Thursday, October 15, 2026
Homeನಿಮ್ಮ ಜಿಲ್ಲೆಸಿಎಂ ಹಾಗೂ ಕಾಂಗ್ರೆಸ್ ಆರೋಪಗಳಿಗೆ ವಿಜಯೇಂದ್ರ ತಿರುಗೇಟು: ಫಾರ್ಮ್–7 ಸಲ್ಲಿಕೆ ಕಾನೂನುಬದ್ಧ ಹಕ್ಕು ಎಂದ ಬಿಜೆಪಿ...

ಸಿಎಂ ಹಾಗೂ ಕಾಂಗ್ರೆಸ್ ಆರೋಪಗಳಿಗೆ ವಿಜಯೇಂದ್ರ ತಿರುಗೇಟು: ಫಾರ್ಮ್–7 ಸಲ್ಲಿಕೆ ಕಾನೂನುಬದ್ಧ ಹಕ್ಕು ಎಂದ ಬಿಜೆಪಿ ರಾಜ್ಯಾಧ್ಯಕ್ಷ

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಫಾರ್ಮ್–7 ಅರ್ಜಿಗಳ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿರುಗೇಟು ನೀಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿಜಯೇಂದ್ರ, ಬಿಜೆಪಿ ಫಾರ್ಮ್–7 ಅರ್ಜಿಗಳನ್ನು ದುರುಪಯೋಗಪಡಿಸಿಕೊಂಡು ಮತದಾರರ ಹೆಸರುಗಳನ್ನು ಕೈಬಿಡುವ ಪ್ರಯತ್ನ ನಡೆಸುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದರು.

ಮತದಾರರ ಪಟ್ಟಿಯಲ್ಲಿರುವ ಅಕ್ರಮಗಳನ್ನು ಸರಿಪಡಿಸಲು ಹಾಗೂ ಪಟ್ಟಿಯನ್ನು ಶುದ್ಧೀಕರಿಸಲು ಚುನಾವಣಾ ಆಯೋಗವೇ ಫಾರ್ಮ್–7 ಸಲ್ಲಿಸುವ ಅವಕಾಶ ನೀಡಿದೆ. ಈ ಹಕ್ಕನ್ನು ಬಳಸಿಕೊಂಡು ಬಿಜೆಪಿ ಕಾರ್ಯಕರ್ತರು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಚಿವ ಸಂಪುಟ ಸಭೆ ರದ್ದುಪಡಿಸಿ ಚುನಾವಣಾ ಆಯೋಗದ ಮುಂದೆ ನಡೆಸಿದ ಪ್ರತಿಭಟನೆ ರಾಜಕೀಯ ಉದ್ದೇಶದಿಂದ ಕೂಡಿದೆ ಎಂದು ಆರೋಪಿಸಿದ ಅವರು, ದೇಶದ ಗಮನ ಸೆಳೆಯುವ ಪ್ರಯತ್ನ ಇದಾಗಿದೆ ಎಂದು ಟೀಕಿಸಿದರು.

ಮೈಸೂರು ನರಸಿಂಹರಾಜ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಸುಮಾರು 1.30 ಲಕ್ಷ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಹೊರರಾಜ್ಯದ ವ್ಯಕ್ತಿಗಳು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ ಎಂದು ವಿಜಯೇಂದ್ರ ಆರೋಪಿಸಿದರು.

ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳಲ್ಲಿ ಮತದಾರರ ಸೇರ್ಪಡೆ ಕುರಿತು ಪರಿಶೀಲನೆ ಅಗತ್ಯವಿದೆ ಎಂದ ಅವರು, ಮಂಗಳೂರು ಸೇರಿದಂತೆ ಕೆಲವು ಪ್ರದೇಶಗಳಲ್ಲಿಯೂ ಅಕ್ರಮ ಸೇರ್ಪಡೆಗಳ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳನ್ನು ಸಾಬೀತುಪಡಿಸಬೇಕು. ಅದೇ ರೀತಿ ಮುಖ್ಯಮಂತ್ರಿ ಅವರು ಮಾಡಿರುವ ಆರೋಪಗಳಿಗೂ ದಾಖಲೆಗಳನ್ನು ನೀಡಬೇಕು. ಆರೋಪ ಸಾಬೀತಾಗದಿದ್ದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

ಬಲ್ಕ್ ಆಗಿ ಫಾರ್ಮ್–7 ಸಲ್ಲಿಕೆ ಮಾಡುವುದು ಅಪರಾಧವಲ್ಲ. ಅದು ಚುನಾವಣಾ ಆಯೋಗದ ನಿಯಮಗಳ ಅಡಿಯಲ್ಲಿ ಇರುವ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿದ ಅವರು, ಕಾಂಗ್ರೆಸ್ ಪಕ್ಷವೂ ದೊಡ್ಡ ಪ್ರಮಾಣದಲ್ಲಿ ಎಸ್‌ಐಆರ್ ಫಾರ್ಮ್‌ಗಳನ್ನು ಸಲ್ಲಿಸಿದೆ ಎಂದು ಆರೋಪಿಸಿದರು.

ಬಿಜೆಪಿ ಕಾರ್ಯಕರ್ತರಿಂದ ಅಧಿಕಾರಿಗಳು ಒತ್ತಡ ಹಾಕಿಸಿ ಕ್ಷಮಾಪಣಾ ಪತ್ರ ಬರೆಯಿಸಿಕೊಂಡಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.

ಮತದಾರರ ಪಟ್ಟಿ ವಿಚಾರದಲ್ಲಿ ಸತ್ಯಾಸತ್ಯತೆ ಚುನಾವಣಾ ಆಯೋಗದ ಪರಿಶೀಲನೆಯಿಂದ ಹೊರಬರಲಿದೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments