Sunday, August 16, 2026
Homeನಿಮ್ಮ ಜಿಲ್ಲೆಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ: ಪಾರದರ್ಶಕತೆ ಹಾಗೂ ಅಭ್ಯರ್ಥಿಗಳ ಅನುಕೂಲಕ್ಕೆ ಸರ್ಕಾರದ ಬದ್ಧತೆ – ಗೃಹ...

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ: ಪಾರದರ್ಶಕತೆ ಹಾಗೂ ಅಭ್ಯರ್ಥಿಗಳ ಅನುಕೂಲಕ್ಕೆ ಸರ್ಕಾರದ ಬದ್ಧತೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆಧಾರ್ಮಿಕ ವಸ್ತ್ರ ಧಾರಣೆಗೆ ಸರ್ಕಾರ ನಿರ್ಬಂಧ ವಿಧಿಸಿಲ್ಲ

ರಾಜ್ಯದಲ್ಲಿ ನಡೆಯಲಿರುವ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯನ್ನು ಸಂಪೂರ್ಣ ಪಾರದರ್ಶಕ, ನ್ಯಾಯಸಮ್ಮತ ಹಾಗೂ ಸುಗಮವಾಗಿ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷಾ ಪ್ರಕ್ರಿಯೆಯನ್ನು ಯಾವುದೇ ಗೊಂದಲ ಅಥವಾ ಅಕ್ರಮಗಳಿಗೆ ಅವಕಾಶವಿಲ್ಲದಂತೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಪರೀಕ್ಷಾ ಕೇಂದ್ರಗಳಲ್ಲಿ ಅನುಸರಿಸಬೇಕಾದ ವಸ್ತ್ರ ಸಂಹಿತೆ ಹಾಗೂ ತರಬಹುದಾದ ಮತ್ತು ನಿಷೇಧಿತ ವಸ್ತುಗಳ ಕುರಿತು ಈಗಾಗಲೇ ಅಭ್ಯರ್ಥಿಗಳ ಹಾಲ್ ಟಿಕೆಟ್‌ನಲ್ಲಿ ಸ್ಪಷ್ಟ ಮಾಹಿತಿಯನ್ನು ನೀಡಲಾಗಿದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಈ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಪರೀಕ್ಷಾ ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಗೃಹ ಸಚಿವರು ಸ್ಪಷ್ಟಪಡಿಸಿದಂತೆ, ಯಾವುದೇ ಧಾರ್ಮಿಕ ವಸ್ತ್ರಕ್ಕೆ ಸರ್ಕಾರ ನಿರ್ಬಂಧ ವಿಧಿಸಿಲ್ಲ. ಧಾರ್ಮಿಕ ಉಡುಪು ಅಥವಾ ಧಾರ್ಮಿಕ ಆಭರಣಗಳನ್ನು ಧರಿಸಿ ಪರೀಕ್ಷೆ ಬರೆಯಲು ಬಯಸುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಂತಹ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೂ 2 ಗಂಟೆ 30 ನಿಮಿಷಗಳ ಮೊದಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಅಗತ್ಯ ಭದ್ರತಾ ತಪಾಸಣೆಗೆ ಒಳಪಟ್ಟ ಬಳಿಕ ಪರೀಕ್ಷೆ ಬರೆಯಬಹುದು ಎಂದು ತಿಳಿಸಿದರು.

ಅಭ್ಯರ್ಥಿಗಳು ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಸಾಧನಗಳು, ಕ್ಯಾಲ್ಕುಲೇಟರ್, ಪೆನ್ ಡ್ರೈವ್, ಪುಸ್ತಕಗಳು, ಬ್ಯಾಗ್ ಸೇರಿದಂತೆ ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಬಾರದು. ಪರೀಕ್ಷೆಯ ಪಾವಿತ್ರ್ಯ ಹಾಗೂ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಅದೇ ವೇಳೆ ಜನಿವಾರ, ಶಿವದಾರ, ತಾಳಿ, ರುದ್ರಾಕ್ಷಿ, ಮಂಗಳಸೂತ್ರ, ಬಳೆಗಳು, ಉಂಗುರ, ಕುಂಕುಮ ಸೇರಿದಂತೆ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಆಭರಣಗಳು ಮತ್ತು ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಸಚಿವರು ಪುನರುಚ್ಚರಿಸಿದರು.

ಸಾಮಾಜಿಕ ಜಾಲತಾಣಗಳು ಅಥವಾ ಇತರೆ ಮೂಲಗಳಲ್ಲಿ ಹರಿದಾಡುವ ಸುಳ್ಳು ಸುದ್ದಿ ಹಾಗೂ ವದಂತಿಗಳಿಗೆ ಅಭ್ಯರ್ಥಿಗಳು ಕಿವಿಗೊಡಬಾರದು. ಸರ್ಕಾರ ಮತ್ತು ನೇಮಕಾತಿ ಪ್ರಾಧಿಕಾರ ಹೊರಡಿಸಿರುವ ಅಧಿಕೃತ ಮಾಹಿತಿಯನ್ನಷ್ಟೇ ನಂಬುವಂತೆ ಮನವಿ ಮಾಡಿದ ಸಚಿವರು, ಎಲ್ಲ ಉದ್ಯೋಗಾಕಾಂಕ್ಷಿಗಳು ಯಾವುದೇ ಗೊಂದಲಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹಾಗೂ ಪೊಲೀಸ್‌ ಇಲಾಖೆಯ ಎಡಿಜಿಪಿ (ನೇಮಕಾತಿ) ಉಮೇಶ್‌ ಕುಮಾರ್‌ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments