ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಶಿಕ್ಷಣ ಕಾಶಿ ನಾಗರಬೆಟ್ಟ ಗ್ರಾಮದ ಗುಡ್ಡದ ಹತ್ತಿರ ಇರುವ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ ಪಾಟೀಲ್ಸ್ ನೀಟ್ ಆಕಾಡೆಮಿಯ 480 ವಿದ್ಯಾರ್ಥಿಗಳ ಪೈಕಿ 225ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಎಂಬಿಬಿಎಸ್ ಮೆಡಿಕಲ್ ಶಿಕ್ಷಣದ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ತಿಳಿಸಿದರು.
ಮುದ್ದೇಬಿಹಾಳ ಪಟ್ಟಣದ ಬಿದರಕುಂದಿ ರಸ್ತೆ ಪಕ್ಕದಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು, ಇಂಗ್ಲೀಷ್ ಮಿಡಿಯಂ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇವರಲ್ಲಿ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೈತರ ಮಕ್ಕಳು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಈ ಪೈಕಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮಲ್ಲಿ ಉಚಿತ ಶಿಕ್ಷಣ ಪಡೆದುಕೊಂಡಂಥ ಪ್ರತಿಭಾವಂತರಾಗಿದ್ದಾರೆ ಎಂದರು.
ಈ ವರ್ಷ ನೀಟ್ ಪರೀಕ್ಷೆ ಎರಡು ಬಾರಿ ನಡೆದಿದೆ. ಮೊದಲ ಬಾರಿ ನಡೆದ ಪರೀಕ್ಷೆಯಲ್ಲಿ ನಮ್ಮ ಅಕಾಡೆಮಿಯ ಮೂವರು ವಿದ್ಯಾರ್ಥಿಗಳು 720ಕ್ಕೆ 700ಕ್ಕೂ ಹೆಚ್ಚು ಅಂಕ ಪಡೆದಿದ್ದರು. ಒಬ್ಬ ವಿದ್ಯಾರ್ಥಿಯಂತೂ 705 ಅಂಕ ಪಡೆಯುವ ಮೂಲಕ ರಾಷ್ಟ್ರಮಟ್ಟದ ಅರ್ಹತೆ ಗಿಟ್ಟಿಸಿದ್ದರು. ಆದರೆ ಆ ಪರೀಕ್ಷೆ ರದ್ದಾಗಿ ನಂತರ ಎರಡನೇ ಬಾರಿ ಮರು ಪರೀಕ್ಷೆ ನಡೆಸಲಾಯಿತು. ಅತ್ಯಂತ ಕಠಿಣವಾಗಿದ್ದ ಮರು ಪರೀಕ್ಷೆಯಲ್ಲಿ ನಮ್ಮ ಅಕಾಡೆಮಿಯ ಐದಕ್ಕು ಹೆಚ್ಚು ವಿದ್ಯಾರ್ಥಿಗಳು 700ಕ್ಕೂ ಅಧಿಕ ಅಂಕ ಪಡೆದು ತಮ್ಮ ಸಾಧನೆಯ ಪರ್ವ ಮುಂದುವರೆಸಿದರು. ಇದು ನಮ್ಮ ನೀಟ್ ಅಕಾಡೆಮಿಯಲ್ಲಿ ದೊರೆಯುವ ಗುಣಮಟ್ಟದ ತರಬೇತಿಗೆ ಕನ್ನಡಿ ಹಿಡಿದಂತಿದೆ ಎಂದರು.
ರಾಜ್ಯದಲ್ಲಿ ಸಾಕಷ್ಟು ನೀಟ್ ತರಬೇತಿ ಕೇಂದ್ರಗಳು ಇವೆ. ಆದರೆ ಗ್ರಾಮೀಣ ಭಾಗದಲ್ಲಿರುವ ಒಂದೇ ಕಾಲೇಜಿನಲ್ಲಿ 225ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಶಿಕ್ಷಣಕ್ಕೆ ಆಯ್ಕೆಯಾಗಿರುವುದು ರಾಜ್ಯದ ಬೇರೆ ಯಾವ ಗ್ರಾಮೀಣ ಭಾಗದ ಕಾಲೇಜಿನಲ್ಲಿಯೂ ಕಂಡುಬಂದಿಲ್ಲ. 2021ರಲ್ಲಿ ನೀಟ್ ತರಬೇತಿ ಆರಂಭಿಸಿದಾಗ ಮೊದಲ ಬಾರಿ 85, 2022ರಲ್ಲಿ 123, 2023ರಲ್ಲಿ 145, 2024ರಲ್ಲಿ156, 2025ರಲ್ಲಿ 172 ಹೀಗೆ ಪ್ರತಿ ವರ್ಷ ನಮ್ಮಲ್ಲಿ ಮೆಡಿಕಲ್ ಶಿಕ್ಷಣಕ್ಕೆ ಆಯ್ಕೆಯಾಗುವವರ ಸಂಖ್ಯೆ ಏರುತ್ತಲೇ ಇದೆ. ಮುಂದಿನ ವರ್ಷ 250ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಮೆಡಿಕಲ್ ಶಿಕ್ಷಣಕ್ಕೆ ಆಯ್ಕೆ ಮಾಡಿಸುವ ಗುರಿ ಹಾಕಿಕೊಂಡಿದ್ದೇವೆ. ಕಳೆದ 6 ವರ್ಷಗಳಲ್ಲಿ ನಮ್ಮ ಸಂಸ್ಥೆಯಿಂದ 1450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಬಿಬಿಎಸ್ ಸೀಟು ಪಡೆದು ವೈದ್ಯರಾಗಿ ತಮ್ಮ ಭವಿಷ್ಯದ ಬದುಕು ರೂಪಿಸಿಕೊಂಡಿದ್ದಾರೆ ಎಂದರು.
ಪಾಲಕರು ತಮ್ಮ ಮಕ್ಕಳನ್ನು ಪಿಯುಸಿ ವಿಜ್ಞಾನ ಅಥವಾ ನೀಟ್ ತರಬೇತಿಗಾಗಿ ಕಾಲೇಜಿಗೆ ದಾಖಲಿಸಬೇಕಾದರೆ ಮೊದಲು ಆಯಾ ಕಾಲೇಜುಗಳ ಫಲಿತಾಂಶದ ಇತಿಹಾಸ ನೋಡಿ ಅತ್ಯುತ್ತಮವಾದ ಕಾಲೇಜಿಗೆ ದಾಖಲು ಮಾಡಬೇಕು. ಇದರಿಂದ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ. ಸಿಇಟಿ, ನೀಟ್, ಜೆಇಇ ವೃತ್ತಿಪರ ಶಿಕ್ಷಣಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಂಥವುಗಳು. ವಿದ್ಯಾರ್ಥಿ, ಶಿಕ್ಷಕ, ಪಾಲಕ ಮತ್ತು ಕಾಲೇಜು ಈ ನಾಲ್ಕು ವ್ಯವಸ್ಥೆಗಳು ಸರಿಯಾಗಿ ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದರೆ ವಿದ್ಯಾರ್ಥಿಗಳು ಸಾಧಕರಾಗಿ ಹೊರಹೊಮ್ಮುವುದು ಸಾಧ್ಯವಾಗುತ್ತದೆ. ನಮ್ಮ ಸಂಸ್ಥೆ ಇದನ್ನು ಮಾಡಿ ತೋರಿಸುತ್ತಿದೆ ಎಂದರು.
ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹೆಸರಾಂತ ಕಾಲೇಜುಗಳಲ್ಲಿ ನಮ್ಮಲ್ಲಿ ನೀಟ್ ಪಾಸಾದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟು ಸಿಕ್ಕಿವೆ. ನಾವು ತರಬೇತಿ ನೀಡುವುದರ ಜೊತೆಗೆ ಎಂಬಿಬಿಎಸ್ ಶಿಕ್ಷಣಕ್ಕೆ ಆಯ್ಕೆಯಾದಲ್ಲಿ ಬಡವರು, ಕೈಷಿಕರ ಮಕ್ಕಳಿದ್ದರೆ ಆರ್ಥಿಕ ನೆರವನ್ನೂ ಸಹಿತ ನಮ್ಮ ಸಂಸ್ಥೆಯಿಂದ, ಎನ್.ಜಿ.ಓಗಳಿಂದ ಒದಗಿಸಿಕೊಡುವ ಮೂಲಕ ಪ್ರೋತ್ಸಾಹ ಕೊಡುತ್ತೇವೆ ಎಂದರು.
ನಾಗರಬೆಟ್ಟದಲ್ಲಿ ಕೇಂದ್ರ ಸ್ಥಾನ ಹೊಂದಿರುವ ನಮ್ಮ ನೀಟ್ ಅಕಾಡೆಮಿ ಮತ್ತು ಪಿಯು ಸೈನ್ಸ್ ಕಾಲೇಜಿನ ಶಾಖೆಗಳನ್ನು ಮುದ್ದೇಬಿಹಾಳ ಮತ್ತು ಬಾಗಲಕೋಟೆಯ ನವನಗರದಲ್ಲೂ ಪ್ರಾರಂಭಿಸಲಾಗಿದ್ದು ಅಲ್ಲಿಯೂ ನಮಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದು ನಮ್ಮ ಗುಣಮಟ್ಟದ ಶಿಕ್ಷಣಕ್ಕೆ ಕನ್ನಡಿ ಹಿಡಿದಂತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ರೇವಣಸಿದ್ದ ಚಲವಾದಿ (ಮುರಾಳ) ಅವರು ಕಾಲೇಜು ಮತ್ತು ನೀಟ್ ಅಕಾಡೆಮಿಯ ಕಲಿಕಾ ಚಟುವಟಿಕೆ, ಉಪನ್ಯಾಸಕರ ಪಾಂಡಿತ್ಯ ಮತ್ತು ಆಡಳಿತ ಮಂಡಳಿಯವರ ಸಹಕಾರ, ಪ್ರೋತ್ಸಾಹದ ಕುರಿತು ಮಾತನಾಡಿದರು. ಪ್ರಾಂಶುಪಾಲರಾದ ಸಿ.ಬಿ.ದೇಸಾಯಿ, ಮುಖ್ಯಾಧ್ಯಾಪಕರಾದ ಅಪ್ಪು ಪಾಟೀಲ ಇದ್ದರು.
225 ಮೆಡಿಕಲ್ ಮಾತ್ರವಲ್ಲದೆ 240ಕ್ಕೂ ಅಧಿಕ ವಿದ್ಯಾರ್ಥಿಗಳು ಆಯುರ್ವೇದಿಕ್ ವೈದ್ಯಕೀಯ ಬಿಎಎಂಎಸ್, 50-60 ವಿದ್ಯಾರ್ಥಿಗಳು ವೆಟರ್ನರಿ ಶಿಕ್ಷಣಕ್ಕೆ ಆಯ್ಕೆಯಾಗಿರುವುದು ನಮ್ಮ ಸಂಸ್ಥೆಯ ಸಾಧನೆಯಾಗಿದೆ. ಮುದ್ದೇಬಿಹಾಳ, ಬಾಗಲಕೋಟೆ ನವನಗರದ ಶಾಖೆಗಳಿಗೂ ಹೆಚ್ಚಿನ ವಿದ್ಯಾರ್ಥಿಗಳ ಬೆಂಬಲ ವ್ಯಕ್ತವಾಗುತ್ತಿದೆ. –ಅಮಿತಗೌಡ ಪಾಟೀಲ, ಆಡಳಿತಾಧಿಕಾರಿ, ಆಕ್ಸಫರ್ಡ್ ಪಾಟೀಲ್ಸ್ ನೀಟ್ ಅಕಾಡೆಮಿ, ನಾಗರಬೆಟ್ಟ.

