ಮಠದ ಚನ್ನವೀರ ಶಿವಾಚಾರ್ಯರು ವಹಿಸಲಿದ್ದು, ತಾಳಿಕೋಟಿಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಸಾನಿಧ್ಯ ವಹಿಸುವರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಪಂ ಸಿಇಒ ಆನಂದ ಪ್ರಕಾಶ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಲೋಕಾಯುಕ್ತ ಜಿಲ್ಲಾ ಡಿವೈಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಜಿಲ್ಲಾ ಆರೋಗ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಉಪ ಆಯುಕ್ತ ಅರವಿಂದ ಜಮಖಂಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಕನ್ನಡಪ್ರಭ ದಿನಪತ್ರಿಕೆಯ ಬೆಳಗಾವಿ ಆವೃತ್ತಿ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ, ಬೆಳಗಾವಿಯ ಹಸಿರುಕ್ರಾಂತಿ ದಿನಪತ್ರಿಕೆ ಸಂಪಾದಕ ಸಂಪತ್ತಕುಮಾರ ಮುಚಳಂಬಿ, ಮುದ್ದೇಬಿಹಾಳ ನ್ಯಾಯವಾದಿಗಳ ಸಂಘದ ತಾಲೂಕಾಧ್ಯಕ್ಷ ಶಶಿಕಾಂತ ಮಾಲಗತ್ತಿ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಬಾಲಾಜಿ ಶುಗರ್ಸ್ ಅಧ್ಯಕ್ಷ ಮನುಮಂತಗೌಡ ಪಾಟೀಲ, ತಾಲೂಕು ಕುರುಬ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಸಮಾಜ ಸೇವಕ ಸಿ.ಬಿ. ಅಸ್ಕಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ತಾರನಾಳ, ಒಕ್ಕೂಟದ ಗೌರವಾಧ್ಯಕ್ಷ ಜಿ.ಟಿ. ಘೋರ್ಪಡೆ, ತಾಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಕ್ಷತಾ ಚಲವಾದಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿರುವರು.
ಹಲವು ಪತ್ರಕರ್ತರಿಗೆ ಪ್ರಶಸ್ತಿ ಗೌರವ
ಕರ್ನಾಟಕ ಮಾಧ್ಯಮ ಒಕ್ಕೂಟ ಹಾಗೂ ಹಿರಿಯ ಪತ್ರಕರ್ತ ದಿ. ನಾಗರಾಜ ಬಿ. ಜಮಖಂಡಿ ಅವರ ಸ್ಮರಣಾರ್ಥ ನೀಡಲಾಗುವ ಜೀವಮಾನ ಮಾಧ್ಯಮ ಸಾಧಕ ರತ್ನ ಪ್ರಶಸ್ತಿಗೆ ಬೆಳಗಾವಿಯ ಗಡಿ ಕನ್ನಡಿಗ ದಿನಪತ್ರಿಕೆ ಸಂಪಾದಕ ಮುರುಗೇಶ ಬಾಬುರಾವ ಶಿವಪೂಜಿ ಅವರನ್ನು ಆಯ್ಕೆ ಮಾಡಲಾಗಿದೆ.
ಮಾಧ್ಯಮ ಸಾಧಕ ರತ್ನ ಪ್ರಶಸ್ತಿಗೆ ವಿಜಯವಾಣಿ ಜಿಲ್ಲಾ ವಿಶೇಷ ವರದಿಗಾರ ಪರಶುರಾಮ ಬಾಸಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಮಾಧ್ಯಮ ಒಕ್ಕೂಟದಿಂದ ನೀಡಲಾಗುವ ಮಾಧ್ಯಮ ರತ್ನ ಪ್ರಶಸ್ತಿಗೆ ಸುವರ್ಣ ನ್ಯೂಸ್ ಮುಖ್ಯ ನಿರೂಪಕಿ ಸ್ವೇತಾ ಆಚಾರ್ಯ, ಉದಯವಾಣಿ ಅಸಿಸ್ಟಂಟ್ ನ್ಯೂಸ್ ಎಡಿಟರ್ ಮಲ್ಲಿಕಾರ್ಜುನ ತಿಪ್ಪಾರ, ಸಂಯುಕ್ತ ಕರ್ನಾಟಕ ವಿಜಯಪುರ ಜಿಲ್ಲಾ ವರದಿಗಾರ ಶರಣು ಮರನೂರ, ಕನ್ನಡಪ್ರಭ ನಾಲತವಾಡ ಗ್ರಾಮೀಣ ವರದಿಗಾರ ಯೂನೂಸ್ ಮೂಲಿಮನಿ, ಚಕ್ರವರ್ತಿ ನ್ಯೂಸ್ ಸಂಪಾದಕ ಚೇತನ ಕೆಂದೂಳಿ, ಉತ್ತರ ಟುಡೆ ನ್ಯೂಸ್ ಡಿಜಿಟಲ್ ಮೀಡಿಯಾ ಸುದ್ದಿ ಸಂಪಾದಕ ಚೇತನ ಕೆಂದೂಳಿ ಹಾಗೂ ಉದಯಕಾಲ ವಿಜಯಪುರ ಜಿಲ್ಲಾ ವರದಿಗಾರ ಮಕಬೂಲ್ ಬನ್ನೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಪತ್ರಿಕಾ ವಿತರಕರಿಗೂ ಗೌರವ
ಅತ್ಯುತ್ತಮ ಪತ್ರಿಕಾ ವಿತರಕರ ಪ್ರಶಸ್ತಿಗೆ ರವಿ ಕುಂಬಾರ ಹಾಗೂ ಚಂದ್ರಶೇಖರ ಮುಖಿಹಾಳ ಅವರನ್ನು ಆಯ್ಕೆ ಮಾಡಲಾಗಿದೆ.
ಇದಲ್ಲದೆ ಬೆಳಗಾವಿಯ ಗುಪ್ತಚರ ಪೊಲೀಸ್ ಇಲಾಖೆಯ ಡಿವೈಎಸ್ಪಿ ರಾಘವೇಂದ್ರ ಹವಾಲ್ದಾರ, ಹುಬ್ಬಳ್ಳಿಯ ವಾಣಿಜ್ಯೋದ್ಯಮದ ನಿರ್ದೇಶಕ ಶರಣು ಸಜ್ಜನ, ಸರ್ಕಾರಿ ತಾಲೂಕು ವೈದ್ಯಾಧಿಕಾರಿ ಡಾ. ರಂಗನಾಥ ವೈದ್ಯ, ಪ್ರಗತಿಪರ ರೈತ ಅರವಿಂದ ಕೊಪ್ಪ, ಯುವ ವರದಿಗಾರ್ತಿ ಸ್ನೇಹಾ ನಲವಡೆ ಹಾಗೂ ಕ್ರೀಡಾ ಸಾಧಕರಾದ ಕುಮಾರ ವಿಕ್ರಾಂತ ಮತ್ತು ಶಕುಂತಲಾ ಶಾರದಳ್ಳಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಕರ್ನಾಟಕ ಮಾಧ್ಯಮ ಒಕ್ಕೂಟ ತಿಳಿಸಿದೆ.

