Thursday, October 15, 2026
HomeUncategorizedಗಂಗಾವತಿಗೆ ಬಾಹ್ಯಾಕಾಶದ ಹೆಜ್ಜೆ!

ಗಂಗಾವತಿಗೆ ಬಾಹ್ಯಾಕಾಶದ ಹೆಜ್ಜೆ!

ಇಸ್ರೋ ಸಹಯೋಗದಲ್ಲಿ ‘

ವಿಶ್ವ ಬಾಹ್ಯಾಕಾಶ ಸಪ್ತಾಹ–2026’ ಆಚರಣೆ — ಕಲ್ಯಾಣ ಕರ್ನಾಟಕದ ಮೊಟ್ಟಮೊದಲ ಹಾಗೂ ಏಕೈಕ ಆಯ್ಕೆಯಾದ ಲಯನ್ಸ್ ಶಿಕ್ಷಣ ಸಂಸ್ಥೆ.
ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಪ್ರತಿಷ್ಠಿತ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಸಹಯೋಗದ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದಲ್ಲಿ ‘ವಿಶ್ವ ಬಾಹ್ಯಾಕಾಶ ಸಪ್ತಾಹ–2026’ ಕಾರ್ಯಕ್ರಮವು ಇದೇ ಅಕ್ಟೋಬರ್ 8, 2026ರ ಗುರುವಾರದಂದು ನಡೆಯಲಿದೆ.
ಯು.ಆರ್. ರಾವ್ ಉಪಗ್ರಹ ಕೇಂದ್ರ–ಇಸ್ರೋ, ಬೆಂಗಳೂರು ಇವರ ಸಹಯೋಗದಲ್ಲಿ ನಡೆಯಲಿರುವ ಈ ಮಹತ್ವದ ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕದ ಮೊಟ್ಟಮೊದಲ ಹಾಗೂ ಏಕೈಕ ಶಾಲೆಯಾಗಿ ಲಯನ್ಸ್ ಶಿಕ್ಷಣ ಸಂಸ್ಥೆ ಆಯ್ಕೆಯಾಗಿರುವುದು ಗಂಗಾವತಿ, ಕೊಪ್ಪಳ ಜಿಲ್ಲೆ ಹಾಗೂ ಇಡೀ ಕಲ್ಯಾಣ ಕರ್ನಾಟಕದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ.
ಮಕ್ಕಳಲ್ಲಿ ಬಾಹ್ಯಾಕಾಶ ವಿಜ್ಞಾನದ ಕುತೂಹಲ ಮೂಡಿಸುವ ಕಾರ್ಯಕ್ರಮ

ಬಾಹ್ಯಾಕಾಶ ವಿಜ್ಞಾನ, ಉಪಗ್ರಹಗಳು, ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಹಾಗೂ ಕುತೂಹಲ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಂದಿನ ಮಕ್ಕಳೇ ನಾಳಿನ ವಿಜ್ಞಾನಿಗಳು, ಇಂಜಿನಿಯರ್‌ಗಳು ಹಾಗೂ ಬಾಹ್ಯಾಕಾಶ ಸಂಶೋಧಕರಾಗುವ ನಿಟ್ಟಿನಲ್ಲಿ ಅವರಿಗೆ ಪ್ರೇರಣೆ ನೀಡುವುದು ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು, ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿ ವಸ್ತುಗಳ ಪ್ರದರ್ಶನ, ವಿಡಿಯೋ ಪ್ರದರ್ಶನ ಸೇರಿದಂತೆ ಹಲವು ಆಕರ್ಷಕ ಹಾಗೂ ಜ್ಞಾನವರ್ಧಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಇವು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನವನ್ನು ಮೀರಿ ವಿಜ್ಞಾನ ಮತ್ತು ಬಾಹ್ಯಾಕಾಶದ ವಿಶಾಲ ಜಗತ್ತನ್ನು ಪರಿಚಯಿಸಲಿದೆ.
ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅಪೂರ್ವ ಅವಕಾಶ
ಲಯನ್ಸ್ ಶಿಕ್ಷಣ ಸಂಸ್ಥೆಗೆ ದೊರೆತಿರುವ ಈ ಅವಕಾಶ ಕೇವಲ ಒಂದು ಶಾಲೆಯ ಸಾಧನೆಯಲ್ಲ; ಕೊಪ್ಪಳ ಜಿಲ್ಲೆ ಹಾಗೂ ಗಂಗಾವತಿ ತಾಲ್ಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ದೊರೆತಿರುವ ವಿಶೇಷ ಗೌರವವಾಗಿದೆ. ಇಸ್ರೋ ಸಂಸ್ಥೆಯೊಂದಿಗೆ ನೇರವಾಗಿ ಸಂಪರ್ಕ ಹೊಂದಿ ಬಾಹ್ಯಾಕಾಶ ವಿಜ್ಞಾನದ ಕುರಿತು ತಿಳಿದುಕೊಳ್ಳುವ ಅಪೂರ್ವ ಅವಕಾಶವನ್ನು ಜಿಲ್ಲೆಯ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಹಾಗೂ ಗಂಗಾವತಿ ತಾಲ್ಲೂಕಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮನವಿ ಮಾಡಿದೆ.

ಈ ಕುರಿತು ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ಚಂದ್ರಪ್ಪ, ಕಾರ್ಯದರ್ಶಿಗಳಾದ ಡಾ. ಜಂಬೂನಾಥಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ದೇವರಾಜ, ಕ್ಲಬ್ ಕಾರ್ಯದರ್ಶಿ ಹಾಗೂ ಖಜಾಂಜಿ ಮತ್ತು ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರೆಗೌಡ ಪೊಲೀಸ್ ಪಾಟೀಲ್, ಕಾಲೇಜು ಪ್ರಾಚಾರ್ಯರಾದ ವಿಜಯಲಕ್ಷ್ಮಿ, ಪ್ರೌಢಶಾಲಾ ಮುಖ್ಯಗುರುಗಳಾದ ಜಗನಾಥ ದಾಸ್, ಗುರುಪಾದಯ್ಯ ಹಿರೇಮಠ್ ಹಾಗೂ ವಿರೂಪಾಕ್ಷಗೌಡ ಪೊಲೀಸ್ ಪಾಟೀಲ್, ಪ್ರಭು ಹಿರೇಮಠ್, ಶಿಕ್ಷಕರಾದ ಆಂಜನೇಯ ಮಟ್ಟೂರು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
“ಕಲ್ಯಾಣ ಕರ್ನಾಟಕದ ಲಯನ್ಸ್ ಶಿಕ್ಷಣ ಸಂಸ್ಥೆಗೆ ಇಸ್ರೋ ಸಹಯೋಗದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮ ಆಯೋಜಿಸುವ ಅವಕಾಶ ದೊರೆತಿರುವುದು ನಮ್ಮ ಸಂಸ್ಥೆಗೆ ಮಾತ್ರವಲ್ಲ, ಇಡೀ ಭಾಗದ ಶೈಕ್ಷಣಿಕ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ. ಜಿಲ್ಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಹೊಸ ಕನಸು ಕಾಣಬೇಕು” ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಕನಸಿಗೆ ಬಾಹ್ಯಾಕಾಶದ ರೆಕ್ಕೆ
ಮಕ್ಕಳ ಮನಸ್ಸಿನಲ್ಲಿ ಮೂಡುವ ಒಂದು ಸಣ್ಣ ಪ್ರಶ್ನೆಯೇ ಮುಂದೆ ದೊಡ್ಡ ವೈಜ್ಞಾನಿಕ ಸಂಶೋಧನೆಗೆ ಕಾರಣವಾಗಬಹುದು. ‘ಆಕಾಶದಾಚೆ ಏನಿದೆ?’, ‘ಉಪಗ್ರಹಗಳು ಹೇಗೆ ಕಾರ್ಯನಿರ್ವಹಿಸುತ್ತವೆ?’, ‘ರಾಕೆಟ್‌ಗಳು ಹೇಗೆ ಬಾಹ್ಯಾಕಾಶಕ್ಕೆ ತೆರಳುತ್ತವೆ?’ ಎಂಬ ಕುತೂಹಲಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಉತ್ತರ ಕಂಡುಕೊಳ್ಳುವ ಅವಕಾಶವನ್ನು ಈ ಕಾರ್ಯಕ್ರಮ ಒದಗಿಸಲಿದೆ.

“ಮಕ್ಕಳ ಕಣ್ಣಿನಲ್ಲಿ ಮೂಡುವ ಕುತೂಹಲವೇ ನಾಳಿನ ಭಾರತದ ಬಾಹ್ಯಾಕಾಶ ಸಾಧನೆಗೆ ಬೀಜ.”

ಆದ್ದರಿಂದ ಇಸ್ರೋ ಸಹಯೋಗದ ಈ ಅಪೂರ್ವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡು, ಜ್ಞಾನವನ್ನು ಪಡೆದು, ಹೊಸ ಕನಸುಗಳನ್ನು ಕಾಣುವಂತೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಅಕ್ಟೋಬರ್ 8ರಂದು ಗಂಗಾವತಿಯಲ್ಲಿ ನಡೆಯಲಿರುವ ‘ವಿಶ್ವ ಬಾಹ್ಯಾಕಾಶ ಸಪ್ತಾಹ–2026’ ಕಾರ್ಯಕ್ರಮವು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳ ವೈಜ್ಞಾನಿಕ ಚಿಂತನೆಗೆ ಹೊಸ ದಿಕ್ಕು ನೀಡಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭವಿಷ್ಯದ ಪ್ರತಿಭೆಗಳು ರೂಪುಗೊಳ್ಳಲಿ ಎಂಬ ಆಶಯ ಎಲ್ಲರದ್ದಾಗಿದೆ.

ವರದಿ -S. A. ಮಟ್ಟೂರು

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments