Sunday, August 16, 2026
Homeನಿಮ್ಮ ಜಿಲ್ಲೆಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಯಶಸ್ವಿ; ಒಎಂಆರ್–ಪ್ರಶ್ನೆ ಪತ್ರಿಕೆ ಕ್ರಮ ಸಂಖ್ಯೆ ಕುರಿತು ಗೊಂದಲಕ್ಕೆ...

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಯಶಸ್ವಿ; ಒಎಂಆರ್–ಪ್ರಶ್ನೆ ಪತ್ರಿಕೆ ಕ್ರಮ ಸಂಖ್ಯೆ ಕುರಿತು ಗೊಂದಲಕ್ಕೆ KEA ಸ್ಪಷ್ಟನೆ

ಬೆಂಗಳೂರು, ಆಗಸ್ಟ್ 2: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ರಾಜ್ಯದಾದ್ಯಂತ ಭಾನುವಾರ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಯಿತು. ಪರೀಕ್ಷೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಹೊಂದಿಕೆಯಾಗಿಲ್ಲ ಎಂಬ ಆರೋಪಗಳು ಹರಿದಾಡಿದ ಹಿನ್ನೆಲೆಯಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಸ್ಪಷ್ಟನೆ ನೀಡಿ ವದಂತಿಗಳಿಗೆ ತೆರೆ ಎಳೆದಿದೆ.

KEA ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ವಿಜಯಪುರ ಜಿಲ್ಲೆಯ ತಿಕೋಟಾ ಪರೀಕ್ಷಾ ಕೇಂದ್ರದಲ್ಲಿ ಕೆಲ ಅಭ್ಯರ್ಥಿಗಳ ಒಎಂಆರ್ ಉತ್ತರ ಪತ್ರಿಕೆ ಹಾಗೂ ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ವಿಭಿನ್ನವಾಗಿರುವುದನ್ನು ಆಧಾರವನ್ನಾಗಿ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆದಿದೆ. ಆದರೆ, ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಒಂದೇ ಇರಬೇಕು ಎಂಬ ಯಾವುದೇ ನಿಯಮ ಅಥವಾ ಷರತ್ತು KEA ಅಧಿಸೂಚನೆ ಅಥವಾ ಪರೀಕ್ಷಾ ಮಾರ್ಗಸೂಚಿಗಳಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಾಧಿಕಾರದ ಪ್ರಕಾರ, ಪರೀಕ್ಷೆಯ ಪಾರದರ್ಶಕತೆ ಹಾಗೂ ನ್ಯಾಯಸಮ್ಮತತೆಯನ್ನು ಕಾಪಾಡುವ ಉದ್ದೇಶದಿಂದ ಅಭ್ಯರ್ಥಿಗಳಿಗೆ ಒಎಂಆರ್ ಉತ್ತರ ಪತ್ರಿಕೆಗಳು ಮತ್ತು ಪ್ರಶ್ನೆ ಪತ್ರಿಕೆಗಳನ್ನು ಯಾದೃಚ್ಛಿಕ (Random) ವಿಧಾನದಲ್ಲಿ ವಿತರಿಸಲಾಗುತ್ತದೆ. ಹೀಗಾಗಿ ಎರಡರ ಕ್ರಮ ಸಂಖ್ಯೆಗಳು ಭಿನ್ನವಾಗಿರುವುದು ಸಹಜ ಪ್ರಕ್ರಿಯೆಯಾಗಿದ್ದು, ಅದರಿಂದ ಪರೀಕ್ಷೆಯ ಸಿಂಧುತ್ವ ಅಥವಾ ಮೌಲ್ಯಮಾಪನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಲಾಗಿದೆ.

ಒಎಂಆರ್ ಉತ್ತರ ಪತ್ರಿಕೆಗಳಲ್ಲಿ ಅಭ್ಯರ್ಥಿಯ ವಿವರಗಳು, ಪರೀಕ್ಷಾ ಮಾಹಿತಿ ಹಾಗೂ ಅಗತ್ಯ ಗುರುತು ವಿವರಗಳನ್ನು ನಿಯಮಾನುಸಾರ ದಾಖಲಿಸಲಾಗಿರುವುದರಿಂದ, ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಬೇರೆ ಇದ್ದರೂ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು KEA ವಿವರಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಹಾಗೂ ಆಧಾರರಹಿತ ಮಾಹಿತಿಗಳನ್ನು ನಂಬದಂತೆ ಅಭ್ಯರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿರುವ KEA, ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ಅಧಿಕೃತ ಪ್ರಕಟಣೆಗಳನ್ನೇ ನಂಬುವಂತೆ ಸೂಚಿಸಿದೆ.

ಇದೇ ವೇಳೆ, ಪರೀಕ್ಷಾ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ಹಾಗೂ ನಿಗದಿತ ನಿಯಮಾವಳಿಗಳಂತೆ ನಡೆದಿದ್ದು, ಅಭ್ಯರ್ಥಿಗಳು ಅನಗತ್ಯ ಗೊಂದಲ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪುನರುಚ್ಚರಿಸಿದೆ.

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ, ವದಂತಿಗಳು ಹಾಗೂ ಗೊಂದಲ ಉಂಟುಮಾಡುವ ಸಂದೇಶಗಳನ್ನು ಹರಡುವವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಪರೀಕ್ಷಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಅಥವಾ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಸೃಷ್ಟಿಸುವ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವವರನ್ನು ಗುರುತಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಅನ್ವಯವಾಗುವ ಇತರೆ ಕಾನೂನುಗಳಡಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಸಾರ್ವಜನಿಕರು ಅಧಿಕೃತ ಮೂಲಗಳಿಂದ ಬಿಡುಗಡೆಯಾಗುವ ಮಾಹಿತಿಯನ್ನಷ್ಟೇ ನಂಬುವಂತೆ ಕೋರಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments