ಸಂತ ಸೇವಾಲಾಲ್ ಮಹಾರಾಜ್ ಜಯಂತಿ – ಭಕ್ತಿ, ಸಮಾನತೆ ಮತ್ತು ಸೇವೆಯ ಹಬ್ಬ
ಸಂತ ಸೇವಾಲಾಲ್ ಮಹಾರಾಜ್ ಜಯಂತಿ ಎಂದರೆ ಕೇವಲ ಒಂದು ಆಚರಣೆ ಮಾತ್ರವಲ್ಲ; ಅದು ನಂಬಿಕೆಯ, ನೈತಿಕತೆಯ ಮತ್ತು ಮಾನವೀಯತೆಯ ಸ್ಮರಣೆ.
ಬಂಜಾರ ಸಮುದಾಯದ ಆರಾಧ್ಯ ದೈವವಾಗಿರುವ ಸಂತ ಸೇವಾಲಾಲ್ ಮಹಾರಾಜ್ ಅವರು ಸಮಾಜ ಸುಧಾರಕ, ಧರ್ಮೋಪದೇಶಕ ಹಾಗೂ ದಯಾಮಯ ವ್ಯಕ್ತಿತ್ವವಾಗಿದ್ದರು. ಅವರ ಜೀವನವೇ ಸೇವೆ, ಸತ್ಯ ಮತ್ತು ಸಮಾನತೆಯ ಸಂದೇಶವನ್ನು ಸಾರುವ ಪವಿತ್ರ ಪಥವಾಗಿದೆ.
ಅವರು ಸಮಾಜದಲ್ಲಿ ಜಾತಿ-ಪಂಥ,ಅಸಮಾನತೆ ಮತ್ತು ಅಂಧಶ್ರದ್ಧೆಗಳ ವಿರುದ್ಧ ಧೈರ್ಯವಾಗಿ ನಿಂತು, ಪ್ರೀತಿ ಮತ್ತು ಸಹೋದರತ್ವದ ಮಾರ್ಗವನ್ನು ತೋರಿಸಿದರು.
“ಮಾನವ ಸೇವೆಯೇ ಮಾಧವ(ದೇವರ) ಸೇವೆ” ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಅವರು, ಶ್ರಮದ ಮಹತ್ವವನ್ನು ಮತ್ತು ಸತ್ಯದ ಶಕ್ತಿಯನ್ನು ಜನರಿಗೆ ತಿಳಿಸಿದರು. ಅವರ ಉಪದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ.
ಸೇವಾಲಾಲ್ ಜಯಂತಿಯಂದು ಭಕ್ತರು ಪೂಜೆ, ಭಜನೆ, ಪಲ್ಲಕ್ಕಿ ಉತ್ಸವ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಗೌರವ ಸಲ್ಲಿಸುತ್ತಾರೆ.
ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವನ್ನು ಈ ದಿನ ಪುನರುಚ್ಚರಿಸುತ್ತಾರೆ.
ಯುವಜನತೆಗೆ ನೈತಿಕ ಮೌಲ್ಯಗಳು, ಶಿಸ್ತು ಮತ್ತು ಸಮಾಜಪರ ಚಿಂತನೆ ಬೆಳೆಸುವ ದಿನವೂ ಇದಾಗಿದೆ.
ಇಂದಿನ ವೇಗದ ಯುಗದಲ್ಲಿ ಮಾನವೀಯತೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಸಂತ ಸೇವಾಲಾಲ್ ಮಹಾರಾಜ್ ಅವರ ಸಂದೇಶಗಳು ಮತ್ತಷ್ಟು ಪ್ರಸ್ತುತವಾಗುತ್ತವೆ.
ಪರಸ್ಪರ ಪ್ರೀತಿ, ಸಹಾನುಭೂತಿ ಮತ್ತು ಸೇವಾ ಮನೋಭಾವದೊಂದಿಗೆ ಬದುಕುವುದೇ ಅವರ ತತ್ವಗಳ ಸಾರಾಂಶ.
ಸಂತ ಸೇವಾಲಾಲ್ ಜಯಂತಿ ನಮ್ಮೆಲ್ಲರಿಗೂ ಸೇವೆ, ಸತ್ಯ ಮತ್ತು ಸಮಾನತೆಯ ಜೀವನವನ್ನು ಅನುಸರಿಸುವ ಪ್ರೇರಣೆಯ ದಿನವಾಗಲಿ🙏🙏
ಆಂಜನೇಯ ಮಟ್ಟೂರು
ಶಿಕ್ಷಕರು. ಗಂಗಾವತಿ

