“ಸಾಮಾಜಿಕ ನ್ಯಾಯವೇ ಶಾಂತಿ ಮತ್ತು ಪ್ರಗತಿಯ ಮೂಲಾಧಾರ”
ಸಾಮಾಜಿಕ ನ್ಯಾಯ ದಿನ ಎಂಬುದು ಸಮಾನತೆ, ಸಮಾನ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಸ್ಮರಿಸುವ ದಿನವಾಗಿದೆ.
ಸಮಾಜದಲ್ಲಿ ಜಾತಿ, ಧರ್ಮ, ಲಿಂಗ, ವರ್ಗ ಎಂಬ ಬೇಧಗಳನ್ನು ಮರೆತು ಪ್ರತಿಯೊಬ್ಬರೂ ಗೌರವದಿಂದ ಬದುಕುವ ಹಕ್ಕು ಹೊಂದಿದ್ದಾರೆ ಎಂಬ ಸಂದೇಶವನ್ನು ಈ ದಿನ ಒತ್ತಿ ಹೇಳುತ್ತದೆ.
ನಮ್ಮ ಭಾರತೀಯ ಸಂವಿಧಾನವು ಸಾಮಾಜಿಕ ನ್ಯಾಯಕ್ಕೆ ವಿಶೇಷ ಸ್ಥಾನಮಾನ ನೀಡಿದೆ. ಅದರ ಶಿಲ್ಪಿಯಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಸಂವಿಧಾನದಲ್ಲಿ ಅಡಕಗೊಳಿಸಿದರು.
ದಲಿತರು, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಶೋಷಿತ ಸಮುದಾಯಗಳ ಹಕ್ಕುಗಳನ್ನು ಕಾಪಾಡುವ ದೃಢಸಂಕಲ್ಪದಿಂದ ಅವರು ನ್ಯಾಯಸಮ್ಮತ ವ್ಯವಸ್ಥೆಯನ್ನು ರೂಪಿಸಿದರು.
ಜಾತಿ ಬೇಧ, ಲಿಂಗ ತಾರತಮ್ಯ ಹಾಗೂ ಸಾಮಾಜಿಕ ಅನ್ಯಾಯಗಳನ್ನು ನಿವಾರಿಸಲು ಸಂವಿಧಾನವು ಬಲವಾದ ಕಾನೂನುಬದ್ಧ ಆಧಾರವನ್ನು ಒದಗಿಸಿದೆ.
ಇದೇ ಮೌಲ್ಯಗಳನ್ನು 12ನೇ ಶತಮಾನದಲ್ಲೇ ಜಗತ್ತಿಗೆ ಸಾರಿದ ಮಹಾನ್ ವಚನಕಾರರು ಬಸವಣ್ಣ. ಅವರು ಸ್ಥಾಪಿಸಿದ ಅನುಭವ ಮಂಟಪವು ವಿಶ್ವದ ಮೊದಲ ಪ್ರಜಾಸತ್ತಾತ್ಮಕ ಚಿಂತನಾ ವೇದಿಕೆಯೆಂದು ಪರಿಗಣಿಸಲಾಗುತ್ತದೆ. ಅಲ್ಲಿ ಜಾತಿ, ಲಿಂಗ, ವರ್ಗ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವಿತ್ತು. ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಸಮಾನತೆಯ ಸಂದೇಶವನ್ನು ಅವರು ಸಾರಿದರು.
ಸಾಮಾಜಿಕ ನ್ಯಾಯ ದಿನವು ಕೇವಲ ಆಚರಣೆಗಷ್ಟೇ ಸೀಮಿತವಲ್ಲ; ಅದು ನಮ್ಮ ಜೀವನದಲ್ಲಿ ಅನುಸರಿಸಬೇಕಾದ ನೈತಿಕ ಮೌಲ್ಯ. ಜಾತಿ ಬೇಧ ಮರೆತು, ಲಿಂಗ ಸಮಾನತೆ ಪಾಲಿಸಿ, ದಲಿತರ ಮತ್ತು ಹಿಂದುಳಿದವರ ಹಕ್ಕುಗಳನ್ನು ಗೌರವಿಸಿ, ಎಲ್ಲರೂ ಒಟ್ಟಾಗಿ ಸಾಗುವ ಸಮಾಜವನ್ನು ನಿರ್ಮಿಸುವುದು ನಮ್ಮ ಕರ್ತವ್ಯ.
ಸಮಾನತೆ, ಸಹಾನುಭೂತಿ ಮತ್ತು ನ್ಯಾಯದ ಮಾರ್ಗದಲ್ಲಿ ನಡೆದು, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಸಾಮಾಜಿಕ ನ್ಯಾಯ ದಿನದ ನಿಜವಾದ ಅರ್ಥವಾಗಿದೆ.
ಲೇಖನ.
ಆಂಜನೇಯ ಮಟ್ಟೂರ
ಶಿಕ್ಷಕರು. ಗಂಗಾವತಿ.

