Thursday, October 15, 2026
Homeನಿಮ್ಮ ಜಿಲ್ಲೆಬರಗಾಲದಲ್ಲೂ ತೆಲಂಗಾಣಕ್ಕೆ ಕೃಷ್ಣಾ ನೀರು ಹರಿಸುವ ಆರೋಪ!ಮೇ 15ರೊಳಗೆ ಕೊನೆ ಭಾಗದ ಕೆರೆಗಳಿಗೆ ನೀರು ಬಿಡದಿದ್ದರೆ...

ಬರಗಾಲದಲ್ಲೂ ತೆಲಂಗಾಣಕ್ಕೆ ಕೃಷ್ಣಾ ನೀರು ಹರಿಸುವ ಆರೋಪ!ಮೇ 15ರೊಳಗೆ ಕೊನೆ ಭಾಗದ ಕೆರೆಗಳಿಗೆ ನೀರು ಬಿಡದಿದ್ದರೆ ಉಗ್ರ ಹೋರಾಟ: ಎ.ಎಸ್. ಪಾಟೀಲ್ ನಡಹಳ್ಳಿ ಎಚ್ಚರಿಕೆ

ಮುದ್ದೇಬಿಹಾಳ:
ಉತ್ತರ ಕರ್ನಾಟಕದಲ್ಲಿ ಬರಗಾಲದ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲಿ ಸ್ಥಳೀಯ ರೈತರ ಹಾಗೂ ಗ್ರಾಮೀಣ ಜನರ ಕುಡಿಯುವ ನೀರಿನ ಅಗತ್ಯವನ್ನು ಕಡೆಗಣಿಸಿ, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿರುವ ಮಾಜಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಲಂಗಾಣಕ್ಕೆ ನೀರು ಹರಿಸುವ ಕುರಿತು ಮುಖ್ಯಮಂತ್ರಿಗಳ ಮೌಖಿಕ ಸೂಚನೆ ನೀಡಲಾಗಿದೆ ಎಂಬ ಆರೋಪ ಮಾಡಿದರು. ನಿತ್ಯ ಸುಮಾರು 5,000ರಿಂದ 7,000 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಈಗಾಗಲೇ 2 ಟಿಎಂಸಿಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ. ಒಟ್ಟು 5 ಟಿಎಂಸಿ ನೀರು ಹರಿಸಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯ 204 ಕೆರೆಗಳನ್ನು ತುಂಬಿಸಲು ಸುಮಾರು 2 ಟಿಎಂಸಿ ನೀರು ಅಗತ್ಯವಿದ್ದರೂ, ಸ್ಥಳೀಯ ಕೆರೆಗಳಿಗೆ ಸಮರ್ಪಕವಾಗಿ ನೀರು ಒದಗಿಸದೆ ಕೇವಲ ಶೇ.25ರಷ್ಟು ಕೆರೆಗಳನ್ನು ಮಾತ್ರ ತುಂಬಿಸುವ ಕ್ರಮ ಕೈಗೊಳ್ಳಲಾಗಿದೆ. ಆದರೆ, ನೆರೆಯ ರಾಜ್ಯಕ್ಕೆ ಅಲ್ಪಾವಧಿಯಲ್ಲೇ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುತ್ತಿದೆ ಎಂಬುದು ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದು ಅವರು ದೂರಿದರು.

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ವಿಚಾರದಲ್ಲಿ ತೆಲಂಗಾಣ ಸೇರಿದಂತೆ ನೆರೆಯ ರಾಜ್ಯಗಳ ವಿರೋಧದಿಂದ ಉತ್ತರ ಕರ್ನಾಟಕದ ನೀರಾವರಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿದ ನಡಹಳ್ಳಿ, ಇಂತಹ ಪರಿಸ್ಥಿತಿಯಲ್ಲೂ ಸ್ಥಳೀಯರ ಹಿತವನ್ನು ಬದಿಗಿಟ್ಟು ನೀರು ಹರಿಸುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ತೀವ್ರವಾಗಿ ಪ್ರತಿಕ್ರಿಯಿಸುವ ರಾಜಕಾರಣಿಗಳು ಹಾಗೂ ಮಾಧ್ಯಮಗಳು ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಮೌನವಾಗಿರುವುದು ಏಕೆ? ಉತ್ತರ ಕರ್ನಾಟಕದ ರೈತರ ಹಿತಾಸಕ್ತಿಗೆ ಧಕ್ಕೆಯಾಗುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲವೇಕೆ? ಎಂದು ಪ್ರಶ್ನಿಸಿದರು.

ಇದೇ ವೇಳೆ, ನಿಗಮ ಮಂಡಳಿಗೆ ರಾಜೀನಾಮೆ ನೀಡಿದ ಬಳಿಕವೂ ನಿಗಮದ ಹಣವನ್ನು ವೈಯಕ್ತಿಕ ಹುಟ್ಟುಹಬ್ಬ ಹಾಗೂ ರಾಜಕೀಯ ಪ್ರಚಾರದ ಜಾಹೀರಾತುಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದರು.

ಮೇ 15ರೊಳಗೆ ಕೆರೆಗಳಿಗೆ ನೀರು ಹರಿಸಲು ಗಡುವು:
ತಾಲೂಕಿನ ತಾರನಾಳ ಸೇರಿದಂತೆ ಕೊನೆ ಭಾಗದ ಗ್ರಾಮಗಳ ಕೆರೆಗಳಿಗೆ ಕುಡಿಯುವ ನೀರು ಒದಗಿಸಲು ಮೇ 15ರೊಳಗೆ ಕಾಲುವೆ ಮೂಲಕ ನೀರು ಹರಿಸಬೇಕು. ಇಲ್ಲವಾದಲ್ಲಿ ಪಕ್ಷಾತೀತವಾಗಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ರೈತರನ್ನು ಒಗ್ಗೂಡಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ನಡಹಳ್ಳಿ ಎಚ್ಚರಿಕೆ ನೀಡಿದರು.

ಕೃಷ್ಣಾ ಭಾಗ್ಯ ಜಲ ನಿಗಮದ ಅಧೀಕ್ಷಕ ಎಂಜಿನಿಯರ್ ಗೋವಿಂದ ರಾಥೋಡ್ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ರೆಡ್ಡಿ ಅವರೊಂದಿಗೆ ಈ ಕುರಿತು ಚರ್ಚಿಸಲಾಗಿದ್ದು, ಮೇ 15ರಿಂದ ಕಾಲುವೆಗೆ ನೀರು ಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

ತಾರನಾಳ, ಆಲಕೊಪ್ಪರ, ರೂಢಗಿ, ಕಾಗಲಗುಂಬಾಳ, ಹೂವಿನಹಿಪ್ಪರಗಿ ಹಾಗೂ ದೇವೂರ ಭಾಗದ ಹೂನಳ್ಳಿ, ಅಗಸಬಾಳ ಮತ್ತು ಶಂಕರನಾಳ ಸೇರಿದಂತೆ ಕೊನೆ ಭಾಗದ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಬೇಕು. ಮುಖ್ಯ ಕಾಲುವೆ ಮೂಲಕ ಬಿದರಕುಂದಿವರೆಗೂ ಸಮರ್ಪಕವಾಗಿ ನೀರು ತಲುಪಿಸಬೇಕು ಎಂದು ಆಗ್ರಹಿಸಿದರು.

ತಾರನಾಳ ಹಾಗೂ ಸುತ್ತಮುತ್ತಲಿನ ನಾಲ್ಕೈದು ಗ್ರಾಮಗಳ ಜನರಿಗೆ ಕೆರೆಗಳೇ ಕುಡಿಯುವ ನೀರಿನ ಪ್ರಮುಖ ಆಧಾರವಾಗಿವೆ. ಪ್ರಸ್ತುತ ಜನರು ಮತ್ತು ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಆನಂದ್ ಅವರೊಂದಿಗೂ ಮಾತನಾಡಿದ್ದು, ಕೊನೆ ಭಾಗದ ಕೆರೆಗಳಿಗೆ ಆದ್ಯತೆ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಉತ್ತರ ಕರ್ನಾಟಕದ ನಿರ್ಲಕ್ಷ್ಯ ಸಹಿಸುವುದಿಲ್ಲ:
ಉತ್ತರ ಕರ್ನಾಟಕದ ಜಲಸಂಪತ್ತನ್ನು ಸಮರ್ಪಕವಾಗಿ ಬಳಸದೆ ಈ ಭಾಗದ ಜನರನ್ನು ಸಂಕಷ್ಟಕ್ಕೆ ತಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿದೆ ಎಂಬ ಆರೋಪದ ಕುರಿತು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಮತ್ತು ಮಾಧ್ಯಮಗಳು ಈ ವಿಷಯವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಬೇಕು ಎಂದು ನಡಹಳ್ಳಿ ಒತ್ತಾಯಿಸಿದರು.

ಸ್ಥಳೀಯ ರೈತರ ಬೆಳೆಗಳಿಗೆ, ಗ್ರಾಮಗಳ ಕುಡಿಯುವ ನೀರಿನ ಅಗತ್ಯಕ್ಕೆ ಹಾಗೂ ಕೊನೆ ಭಾಗದ ಕೆರೆಗಳ ಭರ್ತಿಗೆ ಆದ್ಯತೆ ನೀಡದಿದ್ದರೆ ಹೋರಾಟ ಅನಿವಾರ್ಯ. ಮೇ 15ರ ಗಡುವಿನೊಳಗೆ ನೀರು ಹರಿಸದಿದ್ದರೆ ಮುಂದಿನ ಹೋರಾಟಕ್ಕೆ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ,ಬಿಜೆಪಿ ಮುಖಂಡರಾದ ಕೆಂಚಪ್ಪ ಬಿರಾದಾರ, ಪ್ರಭು ಕಡಿ, ಡಾ. ವಿರೇಶ ಪಾಟೀಲ, ಎಸ್.ಎಸ್.ಶಿವಣಗಿ, ಪರಶುರಾಮ ನಾಲತವಾಡ, ಲಕ್ಷ್ಮಣ ಬಿಜೂರ, ಅಶೋಕ ರಾಠೋಡ(ನೆಬಗೇರಿ), ಗುರುನಾಥಗೌಡ ಬಿರಾದಾರ, ಸಿದ್ದರಾಜ ಹೊಳಿ, ಶೇಖರ ಆಲೂರ, ಗೌರಮ್ಮ ಹುನಗುಂದ ಸೇರಿದಂತೆ ಇತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments