ಮುದ್ದೇಬಿಹಾಳ: ಸಮಾಜ ಸೇವೆಯ ಭಾಗವಾಗಿ ಅಸ್ಕಿ ಫೌಂಡೇಶನ್ ವತಿಯಿಂದ ಮಾ.9ರಂದು ಸಂಜೆ 5-30ಕ್ಕೆ ಮುದ್ದೇಬಿಹಾಳದ ಮಹೆಬೂಬನಗರದಲ್ಲಿರುವ ಮಕ್ಕಾ ಶಾದಿ ಮಹಲ್ ಹತ್ತಿರ ಸರ್ಕಾರಿ ಉರ್ದು ಶಾಲೆಯಲ್ಲಿ ಮತ್ತು ನಾಲತವಾಡ ಪಟ್ಟಣದಲ್ಲಿ, ಮಾ.11ರಂದು ಸಂಜೆ ಕಾಳಗಿ ಗ್ರಾಮದಲ್ಲಿ ಮಾ.15ರಂದು ಸಂಜೆ ಕಾಶಿನಕುಂಟಿ ಗ್ರಾಮದಲ್ಲಿ ರಂಜಾನ್ ಹಬ್ಬದ ಹಿನ್ನೆಲೆ ಇಫ್ತಿಯಾರ್ ಸೌಹಾರ್ದ ಕೂಟ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ, ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸಿ.ಬಿ.ಅಸ್ಕಿ(ಕೊಣ್ಣೂರ) ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 8 ವರ್ಷಗಳಿಂದ ಇಫ್ತಿಯಾರ್ ಆಯೋಜಿಸಿಕೊಂಡು ಬರಲಾಗುತ್ತಿದೆ. ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ಮೂಡಿಸುವಲ್ಲಿ ಫೌಂಡೇಶನ್ ಸದಾ ಮುಂಚೂಣಿಯಲ್ಲಿರುತ್ತದೆ. ಇದರಲ್ಲಿ ಯಾವುದೇ ರೀತಿಯ ಭೇದ ಭಾವ ಇಲ್ಲ. ಹಿಂದು ಮತ್ತು ಮುಸ್ಲಿಂ ಸಮಾಜಗಳ ಮುಖಂಡರು ಇದರಲ್ಲಿ ಭಾಗವಹಿಸುವ ಮೂಲಕ ಸಮಾಜಕ್ಕೆ ಸೌಹಾರ್ದತೆಯ ಸಂದೇಶ ಬೀರುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಗೋವಾ ಕನ್ನಡಿಗರ ಮಹಾಸಂಘದ ಗೌರವಾಧ್ಯಕ್ಷ ಹಾಗೂ ಗೋವಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿದ್ದಣ್ಣ ಮೇಟಿ ಅವರು ಮಾತನಾಡಿ ರಂಜಾನ್ ನಿಮಿತ್ತ ಉಪವಾಸ ವೃತ ಆಚರಿಸುವ ಮುಸ್ಲೀಂ ಬಾಂಧವರು ಇರುವ ಪ್ರತಿ ಹಳ್ಳಿಯಲ್ಲೂ ಅಸ್ಕಿ ಫೌಂಡೇಶನ್ ವತಿಯಿಂದ ಇಫ್ತಿಯಾರ್ ಸೌಹಾರ್ದ ಕೂಟ ಏರ್ಪಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂಥ ಸಮಾಜಮುಖಿ ಚಟುವಟಿಕೆಗಳಿಂದ ಫೌಂಡೇಶನ್ ಶಕ್ತಿ ಹೆಚ್ಚುತ್ತದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಅವರು ಮಾತನಾಡಿ, ಅಸ್ಕಿಯವರು ತಮ್ಮ ಸ್ವಗ್ರಾಮ ಕೊಣ್ಣೂರಲ್ಲಿ ಮೊದಲ ಬಾರಿಗೆ ಇಫ್ತಿಯಾರ್ ಸೌಹಾರ್ದ ಕೂಟ ಪ್ರಾರಂಭಿಸಿದರು. ಇತ್ತೀಚಿನ ದಿನಗಳಲ್ಲಿ ಇಂಥ ಇಫ್ತಿಯಾರ್ ಏರ್ಪಡಿಸಿ ಸಾಮೂಹಿಕ ಶಹರಿ ಭೋಜನದ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಹೆಚ್ಚುತ್ತಿದೆ. ಮೊದಲೆಲ್ಲ ಉಪವಾಸ ವೃತಧಾರಿಗಳು ಒಂದೆಡೆ ಸಾಮೂಹಿಕವಾಗಿ ಸೇರಿ ಇಫ್ತಿಯಾರನಲ್ಲಿ ಭಾಗವಹಿಸುತ್ತಿದ್ದರು. ಆದರೆ ಈಗ ಮಸೀದಿ ಇರುವ ಬಡಾವಣೆಯಲ್ಲೇ ಅಲ್ಲಿನವರು ಸೇರಿ ಇಫ್ತಿಯಾರ್ ಹಮ್ಮಿಕೊಳ್ಳುತ್ತಿದ್ದಾರೆ. ಇದು ಒಳ್ಳೇಯ ಬೆಳವಣಿಗೆ ಎಂದರು.
ಮೌಲಾನಾ ಅಲ್ಲಾಭಕ್ಷ ಖಾಜಿ ಅವರು ಮಾತನಾಡಿ ಎಲ್ಲೇ ಅವಘಡ, ದುರಂತ ಸಂಭವಿಸಿದರೂ ಅಸ್ಕಿಯವರು ಅಲ್ಲಿಗೆ ತೆರಳಿ ನೊಂದ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಸಾಂತ್ವನ ಹೇಳುವ ಮೂಲಕ ಸಹಾಯ ಹಸ್ತ ಚಾಚುತ್ತಿರುವುದು ಅವರ ಸಮಾಜಮುಖಿ ಚಟುವಟಿಕೆಯ ಮಹತ್ವ ತಿಳಿಸಿಕೊಡುತ್ತದೆ. ಅವರ ಫೌಂಡೇಶನ್ ಸಮಾಜಮುಖಿ ಸೇವೆಯಲ್ಲಿ ಮುಂದಿರುವುದು ಹೆಮ್ಮೆಯ ಸಂಗತಿ. ಅವರು ಹಿಂದು ಸಮುದಾಯಕ್ಕೆ ಸೇರಿದ್ದರೂ ಮುಸ್ಲೀಮ್ ಸಮುದಾಯದ ಬಗ್ಗೆ ತೋರಿಸುತ್ತಿರುವ ಕಾಳಜಿ ಸೌಹಾರ್ದತೆಗೆ ಕನ್ನಡಿ ಹಿಡಿದಂತಿದೆ ಎಂದರು.
ಮೌಲಾನಾ ಮಾಗಿ, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸರ್ಕಾರಿ ಆಸ್ಪತ್ರೆಯ ನಾಮ ನಿರ್ದೇಶಿತ ಸದಸ್ಯ ರಫೀಕ್ ಶಿರೋಳ, ಢವಳಗಿಯ ನಾನಾಗೌಡ ಕೊಣ್ಣೂರ, ಬಾಂಬೇಗೌಡ ಬಿರಾದಾರ, ಜಬ್ಬಾರ್ ಗೋಲಂದಾಜ, ಹುಸೇನ್ ಮುಲ್ಲಾ, ಗ್ಯಾರಂಟಿ ಸಮಿತಿ ಸದಸ್ಯ ಸಂಗಪ್ಪ ಮೇಲಿನಮನಿ, ಬಬ್ಲು ಹುಣಚಗಿ, ಮಹಮ್ಮದ್ ನಾಗರಾಳ ಇನ್ನಿತರರು ಇದ್ದರು.
ಜನ ಬಯಸಿದರೆ 2028ರಲ್ಲಿ ಚುನಾವಣೆಗೆ ಸ್ಪರ್ಧೆ:
2028ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ಇದೆಯೇ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿ.ಬಿ.ಅಸ್ಕಿ ಅವರು ಸಧ್ಯಕ್ಕೆ ಆ ಚಿಂತನೆ ಇಲ್ಲ. 2018ರಲ್ಲಿ ಸ್ಪರ್ಧಿಸುವ ಅಪೇಕ್ಷೆ ಹೊಂದಿ ಆ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿದ್ದು ನಿಜ. ಆದರೆ 2023ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಸಿ.ಎಸ್.ನಾಡಗೌಡರ ಗೆಲುವಿಗೆ ಶ್ರಮಿಸಿದ್ದೇನೆ. ಕಳೆದ 15 ವರ್ಷಗಳಿಂದ ನಮ್ಮ ಫೌಂಡೇಶನ್ ಮೂಲಕ ಹಲವು ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿದ್ದೇನೆ. ನೊಂದವರ ಸಂಕಷ್ಟದಲ್ಲಿ ಸ್ವಲ್ಪಮಟ್ಟಿಗಾದರೂ ಭಾಗಿಯಾಗಿರುವ ತೃಪ್ತಿ ಇದೆ. ಆದರೆ ಆ ಸಮಾಜಸೇವೆಯ ಹಿಂದೆ ರಾಜಕೀಯ ಉದ್ದೇಶ ಕಿಂಚಿತ್ತೂ ಇಲ್ಲ. 2028ರ ವೇಳೆಗೆ ವಾತಾವರಣ ಹೇಗಿರುತ್ತದೆ ಅನ್ನೋದನ್ನು ಈಗಲೇ ಹೇಳುವುದು ಸಾಧ್ಯವಿಲ್ಲ. ಸಧ್ಯಕ್ಕಂತೂ ನಾನು ಆಕಾಂಕ್ಷಿ ಅಲ್ಲ. ಆದರೆ ಚುನಾವಣೆ ಸಂದರ್ಭ ಜನ ಅಪೇಕ್ಷೆ ಪಟ್ಟರೆ, ಜನರು ನನ್ನ ಮೇಲೆ ಪ್ರೀತಿ, ವಿಶ್ವಾಸ ತೋರಿಸಿದರೆ ಎಂಎಲ್ಎ ಸ್ಥಾನಕ್ಕೆ ಸ್ಪರ್ಧಿಸುವ ಚಿಂತನೆ ನಡೆಸುತ್ತೇನೆ. ಆ ಸಂದರ್ಭ ಬಂದರೆ ಮಾಧ್ಯಮದ ಸ್ನೇಹಿತರ ಮೂಲಕವೇ ಜನತೆಗೆ ತಿಳಿಸುತ್ತೇನೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.
ವರದಿ: ಮುತ್ತು ವಡವಡಗಿ ಮೋ:9880143505

