Friday, October 16, 2026
Homeನಿಮ್ಮ ಜಿಲ್ಲೆಪಿಎಸ್‌ಐ ಹುದ್ದೆಯ ಆಸೆ ತೋರಿಸಿ ₹60 ಲಕ್ಷಕ್ಕೆ ವಂಚನೆ ಆರೋಪ: 8 ಮಂದಿ ವಿರುದ್ಧ FIR

ಪಿಎಸ್‌ಐ ಹುದ್ದೆಯ ಆಸೆ ತೋರಿಸಿ ₹60 ಲಕ್ಷಕ್ಕೆ ವಂಚನೆ ಆರೋಪ: 8 ಮಂದಿ ವಿರುದ್ಧ FIR

ಯಾದಗಿರಿ: ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ (PSI) ಹುದ್ದೆ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ ₹60 ಲಕ್ಷ ಪಡೆದು ವಂಚಿಸಿರುವ ಆರೋಪದಡಿ ಎಂಟು ಮಂದಿ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರಪುರ ತಾಲೂಕಿನ ತಳ್ಳಳ್ಳಿ (ಬಿ) ಗ್ರಾಮದ ದೇವೇಂದ್ರ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ದೂರಿನ ಪ್ರಕಾರ, ದೇವೇಂದ್ರ ಅವರ ಅಣ್ಣನ ಪತ್ನಿ ಪಿಎಸ್‌ಐ ಹುದ್ದೆಯ ನೇಮಕಾತಿಗೆ ಸಿದ್ಧತೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಗಿರೀಶ್ ಎಂಬ ವ್ಯಕ್ತಿಯ ಪರಿಚಯವಾಗಿದ್ದು, ತಾನು ಪರಿಚಯ ಹೊಂದಿರುವವರ ಮೂಲಕ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ ಎನ್ನಲಾಗಿದೆ. ಇದಕ್ಕಾಗಿ ಆರಂಭದಲ್ಲಿ ₹1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಂತರ ಗಿರೀಶ್, ದೀಪಕ್, ಶಶಾಂಕ್‌ಗೌಡ, ಉತ್ತೇಜ, ಶ್ರೇಯಸ್‌ಗೌಡ ಹಾಗೂ ಆನಂದ್ ಸೇರಿದಂತೆ ಕೆಲವರ ಮೊಬೈಲ್‌ ಸಂಖ್ಯೆಗಳನ್ನೂ ನೀಡಿದ್ದಾನೆ ಎನ್ನಲಾಗಿದೆ.

ಆತನ ಮಾತನ್ನು ನಂಬಿದ ದೇವೇಂದ್ರ ಅವರು 2026ರ ಏಪ್ರಿಲ್ 7ರಂದು ಅರಸಿನಕುಂಟೆಯಲ್ಲಿರುವ ಕೊಠಡಿಯೊಂದರಲ್ಲಿ ಗಿರೀಶ್ ಹಾಗೂ ದೀಪಕ್ ಅವರಿಗೆ ₹20 ಲಕ್ಷ ನಗದು ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇದಾದ ಬಳಿಕ ಲಕ್ಷ್ಮೀ ವೆಂಕಟೇಶ್ವರ ಎಂಟರ್‌ಪ್ರೈಸಸ್, ಉತ್ತೇಜ ಹಾಗೂ ಎಂ.ಸಿ. ರಂಗನಾಥ್ ಅವರ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು ₹40 ಲಕ್ಷ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನಗದು ಹಾಗೂ ಬ್ಯಾಂಕ್ ವರ್ಗಾವಣೆ ಸೇರಿ ಒಟ್ಟು ₹60 ಲಕ್ಷ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾಲ ಮಾಡಿ, ಆಸ್ತಿ ಮಾರಾಟ ಮಾಡಿ ಹಣ ನೀಡಿದ ಆರೋಪ

ಪಿಎಸ್‌ಐ ಹುದ್ದೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ದೇವೇಂದ್ರ ಅವರು ಹೋಮ್ ಲೋನ್ ಮಾಡಿಕೊಂಡು, ಹೊಲ ಮಾರಾಟ ಮಾಡಿ ಹಾಗೂ ಸಂಬಂಧಿಕರಿಂದ ಸಾಲ ಪಡೆದು ಹಣ ಹೊಂದಿಸಿದ್ದಾಗಿ ತಿಳಿಸಿದ್ದಾರೆ.

ಆದರೆ ಪಿಎಸ್‌ಐ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿ ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಆರೋಪಿಗಳು ಸಮರ್ಪಕವಾಗಿ ಸ್ಪಂದಿಸಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹುದ್ದೆಯೂ ಸಿಗದೆ, ಹಣವೂ ವಾಪಸ್ ಬರದ ಹಿನ್ನೆಲೆಯಲ್ಲಿ ದೇವೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ಕೆಂಭಾವಿ ಪೊಲೀಸರು ಗಿರೀಶ್, ದೀಪಕ್, ಶಶಾಂಕ್‌ಗೌಡ, ಉತ್ತೇಜ, ಶ್ರೇಯಸ್‌ಗೌಡ, ಆನಂದ್, ಎಂ.ಸಿ. ರಂಗನಾಥ್ ಹಾಗೂ ಸತ್ಯ ಅಲಿಯಾಸ್ ಸತೀಶ್ ವಿರುದ್ಧ ಬಿಎನ್‌ಎಸ್‌ನ ಕಲಂ 316(2), 318(2) ಹಾಗೂ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಹಣದ ವರ್ಗಾವಣೆ, ಆರೋಪಿಗಳ ನಡುವಿನ ಸಂಪರ್ಕ ಹಾಗೂ ಹುದ್ದೆ ಕೊಡಿಸುವುದಾಗಿ ನೀಡಿದ್ದ ಭರವಸೆಯ ಕುರಿತಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments