ಮುದ್ದೇಬಿಹಾಳ: ಶಾಸಕ ಸಿ.ಎಸ್.ನಾಡಗೌಡರೆ ಮತಕ್ಷೇತ್ರದ ರೈತರನ್ನು ಕತ್ತಲೆಯಲ್ಲಿಟ್ಟು ರಾಜಕಾರಣ ಮಾಡುವುದನ್ನು ಕೈಬಿಡಿ. ಆಲಮಟ್ಟಿ ನೀರಾವರಿ ಸಲಹಾ ಸಮಿತಿ ಸದಸ್ಯರೂ ಆಗಿರುವ ನೀವು ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು, ನೀರಾವರಿ ಯೋಜನೆ ಪೂರ್ಣಗೊಳಿಸಲು ಈ ಭಾಗದ ರೈತರ ನಿಯೋಗವನ್ನು ಸಿಎಂ, ಜಲಸಂಪನ್ಮೂಲ ಸಚಿವರ ಹತ್ತಿರ ಕರೆದೊಯ್ಯುವ ಬಗ್ಗೆ ಚಕಾರ ಎತ್ತದಿರುವ ಜನತೆಯನ್ನು ಕತ್ತಲಲ್ಲಿಟ್ಟು ರಾಜಕೀಯ ಮಾಡುತ್ತಿರುವಂತಿದೆ. ಕೈಲಾದರೆ ರಾಜಕೀಯ ಮಾಡಿ ಇಲ್ಲವಾದರೆ ತಾಲೂಕಿನ ಜನತೆಗೆ ದ್ರೋಹ ಮಾಡಬೇಡಿ. ರೈತರನ್ನು ಕತ್ತಲಲ್ಲಿಟ್ಟು ರಾಜಕೀಯ ಮಾಡುವುದನ್ನು ಸಂಪೂರ್ಣವಾಗಿ ಬಿಡಬೇಕು. ಇದನ್ನೇ ಮುಂದುವರೆಸಿದಲ್ಲಿ ಸ್ವತಹ ನಾನೇ ಇಲ್ಲಿದ್ದು ಪ್ರತಿ ಗ್ರಾಮಕ್ಕೂ ತೆರಳಿ ರೈತರ ಸಭೆ ನಡೆಸಿ ನೀರಾವರಿಗೆ ಬೃಹತ್ ಹೋರಾಟ ಹಮ್ಮಿಕೊಳ್ಳುವ ಅನಿವಾರ್ಯತೆ ಬರಬಹುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಎಚ್ಚರಿಸಿದರು.
ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಈ ಭಾಗದ ನೀರಾವರಿ ಯೋಜನೆಗಳಿಗೆ ನಿರ್ಲಕ್ಷ್ಯ ತೋರಿದೆ. ಆಲಮಟ್ಟಿಯ ಲಾಲಬಹಾದ್ದೂರ್ ಶಾಸ್ತ್ರೀ ಜಲಾಶಯ ಎತ್ತರಿಸಲು ಈ ಸರ್ಕಾರ ಜವಾಬ್ಧಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ. ಡ್ಯಾಂ ಎತ್ತರಿಸಲು ಅನುಕೂಲವಾಗುವಂತೆ ಸರ್ವ ಪಕ್ಷಗಳ ನಿಯೋಗವನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಒತ್ತಾಯಿಸುವಂತೆ ರೈತರ ಪರವಾಗಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಪಾಲನೆ ಆಗಿಲ್ಲ ಎಂದು ಹರಿಹಾಯ್ದರು.
ಜಲಸಂಪನ್ಮೂಲ ಸಚಿವರಿಗೆ ನೀರಾವರಿ ಜ್ಞಾನ ಇಲ್ಲ:
ರಾಜ್ಯದ ಜಲಸಂಪನ್ಮೂ ಖಾತೆ ಸಚಿವರಿಗೆ ನೀರಾವರಿಯ ಜ್ಞಾನ ಅಷ್ಟೊಂದಿಲ್ಲ. ಅವರು ಕೆಪಿಸಿಸಿ ಅಧ್ಯಕ್ಷರು, ರಾಜ್ಯದ ಉಪಮುಖ್ಯಮಂತ್ರಿ ಮೇಲಾಗಿ ಬೃಹತ್ ಬೆಂಗಳೂರಿನ ಉಸ್ತುವಾರಿ ಸಚಿವರು. ಇಷ್ಟೆಲ್ಲ ಜವಾಬ್ದಾರಿಗಳನ್ನು ನಿಭಾಯಿಸುವ ಒತ್ತಡದೊಳಗೆ ಅವರು ಬೆಂಗಳೂರಿಗೆ ಮಾತ್ರ ಸೀಮಿತರಾಗಿದ್ದು ರಾಜ್ಯದ ನೀರಾವರಿ ಯೋಜನೆಗಳನ್ನೇ ಮರೆತು ಬಿಟ್ಟಿದ್ದಾರೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಚಾಲನೆ ನೀಡುವಂತೆ ಹಲವು ಬಾರಿ ಮನವಿ ಕೊಟ್ಟಿದ್ದರೂ ಪ್ರಯೋಜವಾಗಿಲ್ಲ ಎಂದರು. ರಾಜ್ಯದಲ್ಲಿ ರೈತ ಪರ ಸರ್ಕಾರ ಇಲ್ಲ ಎಂದು ಕಿಡಿಕಾರಿದ ಅವರು ಒಂದು ವೇಳೆ ಈ ಸರ್ಕಾರ ರೈತಪರ ಇದ್ದರೆ ರೈತರನ್ನು ಕಡೆಗಣಿಸುತ್ತಿರಲಿಲ್ಲ ಎಂದು ಕಿಡಿಕಾರಿದರು.
ತುಂಗಭದ್ರಾ ಜಲಾಶಯದಲ್ಲಿ 32 ಟಿಎಂಸಿ, ಆಲಮಟ್ಟಿ ಜಲಾಶಯದಲ್ಲಿ 5 ಟಿಎಂಸಿ ಹೂಳು ತುಂಬಿಕೊಂಡಿದೆ. ಎರಡೂ ಜಲಾಶಯಗಳ ಹೆಚ್ಚುವರಿ ನೀರು ಆಂಧ್ರ, ತೆಲಂಗಾಣಕ್ಕೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಆಲಮಟ್ಟಿ ಜಲಾಶಯವನ್ನು ಎತ್ತರಿಸುವಂತೆ ಸುಪ್ರಿಂಕೋರ್ಟ್ ಹೇಳಿದ್ದರೂ ಪಾಲನೆ ಆಗುತ್ತಿಲ್ಲ. ತುಂಗಭದ್ರಾ ಜಲಾಯಶದ ಒಂದೇ ಕ್ರಷ್ಟ್ ಗೇಟ್ ಅಳವಡಿಸಿದ್ದು ಇನ್ನುಳಿದವುಗಳನ್ನು ಬೇಗ ಅಳವಡಿಸಬೇಕು ಎಂದು ಆಗ್ರಹಿಸಿದರು.
ಮುದ್ದೇಬಿಹಾಳಕ್ಕೆ ಅಭಿವೃದ್ದಿ ಸುರಿಮಳೆ ಅನ್ನೋದು ಭಟ್ಟಂಗಿಗಳ ಮಾತು-ಪಾಟೀಲ ಲೇವಡಿ:
ಸಂಘದ ನೂತನ ರಾಜ್ಯ ಸಂಘಟನಾ ಕಾರ್ಯದರ್ಶಿ, ನೀರಾವರಿ ಹೋರಾಟಗಾರ ಬಸನಗೌಡ ಪಾಟೀಲ ಹಿರೇಮುರಾಳ ಅವರು ಮಾತನಾಡಿ, ಮುದ್ದೇಬಿಹಾಳ ತಾಲೂಕು ನೀರಾವರಿಯಿಂದ ವಂಚಿತವಾಗಿದೆ. ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಮುದ್ದೇಬಿಹಾಳಕ್ಕೆ ಬಜೆಟ್ಟಿನಲ್ಲಿ ಅಭಿವೃದ್ದಿಯ ಸುರಿಮಳೆ ಆಗಿದೆ ಎಂದು ಕೆಲ ಭಟ್ಟಂಗಿಗಳು ಹೇಳ್ತಿದ್ದಾರೆ. ಆದರೆ ಯಾವುದೂ ಆಗಿಲ್ಲ. ರೈತರನ್ನು ವಂಚಿಸುವ ಕೆಲಸ ನಿರಂತರ ನಡೆದಿದೆ. ಚಿಮ್ಮಲಗಿ ಮತ್ತು ನಾಗರಬೆಟ್ಟ ಏತ ನೀರಾವರಿ ಯೋಜನೆಗಳಿಗೆ ಇದುವರೆಗೂ ನೀರು ಕೊಟ್ಟಿಲ್ಲ. 3ನೇ ಹಂತದಲ್ಲಿ ನೀರು ಕೊಡುವುದಾಗಿ ಹೇಳುತ್ತಾರೆ. ಆದರೆ 3ನೇ ಹಂತದಲ್ಲಿ ಕೊಡಬೇಕಾದರೆ ಆಲಮಟ್ಟಿ ಜಲಾಯಶ ಎತ್ತರಿಸಬೇಕು. ಆಲಮಟ್ಟಿ ಜಲಾಶಯ ಎತ್ತರ ಮಾಡಿ ಎಂದರೆ ಮುಖ್ಯಮಂತ್ರಿಯವರು ಪ್ರಧಾನಿ ಮೋದಿ ಅವರತ್ತ ಬೆಟ್ಟು ಮಾಡುತ್ತಾರೆ. ಕೇಂದ್ರದವರು ರಾಜ್ಯ ಸರ್ಕಾರವೇ ಮಾಡಬೇಕು ಎನ್ನುತ್ತಾರೆ. ಇದು ರೈತರನ್ನು ಕತ್ತಲೆಯಲ್ಲಿ ಇಡುವಂತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಪದಾಧಿಕಾರಿಗಳಾದ ಗುರುಸಂಗಪ್ಪಗೌಡ ಹಂಡರಗಲ್, ಬಸನಗೌಡ ಬ್ಯಾಲಾಳ ಇನ್ನಿತರರು ಇದ್ದರು.
ಸಿದ್ದರಾಮಯ್ಯನವರು 2015ರಲ್ಲಿ ಮುದ್ದೇಬಿಹಾಳಕ್ಕೆ ಚುನಾವಣಾ ಭಾಷಣಕ್ಕೆ ಬಂದಾಗ ಕಾಂಗ್ರೆಸ್ ಸರ್ಕಾರ ಆರಿಸಿ ತಂದಲ್ಲಿ ಯುಕೆಪಿಗೆ ಲಕ್ಷ ಕೋಟಿ ಅನುದಾನ ಕೊಡುವುದಾಗಿ ಹೇಳಿದ್ದ ವಾಗ್ದಾನ ಈಡೇರಿಲ್ಲ. ನಾರಾಯಣಪುರ, ಆಲಮಟ್ಟಿ ಜಲಾಶಯ ಮುಳುಗಡೆ ಸಂತ್ರಸ್ತರಿಗೆ ಇನ್ನೂ ಸೂಕ್ತ ಭೂಪರಿಹಾರ ಸಿಕ್ಕಿಲ್ಲ. ನಾಗರಬೆಟ್ಟ ಏತ ನೀರಾವರಿ ಬಗ್ಗೆ ಸುಳ್ಳುಗಳನ್ನೇ ಹೇಳಿ ರೈತರ ದಾರಿ ತಪ್ಪಿಸಲಾಗುತ್ತಿದೆ. ಕಾಲುವೆಗಳ ಕೆಲಸ ಪೂರ್ಣಗೊಂಡಿಲ್ಲ. ಈ ಯೋಜನೆ ಜಾರಿಯಾದಲ್ಲಿ 1200 ಕೋಟಿ ವಾರ್ಷಿಕ ಆದಾಯ ನೀರಾವರಿಯಿಂದ ಬರುತ್ತದೆ. ಸರ್ಕಾರದ ನಿರ್ಲಕ್ಷ್ಯ ರೈತರಲ್ಲಿ ಬೇಸರ ಮೂಡಿಸಿದೆ. -ಬಸನಗೌಡ ಪಾಟೀಲ ಹಿರೇಮುರಾಳ, ರಾಜ್ಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಮುದ್ದೇಬಿಹಾಳ.
ವರದಿ: ಮುತ್ತು ವಡವಡಗಿ, ಮೋ:9880143505

