Sunday, April 12, 2026
HomeUncategorizedನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜು: 4 ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ 3 ಸ್ಥಾನ: ಗಣಿತದಲ್ಲಿ...

ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜು: 4 ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ 3 ಸ್ಥಾನ: ಗಣಿತದಲ್ಲಿ 418 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದ ರಾಜ್ಯದ ಮೊದಲ ಕಾಲೇಜು: ಅಮಿತಗೌಡ ಪಾಟೀಲ

ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗುಡ್ಡದ ಹತ್ತಿರ ಇರುವ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ನಾಲ್ವರು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದ 3 ಸ್ಥಾನ ಬಾಚಿಕೊಳ್ಳುವ ಮೂಲಕ ಅತ್ಯುತ್ತಮ ಸಾಧನೆ ತೋರಿದ್ದಾರೆ. ಬಸವನ ಬಾಗೇವಾಡಿಯ ಲಕ್ಷ್ಮೀ ಅಡಗಿಮನಿ 600ಕ್ಕೆ 592 ಅಂಕ (ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ ವಿಷಯಗಳಲ್ಲಿ 100ಕ್ಕೆ 100 ಅಂಕ) ಪಡೆದು ರಾಜ್ಯಕ್ಕೆ 6ನೇ, ಕೌಜಲಗಿಯ ಭಾಗ್ಯಾ ಹೊಸಮನಿ, ಕಲಬುರ್ಗಿಯ ನಂದಿತಾ ರೆಡ್ಡಿ ತಲಾ 591 ಅಂಕ ಪಡೆದು ರಾಜ್ಯಕ್ಕೆ 7ನೇ, ಬಾಗಲಕೋಟ ಜಿಲ್ಲೆ ಮುಧೋಳದ ಸಂಜನಾ ದಾಸನಗೌಡರ 590 ಅಂಕ ಪಡೆದು ರಾಜ್ಯಕ್ಕೆ 8ನೇ ಸ್ಥಾನ ಗಳಿಸಿ ಸಾಧಕರಾಗಿ ಹೊರಹೊಮ್ಮಿದ್ದಾರೆ. ಈ ನಾಲ್ವರು 590ಕ್ಕೂ ಹೆಚ್ಚು ಅಂಕ ಗಳಿಸಿರುವುದು ವಿಶೇಷ ಸಾಧನೆ ಎನ್ನಿಸಿಕೊಂಡಿದೆ.

ಇದೇ ಮೊದಲ ಬಾರಿ 900 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ದರ್ಜೆಯಲ್ಲಿ ಪಾಸಾಗಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. 163 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ ಓರ್ವ ವಿದ್ಯಾರ್ಥಿ ದ್ವಿತಿಯ ಸ್ಥಾನ ಗಳಿಸಿದ್ದಾನೆ. ಕಾಲೇಜಿನ ಒಟ್ಟಾರೆ ಫಲಿತಾಂಶ ಶೇ.99.06 ಆಗಿದೆ. ಪರೀಕ್ಷೆಗೆ 1069 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಇವರಲ್ಲಿ 5 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರಲಿಲ್ಲ. ಹಾಜರಾದ 1064 ವಿದ್ಯಾರ್ಥಿಗಳ ಸಂಖ್ಯೆ ಪರಿಗಣಿಸಿದರೆ ಶೇ.100 ಫಲಿತಾಂಶ ಬಂದಂತಾಗಿದೆ. ವಿಷಯವಾರು ಶೇ.100 ಫಲಿತಾಂಶ ಪರಿಗಣಿಸಿದರೆ ಗಣಿತ ವಿಷಯದಲ್ಲಿ 418 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದ ರಾಜ್ಯದ ಮೊದಲ ಕಾಲೇಜು ಎನ್ನುವ ಕೀರ್ತಿ ತಂದುಕೊಟ್ಟು ಗಮನಾರ್ಹ ಸಾಧನೆ ಮಾಡಿದ್ದಾರೆ. ಭೌತಶಾಸ್ತ್ರದಲ್ಲಿ 72, ಜೀವಶಾಸ್ತ್ರದಲ್ಲಿ 70, ಕನ್ನಡದಲ್ಲಿ 3, ಹಿಂದಿ ಮತ್ತು ಕಂಪ್ಯೂಟರ್ ಸೈನ್ಸನಲ್ಲಿ ತಲಾ ಓರ್ವ ವಿದ್ಯಾರ್ಥಿ 100ಕ್ಕೆ 100 ಅಂಕ ಗಳಿಸಿದ್ದಾರೆ.

ವಿದ್ಯಾರ್ಥಿಗಳಾದ ಗಜೇಂದ್ರಗಡದ ಅದಿತಿ ಸವಣೂರ (588), ದೇಸಣಗಿಯ ಭಾಗ್ಯಲಕ್ಷ್ಮೀ (571), ಯರನಾಳದ ಲಕ್ಷ್ಮೀ ಸಜ್ಜನ, ಕುರಗೋಡದ ವರ್ಷಾ ಯರಗಟ್ಟಿ (586), ಹಿರೇಬಾಗೇವಾಡಿಯ ಚಿನ್ಮಯಿ ಎನ್, ಹುಣಸಗಿಯ ಗಾಯತ್ರಿ, ಭೈರವಾಡಗಿಯ ಪ್ರಶಾಂತ ಎಲ್, ಮಿಣಜಗಿಯ ರಾಜೇಶ್ವರಿ ಬಾಗೇವಾಡಿ, ಮೂಡಲಗಿಯ ರಾಜೇಶ್ವರಿ ಕೆ., ಕಲಬುರ್ಗಿಯ ಶಿವಾನಿ ಜಮಶೆಟ್ಟಿ., ಜಾಲಿಹಾಳದ ಸ್ನೇಹಾ ಅಕ್ಕಿ (ಎಲ್ಲರೂ 585), ನಾಗರಾಳದ ಅಪೇಕ್ಷಾ ಯಲಗೋಡ, ಕೆಂಭಾವಿಯ ಭಾಗ್ಯಶ್ರೀ, ಮಿಣಜಗಿಯ ಗುರುಪ್ರಸಾದ, ನೆಲಗುಂದಾ ತಾಂಡಾದ ಕಮಲಾ ಚವ್ಹಾಣ(ಎಲ್ಲರೂ 584) ಅಂಕ ಪಡೆದು ವಿಶೇಷ ಸಾಧನೆ ತೋರಿದವರಾಗಿದ್ದಾರೆ.

ವಿದ್ಯಾರ್ಥಿಗಳ ಅಪ್ರತಿಮ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಉದಯವಾಣಿಯೊಂದಿಗೆ ಮಾತನಾಡಿದ ಸಂಸ್ಥೆಯ ಚೇರ್ಮನ್ ಎಂ.ಎಸ್.ಪಾಟೀಲ ಅವರು, ನಮ್ಮ ಕಾಲೇಜಿನಲ್ಲಿ ಪ್ರತಿಭೆಗಳಿಗೆ ಮನ್ನಣೆ ಇದೆ ಎನ್ನುವುದಕ್ಕೆ ಈ ಫಲಿತಾಂಶ ಉದಾಹರಣೆಯಾಗಿ ಹೊರಹೊಮ್ಮಿದೆ. ನಮ್ಮಲ್ಲಿ ನುರಿತ ಬೋಧಕ ವೃಂದ ಇದ್ದು ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಬೇರೆ ಬೇರೆ ರಾಜ್ಯಗಳ ಪ್ರತಿಭಾವಂತ ಉಪನ್ಯಾಸಕರು ನಮ್ಮ ಕಾಲೇಜಿನಲ್ಲಿದ್ದು ವಿದ್ಯಾರ್ಥಿಗಳ ವೈಯುಕ್ತಿಕ ಸಾಧನೆಯತ್ತ ಗಮನ ಹರಿಸುತ್ತಾರೆ. ವರ್ಷದಲ್ಲಿ 3-4 ಬಾರಿ ಸಿಲೆಬಸ್ ರಿವಿಜನ್ ಮಾಡಲಾಗುತ್ತದೆ. ಪ್ರತಿ ವಾರ, ತಿಂಗಳು ಕಿರು ಪರೀಕ್ಷೆ ಏರ್ಪಡಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ಹೊಳಪು ನೀಡುವ ಕಾರ್ಯ ನಿರಂತರ ನಡೆಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಹೆಸರು ಮಾಡಿರುವ ನಮ್ಮ ಸಂಸ್ಥೆ ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ಜನಪ್ರೀಯ ಕಾಲೇಜು ಎಂದು ಕರೆಸಿಕೊಳ್ಳುವತ್ತ ನಮ್ಮ ಗುರಿಯನ್ನು ಕೇಂದ್ರೀಕರಿಸಿದ್ದೇವೆ. ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ಗ್ರಾಮೀಣ ಭಾಗದ ರೈತರ ಮಕ್ಕಳು, ಬಡವರ ಮಕ್ಕಳು ಮೆಡಿಕಲ್, ಇಂಜಿನೀಯರಿಂಗ್, ಐಐಟಿ, ಜೆಇಇ ಸೇರಿದಂತೆ ಉನ್ನತ ಶಿಕ್ಷಣ ಪಡೆಯುವಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ನಮ್ಮ ಸಂಸ್ಥೆಯ ಗುರಿ ಎಂದು ತಿಳಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಪಿಯುಸಿ ವಿಭಾಗದ ಉಸ್ತುವಾರಿ ಅಮಿತಗೌಡ ಪಾಟೀಲ ಅವರು ಮಾತನಾಡಿ, ನಮ್ಮ ನಿರೀಕ್ಷೆಯಂತೆಯೇ ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ಓರ್ವನನ್ನು ಹೊರತುಪಡಿಸಿ ಎಲ್ಲರೂ ಸಾಧಕರಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ. ಇದೇ ಮೊದಲ ಬಾರಿಗೆ ಗಣಿತ ವಿಷಯದಲ್ಲಿ ನಮ್ಮ ಕಾಲೇಜಿನ 418 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದು ರಾಜ್ಯಮಟ್ಟದಲ್ಲೇ ನಮ್ಮ ಕಾಲೇಜು ವಿಷಯವಾರು ಫಲಿತಾಂಶದಲ್ಲಿ ಪ್ರಥಮ ಸ್ಥಾನ ಗಳಿಸುವಂತೆ ಮಾಡಿರುವುದು ಸಂತಸ ತಂದಿದೆ. ನಮ್ಮ ತಂಡದ ಗುಣಮಟ್ಟದ ಶಿಕ್ಷಣ ಕೊಡುವ ವ್ಯವಸ್ಥೆ ನಿರಂತರ ಇರಲಿದೆ. ವಿದ್ಯಾರ್ಜನೆ, ಗುಣಮಟ್ಟದ ಶಿಕ್ಷಣದಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ. ಮುದ್ದೇಬಿಹಾಳದಲ್ಲಿರುವ ನಮ್ಮ ಸಂಸ್ಥೆಯ ಶಾಖಾ ಕಾಲೇಜು ಕೂಡ ಉತ್ತಮ ಸಾಧನೆ ತೋರಿದೆ. ನಮ್ಮ ಮುಂದಿನ ಗುರಿ ನೀಟ್ ಪರೀಕ್ಷೆ ಎದುರಿಸುವುದು. ಈ ಬಾರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಶಿಕ್ಷಣ ಎಂಬಿಬಿಎಸ್ ಗೆ ಪ್ರವೇಶ ಪಡೆಯುವಂತೆ ಮಾಡುವ ಮಹತ್ತರ ಗುರಿ ಹಾಕಿಕೊಂಡಿದ್ದೇವೆ ಎಂದರು.

ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಸಂಸ್ಥೆಯ ಇನ್ನೋರ್ವ ಆಡಳಿತಾಧಿಕಾರಿ ದರ್ಶನಗೌಡ ಪಾಟೀಲ, ಮುಖ್ಯ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ, ಪ್ರಾಂಶುಪಾಲ ರೇವಣಸಿದ್ದ ಚಲವಾದಿ(ಮುರಾಳ) ಹಾಗೂ ಸಂಸ್ಥೆಯ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಶೇಷ ವರದಿ: ಮುತ್ತು ವಡವಡಗಿ-ಮೋ:9880143505

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments