ಮುದ್ದೇಬಿಹಾಳ: ಅನಾಥ ವಯೋವೃದ್ದರಿಗೆ ಕೈಲಾದ ಸಹಾಯ ಮಾಡುವ ಮನೋಭಾವ ಸಹಾಯ ಮಾಡುವವರಿಗೆ ಆತ್ಮಸಂತೃಪ್ತಿ ತಂದು ಕೊಡುತ್ತದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಕಿತ್ತೂರು ಕರ್ನಾಟಕ ಮಹಿಳಾ ಘಟಕದ ಅಧ್ಯಕ್ಷೆ, ಬಿಜೆಪಿಯ ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಕಾಶಿಬಾಯಿ ಶಿವಯೋಗೆಪ್ಪ ರಾಂಪೂರ ಹೇಳಿದರು. ಇಲ್ಲಿನ ನೇತಾಜಿ ನಗರ ಬಡಾವಣೆಯಲ್ಲಿರುವ ಗರಡಿ ಮನೆಯ ಹತ್ತಿರ ಅನಾಥ ವಯೋವೃದ್ಧರಿಗೆ ಮಹಾಶಿವರಾತ್ರಿ ಅಂಗವಾಗಿ ಆಹಾರ ಧಾನ್ಯ, ಬಟ್ಟೆಯ ಕಿಟ್ ವಿತರಿಸಿ ಅವರು ಮಾತನಾಡಿದರು. ಪ್ರತಿ ವರ್ಷ ಈ ರೀತಿಯ ಸಮಾಜ ಸೇವೆ ಮಾಡುತ್ತಿದ್ದೇನೆ. ಮಕ್ಕಳಿದ್ದೂ ನೋಡಿಕೊಳ್ಳದ ತಂದೆ, ತಾಯಿ ಇದ್ದಾರೆ. ಕೆಲವೊಬ್ಬರಿಗೆ ಮಕ್ಕಳೇ ಇರುವುದಿಲ್ಲ. ಇಂಥವರಿಗೆ ಕೈಲಾದ ಮಟ್ಟಿಗೆ ಈ ನೆರವನ್ನು ಕಳೆದ 30-32 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇನೆ. ಇದರಲ್ಲಿ ನಾನು ಸಂತೃಪ್ತಿ ಕಾಣುತ್ತೇನೆ. ದಶಕಗಳ ಹಿಂದೆ ನಮ್ಮ ಮನೆಗೆ ವಯೋವೃದ್ದೆಯೊಬ್ಬಳು ಭಿಕ್ಷೆ ಬೇಡಲು ಬರುತ್ತಿದ್ದಳು. ಇದನ್ನು ಕಂಡು ಆಕೆಗೆ ಯಾರ ಮನೆಗೂ ಭಿಕ್ಷೆ ಕೇಳಲು ಹೋಗದಂತೆ, ನೇರವಾಗಿ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗುವಂತೆ ಹೇಳಿದ್ದೆ. ಆಕೆ ಸಾಯುವವರೆಗೂ ನಮ್ಮ ಮನೆಗೆ ಬಂದು ಹೊಟ್ಟೆ ಹಸಿದಾಗಲೆಲ್ಲ ಊಟ ಮಾಡಿ ಹೋಗುತ್ತಿದ್ದಳು. ಆ ಘಟನೆ ನನ್ನ ಈ ಸಮಾಜ ಸೇವೆಗೆ ಪ್ರೇರಣೆ ನೀಡಿದೆ. ಪ್ರತಿ ವರ್ಷ ಬೇರೆ ಬೇರೆ ಕಡೆ ಈ ಸೇವೆ ಮಾಡುತ್ತಿದ್ದೆ. ಈ ವರ್ಷ ಇಲ್ಲಿ ಮಾಡುವ ಸಂಕಲ್ಪ ತೊಟ್ಟುಕೊಂಡು, ನಮ್ಮ ಹಿತೈಷಿಗಳ ಸಲಹೆ ಮೇರೆಗೆ ಈ ಕೆಲಸ ಮಾಡಿದ್ದೇನೆ. ಇದು ಇತರರಿಗೂ ಪ್ರೇರಣೆ ಆದರೆ ನಮ್ಮ ಸೇವೆ ಸಾರ್ಥಕತೆ ಕಾಣುತ್ತದೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ, ವಿಶ್ವ ಹಿಂದು ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಶಿವಯೋಗೆಪ್ಪ ರಾಂಪೂರ, ಭೋವಿ ವಡ್ಡರ ಸಮಾಜದ ಉಪಾಧ್ಯಕ್ಷ ಶೇಖರ ಢವಳಗಿ, ಕಸ್ತೂರಿ ಕಲಾಲ, ಅನಸವ್ವ ಅಂಬಿಗೇರ, ರೇಣುಕಾ ಮಹಾಲಿಂಗಪುರ, ಮರಗವ್ವ ಬಳಬಟ್ಟಿ, ಲಕ್ಷ್ಮೀಬಾಯಿ ವಡ್ಡರ, ಭೀಮಶಿ ಪಾತ್ರೋಟಿ, ಬೇಬಿ ಹಡಲಗೇರಿ, ಲಕ್ಷ್ಮೀಬಾಯಿ ಹಡಲಗೇರಿ, ಶಾರಮ್ಮ ತಾಳಿಕೋಟಿ ಇನ್ನಿತರರು ಇದ್ದರು.
–

