ಗೋವಿಂದಪುರ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು – ಆರೋಪಿ ಸಲೀಂಗೆ 7 ವರ್ಷ ಕಠಿಣ ಶಿಕ್ಷೆ
ಪಿಎಸ್ಐ ಇಮ್ರಾನ್ ಧೈರ್ಯ ಸಾಹಸಕ್ಕೆ ನ್ಯಾಯಾಲಯದಿಂದ ಮಾನ್ಯತೆ
ನಗರದ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರ ಜೂನ್ 24ರಂದು ನಡೆದ Cr.No.21/21 ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ತೀರ್ಪು ಪ್ರಕಟವಾಗಿದೆ. ಮಾನ್ಯ CCH-20 ನ್ಯಾಯಾಲಯದ ನ್ಯಾಯಾಧೀಶರಾದ ಓಂಕಾರಪ್ಪ ಅವರು ಸುದೀರ್ಘ ಐದು ವರ್ಷಗಳ ವಿಚಾರಣೆ ಬಳಿಕ ಆರೋಪಿ ಸಲೀಂಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದಾರೆ.
ಘಟನೆಯ ವಿವರಗಳ ಪ್ರಕಾರ, ಕೊಲೆ ಪ್ರಕರಣದ ಆರೋಪಿಯಾಗಿದ್ದ ಸಲೀಂನನ್ನು ಬಂಧಿಸಲು ಅಂದಿನ ಗೋವಿಂದಪುರ ಪೊಲೀಸ್ ಠಾಣೆಯ ಪಿಎಸ್ಐ ಇಮ್ರಾನ್ ಮತ್ತು ಅವರ ತಂಡ ತೆರಳಿದ್ದರು. ಬಂಧನಕ್ಕೆ ಮುಂದಾದ ಸಂದರ್ಭದಲ್ಲಿ ಆರೋಪಿ ಮಚ್ಚಿನಿಂದ ಪಿಎಸ್ಐ ಇಮ್ರಾನ್ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ಆ ಸಂದರ್ಭದಲ್ಲಿ ಪಿಎಸ್ಐ ಇಮ್ರಾನ್ ಅವರು ಅಪಾರ ಧೈರ್ಯ ಮತ್ತು ತಾಳ್ಮೆ ಪ್ರದರ್ಶಿಸಿ, ಆರೋಪಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ಆರೋಪಿ ದಾಳಿ ಮುಂದುವರೆಸಿದ ಕಾರಣ, ಕಾನೂನು ಪ್ರಕಾರ ತಮ್ಮ ಸರ್ವಿಸ್ ಪಿಸ್ತೂಲ್ ಬಳಸಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ, ಅವನನ್ನು ನಿಯಂತ್ರಣದಲ್ಲಿ ತೆಗೆದುಕೊಂಡಿದ್ದಾರೆ. ಗಾಯಗೊಂಡ ಆರೋಪಿಗೆ ತಕ್ಷಣ ಚಿಕಿತ್ಸೆ ನೀಡಿ ನಂತರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಕಿರಣ್ ಅವರು ಸಮಗ್ರವಾಗಿ ನಡೆಸಿ ಬಲವಾದ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕರಾದ ಶಿವುಕುಮಾರ್ ಅವರು ಸಮರ್ಥ ವಾದ ಮಂಡಿಸಿದ್ದರು.
ಪಿಎಸ್ಐ ಇಮ್ರಾನ್ ಅವರ ಧೈರ್ಯಶಾಲಿ ಕ್ರಮ, ಕಾನೂನು ಪಾಲನೆ ಮತ್ತು ಸಾರ್ವಜನಿಕ ಸುರಕ್ಷತೆಗೆ ನೀಡಿದ ಪ್ರಾಮುಖ್ಯತೆ ನ್ಯಾಯಾಲಯದ ತೀರ್ಪಿನ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಡಿಜಿ & ಐಜಿಪಿ ಹಾಗೂ ನಗರ ಪೊಲೀಸ್ ಕಮಿಷನರ್ ಅವರು ಸಂಬಂಧಿತ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಜೀವಪಣವಾಗಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳ ಧೈರ್ಯ ಮತ್ತು ನಿಷ್ಠೆಗೆ ಈ ತೀರ್ಪು ಮತ್ತೊಂದು ಬಲವಾದ ಸಾಕ್ಷಿಯಾಗಿದೆ
ಆಂಜನೇಯ ಮಟ್ಟೂರ.

